ಶಿವಮೊಗ್ಗ ಕ್ಷೇತ್ರದ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಹೆಗಲಿಗೆ; ‘ಮಧು’ಕರವಾಗಿರುವುದೇ ರಣತಂತ್ರ?

ಶಿವಮೊಗ್ಗ: ಚುನಾವಣೆ ಉಸ್ತುವಾರಿ ವಹಿಸಿಕೊಂಡ ಕ್ಷೇತ್ರಗಳನ್ನೆಲ್ಲ ಗೆದ್ದು ಬರುತ್ತಿರುವ ಸಚಿವ ಡಿ.ಕೆ ಶಿವಕುಮಾರ್​ ಅವರು ಈ ಬಾರಿ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.

ಈ ಕುರಿತು ಶಿವಮೊಗ್ಗದ ಜೆಡಿಎಸ್​ ಜಿಲ್ಲಾಧ್ಯಕ್ಷ ಆರ್​.ಎಂ. ಮಂಜುನಾಥ್​ ಗೌಡ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. “ಈ ಬಾರಿ ಕ್ಷೇತ್ರದ ಉಸ್ತುವಾರಿಯನ್ನು ಡಿ.ಕೆ ಶಿವಕುಮಾರ್​ ಅವರು ವಹಿಸಿಕೊಳ್ಳಲಿದ್ದಾರೆ,” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

“ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಮಧು ಬಂಗಾರಪ್ಪ ಅವರು ಅಧಿಕೃತವಾಗಿ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ಸಿಎಂ ನೇತೃತ್ವದಲ್ಲಿ ಸಭೆ ನಡೆದಿದೆ. ಅಭ್ಯರ್ಥಿ ವಿಚಾರವಾಗಿ ಜಿಲ್ಲೆಯಲ್ಲಿ ಯಾವುದೇ ಗೊಂದಲವಿಲ್ಲ. ಮೈತ್ರಿಕೂಟದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಸ್ಪರ್ಧೆ ಮಾಡಲಿದ್ದಾರೆ. ಕಳೆದ ಉಪ ಚುನಾವಣೆಯಲ್ಲಿ ಕಡಿಮೆ‌ ಅವಧಿಯಲ್ಲಿ ಪ್ರಚಾರ ಮಾಡಿ ಕಡಿಮೆ ಅಂತರದಲ್ಲಿ ಸೋತಿದ್ದೇವೆ. ಹಿಂದಿನ ತಪ್ಪುಗಳನ್ನು ಅರಿತು, ಸರಿಪಡಿಸಿಕೊಂಡು ಶ್ರಮ ವಹಿಸಿ ಕೆಲಸ ಮಾಡುತ್ತೇವೆ. ನಾವು ಈ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದೇವೆ,” ಎಂದರು.

ಅಲ್ಲದೆ, “ಡಿ.ಕೆ.ಶಿವಕುಮಾರ್ ಅವರು ಈ ಬಾರಿ ಶಿವಮೊಗ್ಗ ಕ್ಷೇತ್ರದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಅಭ್ಯರ್ಥಿ ಗೆಲುವಿಗೆ ರಣತಂತ್ರ ರೂಪಿಸಿ ಕಾರ್ಯಕರ್ತರಿಗೆ ಉತ್ಸಾಹ ತುಂಬಲಿದ್ದಾರೆ,” ಎಂದೂ ಅವರು ತಿಳಿಸಿದರು.