ಡಿ.6ಕ್ಕೆ ದಿಕ್ಸೂಚಿ ಸಭೆ

ಬೆಂಗಳೂರು: ರಾಜ್ಯದ ಜಲ ವಿವಾದ ವಿಚಾರದಲ್ಲಿ ಮುಂದಿನ ದಾರಿ ಕುರಿತು ರ್ಚಚಿಸಲು ಎಲ್ಲ ಮಾಜಿ ಸಿಎಂ, ಮಾಜಿ ಜಲಸಂಪನ್ಮೂಲ ಸಚಿವರ ಸಭೆಯನ್ನು ಡಿ.6ಕ್ಕೆ ನಿಗದಿಪಡಿಸಲಾಗಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಮಹದಾಯಿ ವಿಚಾರ ದಲ್ಲಿ ಕಾನೂನು ಹಾದಿ ರ್ಚಚಿಸಲು ಆಯೋಜಿಸಲಾಗಿದ್ದ ಸರ್ವಪಕ್ಷ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿ, ಎಲ್ಲ ಜನಪ್ರತಿನಿಧಿಗಳೂ ಆಡಳಿತದ ಅವಧಿಯಲ್ಲಿ ಅನುಭವ ಪಡೆದಿರುತ್ತಾರೆ. ಅದರ ಆಧಾರದಲ್ಲಿ ಅನೇಕ ಮಾರ್ಗಗಳಿರುತ್ತವೆ. ಅಧಿವೇಶನಕ್ಕೂ ಮುನ್ನ ಈ ಬಗ್ಗೆ ರ್ಚಚಿಸಿ, ಎಲ್ಲರ ಸಲಹೆ ಪಡೆದು ಮುಂದಿನ ದಾರಿ ನಿರ್ಧರಿಸುತ್ತೇವೆ ಎಂದರು.

ಮಹದಾಯಿ ಬಗ್ಗೆ ಪ್ರತಿಕ್ರಿಯಿಸಿ, ಹೆಚ್ಚಿನ ನೀರಿಗಾಗಿ ನಮ್ಮ ಅಪೀಲು ಇದ್ದೇ ಇರುತ್ತದೆ. ಅದಕ್ಕೂ ಮೊದಲು ಈಗ ಸಿಕ್ಕಿರುವ ಪಾಲನ್ನು ಜನರಿಗೆ ತಲುಪಿಸಬೇಕು. ಆದಷ್ಟೂ ಶೀಘ್ರದಲ್ಲಿ ಕಾಮಗಾರಿ ಆರಂಭಿಸಬೇಕು. ಈಗ ಸಿಕ್ಕಿರುವ ತೀರ್ಪಿನ ಲಾಭ ಮೊದಲು ರೈತರಿಗೆ ಸಿಗುವಂತಾಗಬೇಕು ಎಂದು ತಿಳಿಸಿದರು. ಸಭೆಯಲ್ಲಿ ಸಚಿವರಾದ ಆರ್.ವಿ.ದೇಶಪಾಂಡೆ, ಶಿವಾನಂದ ಪಾಟೀಲ್, ಕೃಷ್ಣ ಬೈರೇಗೌಡ, ಶಾಸಕ ಬಸವರಾಜ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮಾಜಿ ಶಾಸಕ ಕೋನರೆಡ್ಡಿ ಮತ್ತಿತರರಿದ್ದರು.

ಮೊದಲೇ ಸಭೆ ನಡೆಸಬೇಕಿತ್ತು

ಬಿಜೆಪಿ ವತಿಯಿಂದ ಭಾಗವಹಿಸಿದ್ದ ಮಾಜಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾನೂನಾತ್ಮಕ ಕ್ರಮದ ಬಗ್ಗೆ ಚರ್ಚೆ ನಡೆಸಿದ್ದೇವೆ. ರಾಜ್ಯ ಸರ್ಕಾರದ ವತಿಯಿಂದ ವಿಶೇಷ ಮೇಲ್ಮನವಿ ಸಲ್ಲಿಸಲಾಗಿದೆ. ಈ ಅರ್ಜಿ ಸಲ್ಲಿಸುವ ಮೊದಲೇ ಸರ್ವಪಕ್ಷ ಸಭೆ ಕರೆದಿದ್ದರೆ, ಯಾವ ವಿಚಾರ ಸೇರ್ಪಡೆ ಮಾಡಬೇಕೆಂಬ ಕುರಿತು ಸಲಹೆ ನೀಡಬಹುದಿತ್ತು ಎಂದರು. ಮಹದಾಯಿ ಆದೇಶವನ್ನು ಗೆಜೆಟ್ ಮಾಡಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ. ಆದರೆ ಪುನರ್ ಪರಿಶೀಲನೆ ಅರ್ಜಿ ಕಾರಣಕ್ಕೆ ಗೆಜೆಟ್ ಕಷ್ಟವಾಗುತ್ತದೆ. 4-5 ತಿಂಗಳಲ್ಲಿ ಎಸ್​ಎಲ್​ಪಿ ಇತ್ಯರ್ಥವಾದರೆ ಗೆಜೆಟ್ ಹೊರಡಿಸಲು ಅನುಕೂಲ. ಶೀಘ್ರದಲ್ಲಿ ಇತ್ಯರ್ಥಕ್ಕೆ ಕಾನೂನು ತಂಡಕ್ಕೆ ಸೂಚನೆ ನೀಡಿ ಎಂದು ಸಲಹೆ ನೀಡಿದ್ದೇವೆ ಎಂದು ಹೇಳಿದರು. ನೀರಿನ ಹಂಚಿಕೆಯಲ್ಲಿ ಬದಲಾವಣೆ ಆಗಿರುವ ಕಾರಣ ಅದಕ್ಕೆ ಅನುಗುಣವಾಗಿ ವಿಸõತ ಯೋಜನಾ ವರದಿ ಸಿದ್ಧಪಡಿಸಲು ತಿಳಿಸಿದ್ದೇವೆ. ಆದೇಶದ ಅಧಿಸೂಚನೆ ಹೊರಬಂದ ಕೂಡಲೆ ಕಾಮಗಾರಿ ಆರಂಭಿಸಿ ಜನರಿಗೆ ಶೀಘ್ರವಾಗಿ ನೀರು ಕೊಡಲು ಸಾಧ್ಯವಾಗುತ್ತದೆ. ಮೊದಲು ನಮಗೆ ಸಿಕ್ಕಿರುವ ನೀರನ್ನು ಬಳಸಿ, ನಂತರ ಹೆಚ್ಚು ನೀರು ಪಡೆಯಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದ್ದಾಗಿ ತಿಳಿಸಿದರು. ಇದೇ ರೀತಿ ಕೃಷ್ಣಾ ಮೂರನೇ ಹಂತದ ಕುರಿತೂ ಸರ್ಕಾರದ ಗಮನ ಸೆಳೆಯಲಾಗಿದೆ ಎಂದ ಬೊಮ್ಮಾಯಿ, ಕೃಷ್ಣಾ ಮೂರನೇ ಹಂತ ಅಧಿಸೂಚನೆಗೆ ಆಂಧ್ರದವರು ತಡೆ ತಂದಿದ್ದಾರೆ. 3-4 ವರ್ಷದಿಂದ ಹೀಗೆಯೇ ಇದೆ. ಈ ಆದೇಶದ ನೋಟಿಫಿಕೇಷನ್​ಗೂ ಒತ್ತಡ ಹೇರಬೇಕು. ಇದರಿಂದ ಆಲಮಟ್ಟಿ ಎತ್ತರ ಹೆಚ್ಚಿಸಬಹುದು. 13 ಲಕ್ಷ ಎಕರೆ ನೀರಾವರಿ ಮಾಡಲು ಸಾಧ್ಯವೆಂದು ತಿಳಿಸಿದ್ದೇವೆ ಎಂದರು.