ಚಂದ್ರಶೇಖರ್​ರಿಂದ ಬಿಜೆಪಿಗೆ ‘ಬೈ’ ಎಲೆಕ್ಷನ್​ ಪಂಚ್​; ಸದ್ದಿಲ್ಲದೆ ಡಿಕೆ ಬ್ರದರ್ಸ್ ಮಾಸ್ಟರ್​ ಸ್ಟ್ರೋಕ್​

ಬೆಂಗಳೂರು: ರಾಜ್ಯದಲ್ಲಿ ಐದು ಜಿಲ್ಲೆಗಳಲ್ಲಿ ನಡೆಯಲಿರುವ ಉಪಚುನಾವಣೆ ಮುನ್ನವೇ ಡಿಕೆ ಬ್ರದರ್ಸ್​ ಬಿಜೆಪಿಗೆ ಮಾಸ್ಟರ್​ ಸ್ಟ್ರೋಕ್​ ನೀಡಿದ್ದಾರೆ. ರಾಮನಗರದ ಬಿಜೆಪಿ ಅಭ್ಯರ್ಥಿ ಎಲ್​.ಚಂದ್ರಶೇಖರ್​ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.

ಸಂಸದ ಡಿ.ಕೆ.ಸುರೇಶ್​ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್​​ ತಮ್ಮ ಸ್ಥಾನದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್​ ಜತೆ ಗುರುತಿಸಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದ್ರಶೇಖರ್​, ರಾಜ್ಯ ಮಟ್ಟದ ಬಿಜೆಪಿ ನಾಯಕರಿಂದ ನನಗೆ ಬೆಂಬಲ ಸಿಕ್ಕಿಲ್ಲ. ನಾನು ಮರಳಿ ಕಾಂಗ್ರೆಸ್​​ಗೆ ಸೇರ್ಪಡೆಯಾಗುತ್ತಿದ್ದೇನೆ. ಇದಕ್ಕೆಲ್ಲ ಸಿ.ಪಿ.ಯೋಗೇಶ್ವರ್​ ಅವರೇ ನೇರ ಕಾರಣ. ಎರಡು ದಿನದಿಂದ ಯಾರು ಸಂಪರ್ಕಕ್ಕೆ ಸಿಗುತ್ತಿಲ್ಲ. ಬಿಎಸ್​​ವೈಗೆ ಫೋನ್​ ಮಾಡಿದರೂ ಸಿಗುತ್ತಿಲ್ಲ ಎಂದರು.

ರಾಜ್ಯದ ನಾಯಕರೆಲ್ಲರೂ ಪ್ರಚಾರಕ್ಕೆ ಬರುತ್ತೇನೆ. ಚುನಾವಣೆ ಖರ್ಚು ನೋಡಿಕೊಳ್ಳುವ ಭರವಸೆ ನೀಡಿದ್ದರು. ಯಾರು ಸಹ ಈವರೆಗೆ ನನ್ನ ಪರ ಪ್ರಚಾರಕ್ಕೆ ಬಂದಿಲ್ಲ. ನಾನು ಗೆಲ್ಲುವುದು ಬಿಜೆಪಿ ನಾಯಕರಿಗೆ ಬೇಕಾಗಿಲ್ಲ. ಎಲ್ಲ ಖರ್ಚನ್ನು ನಾನೇ ನೋಡಿಕೊಳ್ಳಬೇಕಾಯಿತು ಎಂದಿದ್ದಾರೆ.