ತಪ್ಪಿದ ಕೆಜಿ ಲೆಕ್ಕದಿಂದ ಡಿಕೆಶಿಗೆ ಇ.ಡಿ ಹಿಡಿತ

ಬೆಂಗಳೂರು: ಐಟಿ ದಾಳಿ ವೇಳೆ ಸಿಕ್ಕ ಡೈರಿಯಲ್ಲಿ ಬರೆದಿದ್ದ ಕೆಜಿ ಕೋಡ್​ವರ್ಡ್ ವಿಚಾರವಾಗಿ ಒಬ್ಬೊಬ್ಬರು ಒಂದೊಂದು ರೀತಿ ಅನುಮಾನಾ ಸ್ಪದ ಹೇಳಿಕೆ ನೀಡಿದ್ದರಿಂದ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತರಿಗೆ ಈಗ ಜಾರಿ ನಿರ್ದೇಶನಾಲಯ (ಇಡಿ) ಸಂಕಷ್ಟ ಶುರುವಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ದೆಹಲಿಯ ಸಫ್ದರ್​ಜಂಗ್​ನ ಫ್ಲಾ್ಯಟ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಪತ್ತೆಯಾದ 8.59 ಕೋಟಿ ರೂ. ಡಿ.ಕೆ. ಶಿವಕುಮಾರ್​ಗೆ ಸೇರಿದ್ದು ಎಂಬುದಕ್ಕೆ ಐಟಿ ಅಧಿಕಾರಿಗಳ ಬಳಿ ಕೆಲ ಸಾಕ್ಷಿಗಳಿವೆ. ದೆಹಲಿಯ ಆಂಜನೇಯ ಹನುಮಂತಯ್ಯ ಮನೆ ಮೇಲೆ ಐಟಿ ದಾಳಿ ನಡೆಸಿದಾಗ ದೊರೆತ ಡೈರಿಯಲ್ಲಿ ಉಲ್ಲೇಖಿಸಿದ್ದ ಕೆಜಿ ಕೋಡ್​ವರ್ಡ್ ಬಳಸಿ ಆರೋಪಿಗಳು ನಗದು ವ್ಯವಹಾರ ನಡೆಸುತ್ತಿದ್ದಾರೆ ಎಂಬ ಅನುಮಾನದ ಮೇರೆಗೆ ಡಿ.ಕೆ. ಶಿವಕುಮಾರ್ ಮತ್ತು ಉಳಿದ ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿತ್ತು.

ಆದರೆ, ನಾಲ್ವರೂ ಈ ಬಗ್ಗೆ ಗೊಂದಲದ ಉತ್ತರ ನೀಡಿದ್ದರು. ಕೆಲ ವಸ್ತುಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಆ ವಸ್ತುಗಳ ಲೆಕ್ಕವನ್ನು ಡೈರಿಯಲ್ಲಿ ಕೆಜಿ ಲೆಕ್ಕದಲ್ಲಿ ನಮೂದಿಸಲಾಗಿದೆ ಎಂದು ಸುನೀಲ್ ಶರ್ಮ ಮತ್ತು ರಾಜೇಂದ್ರ ವಿಚಾರಣೆ ವೇಳೆ ಸುಳ್ಳು ಮಾಹಿತಿ ನೀಡಿದ್ದರು. ಶಿವಕುಮಾರ್ ಸಹ ತಪ್ಪು ಮಾಹಿತಿ ನೀಡಿದ್ದರು. ಆಂಜನೇಯ ಮಾತ್ರ ಲಕ್ಷಕ್ಕೆ ಕೆಜಿ ಎಂಬ ಕೋಡ್​ವರ್ಡ್ ಬಳಸಿರುವುದನ್ನು ವಿವರಿಸಿದ್ದರು.

ಗೊಂದಲದ ಉತ್ತರ: ಆಂಜನೇಯ, ಸುನೀಲ್ ಶರ್ಮಾ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ಅಪಾರ್ಟ್​ವೆುಂಟ್​ನ ಫ್ಲಾ್ಯಟ್​ನಲ್ಲಿ ಸಿಕ್ಕಿದ ಹಣ ನಮ್ಮದಲ್ಲ ಎಂದಿದ್ದರು. ದಾಳಿ ನಡೆದು 30 ದಿನದ ಬಳಿಕ ಅಪಾರ್ಟ್ ಮೆಂಟ್ ಫ್ಲಾ್ಯಟ್​ನಲ್ಲಿ ದೊರೆತ ಹಣ ನಮಗೆ ಸೇರಿದ್ದಾಗಿದೆ. ಒತ್ತಡದಲ್ಲಿ ಏನೋ ಹೇಳಿಕೆ ನೀಡಿದ್ದೇವೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಪತ್ರ ಮುಖೇನ ಆರೋಪಿಗಳು ತಿಳಿಸಿದ್ದರು. ಪತ್ರದಲ್ಲಿ ಬರೆದಿದ್ದ ಹೇಳಿಕೆಗಳಿಗೂ ಅಧಿಕಾರಿಗಳ ಮುಂದೆ ವಿಚಾರಣೆ ವೇಳೆ ನೀಡಿದ ಹೇಳಿಕೆಗೂ ಅಜಗಜಾಂತರ ವ್ಯತ್ಯಾಸ ಕಂಡು ಬಂದಿತ್ತು. ಆಂಜನೇಯ ಡೈರಿಯಿಂದ ಹವಾಲಾ ವ್ಯವಹಾರ ನಡೆಸಿರುವ ಬಗ್ಗೆ ಮಾಹಿತಿ ಬಹಿರಂಗಗೊಂಡಿತ್ತು. 8.5 ಕೋಟಿ ರೂ.ಗೆ ಲೆಕ್ಕ ಕೊಡುವಂತೆ ಐಟಿ ಇಲಾಖೆ 4 ನೋಟಿಸ್ ಜಾರಿ ಮಾಡಿದರೂ, ಆರೋಪಿಗಳು ಸಮರ್ಪಕವಾದ ಹೇಳಿಕೆ ನೀಡಿರಲಿಲ್ಲ.

ಹವಾಲಾ ದಂಧೆ ಹೇಗೆ?: ಸಾಮಾನ್ಯವಾಗಿ ಹವಾಲಾ ದಂಧೆ ನಡೆಸುವವರು ಗುರುತಿಗೆ 10 ರೂ.ಗಳ ನೋಟುಗಳನ್ನು ಬಳಸುತ್ತಾರೆ. ಹಣ ನೀಡುವವನು ಮೊಬೈಲ್​ನಲ್ಲಿ ತನ್ನ ಬಳಿ ಇರುವ 10 ರೂ. ನೋಟಿನ ಫೋಟೋ ತೆಗೆದು ವಾಟ್ಸ್ ಆಪ್ ಮೂಲಕ ಹಣ ಪಡೆಯುವವನಿಗೆ ಕಳುಹಿಸುತ್ತಾನೆ. ಹಣ ಪಡೆಯುವವನು ತನಗೆ ವಾಟ್ಸ್​ಆಪ್​ನಲ್ಲಿ ಬಂದ 10 ರೂ. ನೋಟಿನ ಚಿತ್ರವನ್ನು ತೆಗೆದುಕೊಂಡು ಬರುವ ಮಧ್ಯವರ್ತಿಗೆ ತೋರಿಸುತ್ತಾನೆ. ಈ ಆಧಾರದ ಮೇಲೆ ಮಧ್ಯವರ್ತಿ ಹಣವನ್ನು ಈತನಿಗೆ ನೀಡುತ್ತಾನೆ. ಸಚಿವರು ಆಪ್ತರೊಂದಿಗೆ ಸೇರಿಕೊಂಡು ಇದೇ ರೀತಿಯಾಗಿ ಹವಾಲಾ ದಂಧೆಯಲ್ಲಿ ತೊಡಗಿರುವುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಐಟಿ ಅಧಿಕಾರಿಗಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆಕ್ಷೇಪಣೆ ಸಲ್ಲಿಕೆ: ದೆಹಲಿಯಲ್ಲಿ ದೊರೆತ 8.59 ಕೋಟಿ ರೂ. ಪ್ರಕರಣವಲ್ಲದೆ ಆದಾಯ ತೆರಿಗೆ ಅಧಿಕಾರಿಗಳು ಈ ಹಿಂದೆ ಶಿವಕುಮಾರ್ ವಿರುದ್ಧ ನ್ಯಾಯಾಲಯದಲ್ಲಿ ಮೂರು ಪ್ರಕರಣ ದಾಖಲಿಸಿದ್ದರು. ಡಿ.ಕೆ. ಶಿವಕುಮಾರ್ ಪರ ವಕೀಲ ಶೇಷಾಚಲ ಬುಧವಾರ (ಸೆ.19) ಈ ಮೂರು ಪ್ರಕರಣಕ್ಕೆ ಸಂಬಂಧಿಸಿ ಶಾಸಕರು ಮತ್ತು ಸಂಸದರ ವಿರುದ್ಧದ ಪ್ರಕರಣದ ವಿಶೇಷ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಮೂರು ಪ್ರತ್ಯೇಕ ಪ್ರಕರಣಗಳಿಗೂ ತಲಾ ಎಂಟು ಪುಟಗಳ ಆಕ್ಷೇಪಣೆ ಸಲ್ಲಿಸಿದ್ದಾರೆ.

ವಕೀಲರ ವಾದ

ಮೂರು ವರ್ಷವೂ ಐಟಿ ರಿಟರ್ನ್ಸ್ ಸಲ್ಲಿಸಿದ್ದು, ಯಾವುದೇ ವ್ಯವಹಾರ ಮುಚ್ಚಿಡಲಿಲ್ಲ. ಹರಿದು ಹಾಕಿದ ಕಾಗದದಲ್ಲಿ ಮಹತ್ವದ ವ್ಯವಹಾರದ ಮಾಹಿತಿ ಇರಲಿಲ್ಲ. ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಐಟಿ ಅಧಿಕಾರಿಗಳು ದೂರು ದಾಖಲಿಸಿ ಕೊಂಡಿದ್ದಾರೆ. ತಪ್ಪು ಮಾಡಿರದ ಕಾರಣ ಡಿಕೆಶಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂಬುದು ಡಿಕೆಶಿ ಪರ ವಕೀಲರ ವಾದವಾಗಿದೆ.

ದೆಹಲಿಯ ಫ್ಲಾ್ಯಟ್​ನಲ್ಲಿ ಸಿಕ್ಕಿರುವ ಕೋಟ್ಯಂತರ ರೂಪಾಯಿಯನ್ನು ಅಸ್ತ್ರವಾಗಿ ಬಳಸಿಕೊಂಡಿರುವ ಇಡಿ ಅಧಿಕಾರಿಗಳು, ಸಚಿವರಿಗೆ ಸಮನ್ಸ್ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ. 8.59 ಕೋಟಿ ರೂ. ರಾಜ್ಯದಿಂದ ದೆಹಲಿಗೆ ಸಾಗಾಟ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಪ್ರಕರಣದ ತನಿಖೆ ನಡೆಸಲು ದೆಹಲಿ ಇಡಿ ಅಧಿಕಾರಿಗಳು ಬೆಂಗಳೂರಿಗೆ ಬರುವ ಸಾಧ್ಯತೆಗಳಿವೆ. ಶಿವಕುಮಾರ್ ಹವಾಲಾ ದಂಧೆಯಲ್ಲಿ ತೊಡಗಿರುವ ಬಗ್ಗೆ ಮಾಹಿತಿ ದೊರೆತ ಕೂಡಲೇ ಇಡಿ ಅಧಿಕಾರಿಗಳು ಆದಾಯ ತೆರಿಗೆ ಇಲಾಖೆ ಮುಖ್ಯಸ್ಥರಿಂದ ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಇಡಿ ವಿಚಾರಣೆ ವೇಳೆ ಸೂಕ್ತ ರೀತಿಯಲ್ಲಿ ಉತ್ತರಿಸದಿದ್ದರೆ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸುವ ಸಾಧ್ಯತೆಗಳಿವೆ.


ಬೆಂಗಳೂರತ್ತ ಇಡಿ ಅಧಿಕಾರಿಗಳು? ನಾನು ಪ್ರಾಮಾಣಿಕ, ಓಡಿ ಹೋಗಲ್ಲ

ಬೆಂಗಳೂರು 11 ನಾನು ಪ್ರಾಮಾಣಿಕ. ನನ್ನ ಪ್ರತಿ ರೂಪಾಯಿಗೂ ಲೆಕ್ಕವಿದೆ. ಕೇಂದ್ರದ ಸ್ವಾಯತ್ತ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಮಾಡುತ್ತಿರುವ ಷಡ್ಯಂತ್ರಕ್ಕೆ ನಾನು ಬಗ್ಗುವವನಲ್ಲ. ಇವರಿಗೆ ಹೆದರಿ ಎಲ್ಲೂ ಓಡಿಹೋಗಲ್ಲ. ಇಲ್ಲೇ ಇದ್ದು ಎದುರಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ತಾ ಮಾಡಿದ ಆರೋಪಗಳ ಹಾಗೂ ಇನ್ನೆರಡು ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಬಂಧನವಾಗುತ್ತದೆ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಅಸಮಾಧಾನ ಹೊರಹಾಕಿದ ಡಿಕೆಶಿ, ನನ್ನ ಮನೆಯಲ್ಲಿ 41 ಲಕ್ಷ ರೂ. ಸಿಕ್ಕಿದ್ದು, ದಾಖಲೆ ನೀಡಲಾಗಿದೆ. ನನ್ನ ಸ್ನೇಹಿತನ ಬಳಿ 1 ಕೋಟಿ ರೂ. ಸಿಕ್ಕಿತ್ತು. ನನ್ನ ಪ್ರತಿ ರೂಪಾಯಿಗೂ ದಾಖಲೆ ಇದೆ ಎಂದರು.

ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ. ಯಡಿಯೂರಪ್ಪನವರೇ ನಾನು ಓಡಿಹೋಗಲ್ಲ. ನನ್ನ ಬಂಧನವಾಗುತ್ತದೆ ಎಂಬುದು ನಿಮ್ಮ ಹಗಲುಗನಸು. ನನ್ನನ್ನು ಜೈಲಿಗೆ ಕಳಿಸುತ್ತೀರಾ? ಅದಕ್ಕೆ ನಾನು ಹೆದರಲ್ಲ ಎಂದರು.

ನೋಟಿಸ್ ಬಂದಿಲ್ಲ: ಈ ಡಿ.ಕೆ.ಶಿವಕುಮಾರ್​ನನ್ನು ಹಣಿಯಲು ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಿಜೆಪಿಯವರು ಬಳಕೆ ಮಾಡಿಕೊಳ್ಳುತ್ತಿದ್ದಾರೆಂಬುದರಲ್ಲಿ ಅನುಮಾನವೇ ಇಲ್ಲ. ಜಾರಿ ನಿರ್ದೇಶನಾಲಯದಿಂದ ಈವರೆಗೆ ಯಾವುದೇ ನೋಟಿಸ್ ಬಂದಿಲ್ಲ. ವಿಚಾರಣೆಗೆ ಹಾಜರಾಗುವಂತೆ ಕರೆದರೆ ಹೋಗುತ್ತೇನೆ. ಅವರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ. ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬೀಳಿಸದಿರಲು ನಾನು ಅಡ್ಡಿಯಾಗಿದ್ದೇನೆ ಎಂಬ ಕಾರಣಕ್ಕೆ ಈ ಯತ್ನ ನಡೆಯುತ್ತಿದೆ. ಅದಕ್ಕೆ ಅವಕಾಶ ಇಲ್ಲ. ನಾನು ಏನೇ ಇದ್ದರೂ ಎದುರಿಸುತ್ತೇನೆ. ಗುಜರಾತ್ ಚುನಾವಣೆ ನಂತರ ನನ್ನ ವಿರುದ್ಧ ನಡೆಯುತ್ತಿರುವ ಬೆಳವಣಿಗೆ ಬೇಸರ ತಂದಿದೆ ಎಂದು ಡಿಕೆಶಿ ಹೇಳಿದರು.

ಸಿಬ್ಬಂದಿ ಹೇಳಿಕೆಗೆ ಸಂಬಂದ ಇಲ್ಲ: ನನ್ನ ಹಾಗೂ ನನ್ನ ಕುಟುಂಬದವರು ಹಿತೈಷಿಗಳಿಗೆ ಹೇಳಿಕೆಗಳನ್ನು ನೀಡುವಂತೆ ಹಿಂಸೆ ನೀಡಲಾಗುತ್ತಿದೆ. ಬಲವಂತವಾಗಿ ಹೇಳಿಕೆ ಪಡೆಯಲಾಗುತ್ತಿದೆ. ದೆಹಲಿಯಲ್ಲಿ ಸಿಬ್ಬಂದಿ ನೀಡಿದ ಹೇಳಿಕೆಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದರು.

ರಾಜಿಯಾದರೆ ಸಮಸ್ಯೆಯೇ ಇಲ್ಲ: ಈಗಲೂ ನಾನು ಕೆಲ ವಿಚಾರಗಳಿಗೆ ರಾಜಿಯಾದರೆ ನನ್ನೆಲ್ಲ ಸಮಸ್ಯೆಗಳು ತೀರಿ ಹೋಗಲಿವೆ. ಆದರೆ, ನಾನು ಅಪ್ರಾಮಾಣಿಕನಲ್ಲ. ಎಂದಿಗೂ ಪಕ್ಷ ನಿಷ್ಠೆ ಬಿಡುವುದಿಲ್ಲ. ಜತೆಗೆ ಬಿಜೆಪಿಯವರು ನಮ್ಮ ಶಾಸಕರಿಗೆ ನೀಡಿದ ಆಮಿಷ, ಕೊಡಲಿದ್ದ ಮೊತ್ತ, ಸ್ಥಾನಮಾನದ ವಿವರ ಸೇರಿ ಎಲ್ಲವನ್ನೂ ಮುಂದಿನ ದಿನದಲ್ಲಿ ದಾಖಲೆ ಸಹಿತ ನೀಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಬಿಜೆಪಿ ನಾಯಕರು ಜಡ್ಜ್​ಗಳಾಗಿದ್ದಾರೆ. ನನ್ನನ್ನು ಜೈಲಿಗೆ ಕಳುಹಿಸುವುದೇ ಅವರ ಉದ್ದೇಶ. ಅವರಿಗೆ ಒಳ್ಳೆಯದಾಗಲ್ಲ. ನಾನೀಗ ಮೊದಲ ಡೋಸ್ ಕೊಟ್ಟಿದ್ದೇನೆ, ಮುಂದೆ ಅವಕಾಶ ಸಿಕ್ಕಾಗ ಹೇಳುವುದಕ್ಕೆ ಸಾಕಷ್ಟಿದೆ.

| ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ ಸಚಿವ

ಡೈರಿ ಅಂಶ ಬಹಿರಂಗಪಡಿಸುವೆ

ಡೈರಿಯನ್ನು ಬಿಜೆಪಿ ನಾಯಕರು ಸೃಷ್ಟಿಸಿದ್ದಾರೆ. ನನ್ನ ಮನೆಯಲ್ಲಿ ಐಟಿ ಅಧಿಕಾರಿಗಳು ವಶಪಡಿಸಿಕೊಂಡ ಡೈರಿಯಲ್ಲಿ ಏನೆಲ್ಲ ಅಂಶಗಳಿವೆೆ ಎಂಬುದನ್ನು ನಾನೇ ಬಹಿರಂಗ ಮಾಡುತ್ತೇನೆ. ಆರ್.ಜಿ., ಎಸ್.ಜಿ ಎಂದೆಲ್ಲ ನಮ್ಮ ನಾಯಕರನ್ನು ತಳುಕು ಹಾಕಬೇಡಿ. ಅವರಿಗೆ ನಾನು ಯಾವ ಹಣವನ್ನೂ ಕೊಟ್ಟಿಲ್ಲ. ಡೈರಿ ಬಗ್ಗೆ ಗೊತ್ತಿದ್ದರೆ ಬಿಜೆಪಿಯವರೇ ಹೇಳಲಿ. ಅವರು ತಪ್ಪು ಮಾಡಿಲ್ಲವೇ? ನನ್ನ ಬಳಿಯೂ ಸಾಕಷ್ಟು ಮಾಹಿತಿ ಇದೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ತಪ್ಪಿದ ಕೆಜಿ ಲೆಕ್ಕದಿಂದ ಡಿಕೆಶಿಗೆ ಇ.ಡಿ ಹಿಡಿತ

ನಾನು ಹೆದರಿ ಆಸ್ಪತ್ರೆ ಸೇರಿಲ್ಲ. ಆರೋಗ್ಯ ಚೆನ್ನಾಗಿಲ್ಲ. 40 ಸಾರಿ ಭೇದಿಯಾಗಿದೆ. 15 ಸಾರಿ ವಾಂತಿ ಮಾಡಿಕೊಂಡು ದುರ್ಬಲವಾಗಿದ್ದೇನೆ. ಮತ್ತೆ ಆಸ್ಪತ್ರೆಗೆ ಹೋಗಬೇಕು. ಮಾಹಿತಿ ನೀಡುವ ಉದ್ದೇಶದಿಂದ ಬಂದಿದ್ದೇನೆ ಎಂದು ವಿವರಿಸಿದರು.

ಕಾಂಗ್ರೆಸ್ ಹೈಕಮಾಂಡ್​ಗೆ ಕರ್ನಾಟಕದಿಂದ ಹವಾಲಾ

ನವದೆಹಲಿ: ಕಾಂಗ್ರೆಸ್ ಕೇಂದ್ರ ಕಚೇರಿಗೆ ಕರ್ನಾಟಕದಿಂದ ಹವಾಲಾ ಮಾರ್ಗದಲ್ಲಿ ಹಣ ಪೂರೈಕೆ ಆಗುತ್ತಿದೆ ಎಂದು ಬಿಜೆಪಿ ಆಪಾದಿಸಿದೆ. ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿರುವ ಬೆನ್ನಿಗೆ ಬಿಜೆಪಿ ಈ ಆರೋಪ ಮಾಡಿದೆ. ಆದಾಯ ತೆರಿಗೆ ಇಲಾಖೆ ಮುಂದೆ ಶಿವಕುಮಾರ್ ಆಪ್ತರೇ ತಪು್ಪ ಒಪ್ಪಿಕೊಂಡಿದ್ದಾರೆ. ಆದರೂ ಈ ಬಗ್ಗೆ ಕಾಂಗ್ರೆಸ್ ವರಿಷ್ಠರು ಏಕೆ ತುಟಿಬಿಚ್ಚುತ್ತಿಲ್ಲ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ದಿನನಿತ್ಯ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಾರೆ. ಆದರೆ, ಕರ್ನಾಟಕದಲ್ಲಿ ಪಕ್ಷದ ಹಿರಿಯ ಮುಖಂಡ ಮತ್ತು ಸಚಿವರ ವಿರುದ್ಧದ ಪ್ರಕರಣದ ಬಗ್ಗೆ ಸುಮ್ಮನಿದ್ದಾರೆ. ರಫೆಲ್ ಯುದ್ಧ ವಿಮಾನ ಒಪ್ಪಂದದ ಬಗ್ಗೆ ಸುಳ್ಳು ಹೇಳುವುದನ್ನು ಬಿಟ್ಟು, ಡಿಕೆಶಿ ಆಪ್ತರ ತಪ್ಪೊಪ್ಪಿಗೆ ಹೇಳಿಕೆ ಕುರಿತು ರಾಹುಲ್ ಪ್ರತಿಕ್ರಿಯಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಕಚೇರಿಗೆ ಹಣ ಪೂರೈಕೆ: ಡಿ.ಕೆ.ಶಿವಕುಮಾರ್ ಆಪ್ತರ ಹೇಳಿಕೆಯಿಂದ ಕಾಂಗ್ರೆಸ್ ಬಣ್ಣ ಸಂಪೂರ್ಣ ಬಯಲಾಗಿದೆ. ಬೇನಾಮಿ ಮೂಲದ ಟನ್​ಗಟ್ಟಲೆ ಹಣ ದೆಹಲಿಯ ಚಾಂದಿನಿ ಚೌಕ್​ದಿಂದ ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಕೇಂದ್ರ ಕಚೇರಿಗೆ ಪೂರೈಕೆ ಆಗುತ್ತಿದೆ. ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಪರ್ಯಾಯ ಶಬ್ದವಾಗಿದೆ. ಲೆಕ್ಕಕ್ಕೆ ಸಿಗದ ಹಣ, ಹವಾಲಾ ಜಾಲದ ಮೂಲಕ ವರ್ಗಾವಣೆಯಾಗುವ ನಗದು ಮತ್ತು ಭ್ರಷ್ಟಾಚಾರದ ಒಪ್ಪಂದಗಳೆಂಬ ತ್ರಿಪಾದಗಳ ಮೇಲೆ ಕಾಂಗ್ರೆಸ್ ಅಸ್ತಿತ್ವ ಇರುವುದು ಎಂದು ಪಾತ್ರಾ ಆರೋಪಿಸಿದ್ದಾರೆ.

‘ಎಸ್​ಜಿ’, ‘ಆರ್​ಜಿ’ ಯಾರು?

ಕರ್ನಾಟಕದಲ್ಲಿ ಕಾಂಗ್ರೆಸ್​ನ ಕೆಲವು ಮುಖಂಡರಿಂದ ವಶಪಡಿಸಿಕೊಂಡಿರುವ ಡೈರಿಯಲ್ಲಿ -ಠಿ;600 ಕೋಟಿ ಹಣವನ್ನು ‘ಎಸ್​ಜಿ’, ‘ಆರ್​ಜಿ’ ಮತ್ತು ಇತರರಿಗೆ ನೀಡಲಾಗಿದೆ ಎಂಬ ಉಲ್ಲೇಖ ಇದೆ. ‘ಎಸ್​ಜಿ’ ಮತ್ತು ‘ಆರ್​ಜಿ’ ಎಂದರೆ ಯಾರು? ಈ ಬಗ್ಗೆ ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಸ್ಪಷ್ಟಪಡಿಸಬೇಕು ಎಂದು ಪಾತ್ರಾ ಆಗ್ರಹಿಸಿದ್ದಾರೆ.