ಸಚಿವ ಡಿ.ಕೆ.ಶಿವಕುಮಾರ್ ಟ್ರಬಲ್ ಶೂಟರ್ ಅಲ್ಲ, ಕಾಂಗ್ರೆಸ್‌ಗೆ ಟ್ರಬಲ್ಸ್ ಮ್ಯಾನ್ ಆಗಲಿದ್ದಾರೆ!

ಹುಬ್ಬಳ್ಳಿ: ಕುಂದಗೋಳ ಕ್ಷೇತ್ರಕ್ಕೆ ಸಚಿವ ಡಿ.ಕೆ.ಶಿವಕುಮಾರ್ ಅಲ್ಲ ಕಾಂಗ್ರೆಸ್‌ನಿಂದ ಯಾರೇ ಬಂದರೂ ಏನೂ ಆಗುವುದಿಲ್ಲ. ಡಿ.ಕೆ.ಶಿವಕುಮಾರ ಟ್ರಬಲ್ ಶೂಟರ್ ಅಲ್ಲ ಎಂದು ಬಿಜೆಪಿ ಶಾಸಕ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಕುಂದಗೋಳ ಕ್ಷೇತ್ರಕ್ಕೆ ಡಿ ಕೆ ಶಿವಕುಮಾರ್‌ ಚುನಾವಣೆ ಉಸ್ತುವಾರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಟ್ರಬಲ್‌ ಶೂಟರ್‌ ಅಲ್ಲ. ಬದಲಿಗೆ ಕಾಂಗ್ರೆಸ್‌ಗೆ ಟ್ರಬಲ್ಸ್ ಮ್ಯಾನ್ ಆಗಲಿದ್ದಾರೆ. ಬಿಜೆಪಿಯಿಂದ ಚಿಕ್ಕನಗೌಡರ್ ಗೆಲುವು ಖಚಿತ ಎಂದರು.

ಸಮ್ಮಿಶ್ರ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಚುನಾವಣಾ ಖರ್ಚು ವೆಚ್ಚಕ್ಕೆ ಭ್ರಷ್ಟಾಚಾರದಿಂದ ಹಣವನ್ನು ಸಂಗ್ರಹಿಸಿದ್ದಾರೆ. ಬಿಬಿಎಂಪಿಯಲ್ಲಿ ತರಾತುರಿಯಲ್ಲಿ ರೆಸಲ್ಯೂಷನ್‌ ಪಾಸ್ ಮಾಡಿದ್ದಾರೆ. 4,200 ಕೋಟಿ ರೂ. ಕಾಮಗಾರಿಯನ್ನು ಲ್ಯಾಂಡ್‌ ಆರ್ಮಿ ಮೂಲಕ ಮಾಡುವುದಾಗಿ ಆದೇಶ ಪಾಸ್ ಮಾಡಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿ ಟೆಂಡರ್‌ನಲ್ಲಿ ಹಗರಣ ಮಾಡಲಾಗಿದೆ. ಪಾರದರ್ಶಿ ಕಾನೂನು ಉಲ್ಲಂಘಿಸಿ ದೊಡ್ಡ ಹಗರಣ ನಡೆಯುತ್ತಿದೆ ಎಂದು ಆರೋಪಿಸಿದರು.

ಚುನಾವಣೆಯಲ್ಲಿ ಹಣ ಹಂಚಲು ಗುತ್ತಿಗೆದಾರರ ಮೂಲಕ ಹಣ ಸಂಗ್ರಹಿಸುತ್ತಿದ್ದಾರೆ. ಲ್ಯಾಂಡ್‌ ಆರ್ಮಿಯಿಂದ ತಮಗೆ ಬೇಕಾದ ಗುತ್ತಿಗೆದಾರರಿಗೆ ಕಾಮಗಾರಿ ಕೊಡುತ್ತಿದ್ದಾರೆ. ಇಲಾಖೆಯ ಎಂಡಿ ಐಎಫ್‌ಎಸ್ ಅಧಿಕಾರಿ ದೇವೇಗೌಡರ ಕುಟುಂಬಕ್ಕೆ ಹತ್ತಿರದ ಸಂಬಂಧಿ. ದೊಡ್ಡ ಪ್ರಮಾಣದ ಹಗರಣ ನಡೆದಿದ್ದು, ಚುನಾವಣಾ ಆಯೋಗಕ್ಕೆ‌ ದೂರು ಕೊಟ್ಟಿದ್ದೇವೆ. ನವ ಬೆಂಗಳೂರು ಅಭಿವೃದ್ಧಿಯ ಹಣ ತರಾತುರಿಯಲ್ಲಿ ಖರ್ಚು ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಸಮ್ಮಿಶ್ರ ಸರ್ಕಾರ ಇರುವುದಿಲ್ಲ ಎಂದು ಅವರಿಗೆ ಗೊತ್ತಾಗಿದೆ ಎಂದು ಹೇಳಿದರು.

ಕುಂದಗೋಳ ಕ್ಷೇತ್ರಕ್ಕೆ ಅಭ್ಯರ್ಥಿ ಫೈನಲ್‌

ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಎಸ್.ಐ.ಚಿಕ್ಕನಗೌಡರ್ ಅವರಿಗೆ ಟಿಕೆಟ್ ಫೈನಲ್ ಆಗಿದೆ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಅಧಿಕೃತ ಘೋಷಣೆಯಾಗಲಿದೆ. ಟಿಕೆಟ್ ಆಕಾಂಕ್ಷಿ ಎಂ.ಆರ್.ಪಾಟೀಲ್ ಅವರನ್ನು ಈಗಾಗಲೇ ಸಮಾಧಾನಗೊಳಿಸಲು ಯತ್ನಿಸಲಾಗಿದೆ. ಮುಂದಿನ ಬಾರಿ ಎಂ.ಆರ್. ಪಾಟೀಲ್​ರಿಗೆ ಟಿಕೆಟ್ ನೀಡಲಾಗುವುದು. ನಾಳೆ ಎಸ್.ಐ ಚಿಕ್ಕನಗೌಡರ್ ನಾಮಪತ್ರ ಸಲ್ಲಿಸಲಿದ್ದಾರೆ. ಎಂ.ಆರ್ ಪಾಟೀಲ್ ಅವರೂ ಕೂಡ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *