ರಾಮನಗರದ ಅಭ್ಯರ್ಥಿ ಹಿಂದೆ ಸರಿದ ವಿಚಾರ ದೋಸ್ತಿ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಂಗಳೂರು: ರಾಮನಗರದ ಉಪಚುನಾವಣೆಯ ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್​ ವಿರುದ್ಧ ಬಿಜೆಪಿ ನಾಯಕರು ಗರಂ ಆಗಿದ್ದು, ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೇವರು ಕೂಡ ಕ್ಷಮಿಸಲ್ಲ
ಬಿಜೆಪಿ ಶಾಸಕರು ಹಾಗೂ ನೂರಾರು ಜನ ಕಾರ್ಯಕರ್ತರು ಅವರ ಪರ ಕೆಲಸ ಮಾಡುತ್ತಿದ್ದರು. ಬಿಜೆಪಿ ಚಂದ್ರಶೇಖರ್​ ಅವರನ್ನು ಅತ್ಯಂತ ಗೌರವದಿಂದ ನಡೆಸಿಕೊಂಡಿದೆ. ಆದರೆ ಅವರು ತಮ್ಮ ಮೊದಲಿನ ಕಾಂಗ್ರೆಸ್ ಬುದ್ಧಿ ತೋರಿಸಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಇಂಥವರನ್ನು ಕ್ಷೇತ್ರದ ಜನ, ದೇವರು ಕೂಡ ಕ್ಷಮಿಸಲ್ಲ ಎಂದು ಕೇಂದ್ರ ಸಚಿವ ಸದಾನಂದಗೌಡ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದರು.

ದ್ರೋಹ ಮಾಡಿದ್ದು ಸರಿಯಲ್ಲ
ಈ ರೀತಿಯ ರಾಜಕಾರಣ ಸಮಾಜಕ್ಕೆ ಒಳ್ಳೆಯದಲ್ಲ. ಇದೊಂದು ದುರಾದೃಷ್ಟಕರ ಸಂಗತಿ. ನಾನಿದನ್ನು ಖಂಡಿಸುತ್ತೇನೆ. ಅವರ ತಂದೆ ಲಿಂಗಪ್ಪ ಸತ್ತರೂ ಜೆಡಿಎಸ್​ಗೆ ಮತ ಹಾಕಲ್ಲ ಎಂದಿದ್ದರು. ಅವರ ಮಗ ಈ ರೀತಿ ದ್ರೋಹ ಮಾಡಿದ್ದು ಸರಿಯಲ್ಲ. ಹಣದ ಆಮಿಷಕ್ಕೆ ಒಳಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಶಂಕೆಯಿದೆ. ಪರ್ಯಾಯ ವ್ಯವಸ್ಥೆಗಾಗಿ ನಾನು ಯಡಿಯೂರಪ್ಪ ಜೊತೆ ಮಾತನಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮಾಜಿ ಸಚಿವ ಆರ್​.ಅಶೋಕ್​ ಮಂಡ್ಯದಲ್ಲಿ ತಿಳಿಸಿದರು.

ಉಪ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ
ಬಿಜೆಪಿಗೆ ಇದೊಂದು ಪಾಠ. ಆ ಭಾಗದಲ್ಲಿ ನಮ್ಮ ಪಕ್ಷ, ನಾಯಕರು ಹಾಗೂ ಸಂಘಟನೆಯನ್ನು ಬಲ ಪಡಿಸಬೇಕು. ಪಕ್ಷದ ಅಭ್ಯರ್ಥಿಯಾಗಿ ಕೇಳಿದ್ದಕ್ಕೆ ಟಿಕೆಟ್ ಕೊಟ್ಟಿದ್ದರು. ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ. ಇಂಥವರ ಮೇಲೆ ನಂಬಿಕೆ ಇಲ್ಲ. ಇದು ಉಪ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಇದು ಪಕ್ಷಕ್ಕೆ ಮಾಡಿದಂತಹ ದ್ರೋಹ. ಟಿಕೆಟ್ ಕೊಡಬೇಕಾದರೆ ಮುಂದೆ ಯೋಚನೆ ಮಾಡುತ್ತೇವೆ. ಎರಡು ದಿನದಲ್ಲಿ ಈ ಪ್ರಕರಣದ ಸತ್ಯಾಂಶ ಹೊರಬರುತ್ತೆ ಎಂದು ಶಿವಮೊಗ್ಗದಲ್ಲಿ ಬಿಜೆಪಿ ನಾಯಕ ಕೆ.ಎಸ್​.ಈಶ್ವರಪ್ಪ ಕಿಡಿಕಾರಿದರು.

ಪ್ರಜಾಪ್ರಭುತ್ವಕ್ಕೆ ಕಳಂಕ
ರಾಮನಗರ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿದ್ದಾರೆ ಎಂಬುದು ಬಹಳ ಆತಂಕಕಾರಿ ವಿಚಾರ. ಕುಮಾರಸ್ವಾಮಿ ಮತ್ತು ಡಿಕೆಶಿಗೆ ಒಂದು ಪ್ರಶ್ನೆ ಕೇಳುತ್ತೇನೆ. ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ಎದುರಿಸುವ ಧೈರ್ಯ ಇಲ್ಲವೇ? ಅಭ್ಯರ್ಥಿಯನ್ನೇ ಸೆಳೆದಿರುವುದು ಪ್ರಜಾಪ್ರಭುತ್ವಕ್ಕೆ ಕಳಂಕ. ಈ ಬೆಳವಣಿಗೆ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಈ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಉಡುಪಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದರು.

ಅನುಭವ ದೊಡ್ಡ ಪಾಠ ಕಲಿಸಿದೆ
ಇದರ ಹಿಂದೆ ಬಹಳ ದೊಡ್ಡ ರಾಜಕೀಯ ಪಿತೂರಿ ಇದೆ. ಕಾಂಗ್ರೆಸ್​-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಪ್ರಚಾರಕ್ಕೆ ಹೋದ ಸಮಯದಲ್ಲಿ ಜನರ ಆಕ್ರೋಶ ಎದುರಾಗಿತ್ತು. ಬಿಜೆಪಿ ಕಾರ್ಯಕರ್ತರನ್ನು ಬಿಟ್ಟು ಹೊಸ ಪ್ರಯೋಗದ ಮೇಲೆ ಚಂದ್ರಶೇಖರ್​ಗೆ ಟಿಕೆಟ್ ನೀಡಲಾಗಿತ್ತು. ರಾಜಕೀಯದಲ್ಲಿ ಎಚ್ಚರಿಕೆ ಅಗತ್ಯ, ಸೋಲನ್ನು ಸವಾಲಾಗಿ ಸ್ವೀಕಾರ ಮಾಡಿದ್ದೇವೆ. ಅನುಭವ ದೊಡ್ಡ ಪಾಠ ಕಲಿಸಿದೆ. ಪಕ್ಷಕ್ಕೆ ಇದು ಎಚ್ಚರಿಕೆ ಪಾಠ ಎಂದು ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ ರವಿ ಪ್ರತಿಕ್ರಿಯೆ ನೀಡಿದರು.

ರಾಜಕೀಯ ವ್ಯಭಿಚಾರ
ಗೆಲುವಿಗಾಗಿ ಕಾಂಗ್ರೆಸ್-ಜೆಡಿಎಸ್‌ ಈ ರೀತಿಯಾದ ರಾಜಕೀಯ ವ್ಯಭಿಚಾರ ಮಾಡಿದ್ದಾರೆ. ಇಂತಹ ಘಟನೆಗಳು ರಾಜಕೀಯದಲ್ಲಿ ನೈತಿಕತೆಯನ್ನು ಹಾಳು ಮಾಡುತ್ತವೆ. ಕುಮಾರಸ್ವಾಮಿ ಪತ್ನಿ ಅವರಿಗೆ ಸೋಲಿನ ಸೂಚನೆ ಸಿಕ್ಕಿತ್ತು. ಇದಕ್ಕಾಗಿ ಅಖಾಡದಲ್ಲಿ ಎದುರಿಸಲಾಗದೆ ಎದುರಾಳಿಯನ್ನು ಬುಕ್ ಮಾಡಿಕೊಂಡಿದ್ದಾರೆ. ಅವರಿಗೆ ಮುಂದಿನ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ. ಇದರಿಂದ ಬಿಜೆಪಿಗೆ ಏನೂ ನಷ್ಟ ಇಲ್ಲ. ಉಳಿದ ನಾಲ್ಕು ಕ್ಷೇತ್ರಗಳ ಎಲೆಕ್ಷನ್ ನಾವೇ ಗೆಲ್ಲುತ್ತೇವೆ ಎಂದು ಮೈಸೂರಿನಲ್ಲಿ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.