ಡಿ.ಕೆ.ಶಿವಕುಮಾರ್‌ಗೆ ಈಗ ಜ್ಞಾನೋದಯವಾಗಿದೆ: ಶ್ರೀರಾಮುಲು

ಬಳ್ಳಾರಿ: ಡಿ.ಕೆ.ಶಿವಕುಮಾರ್​ಗೆ ಈಗ ಜ್ಞಾನೋದಯವಾಗಿದೆ. ಬಳ್ಳಾರಿ ಕ್ಷೇತ್ರದಲ್ಲಿ ಹೆಚ್ಚು ಲಿಂಗಾಯತ ಮತಗಳಿವೆ. ಲಿಂಗಾಯತ ಮತಗಳಿಗಾಗಿ ಈಗ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.

ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ಕ್ಷೇತ್ರದಲ್ಲಿ ಪ್ರಚಾರದ ವೇಳೆ ದಿಗ್ವಿಜಯ ನ್ಯೂಸ್‌ಗೆ ಪ್ರತಿಕ್ರಿಯಿಸಿ, ಹಿಂದೆ ತೀರ್ಮಾನ ಮಾಡುವಾಗ ಡಿಕೆಶಿ ಎಲ್ಲಿದ್ದರು? ಈಗ ಕಾಂಗ್ರೆಸ್ ರಾಜಕೀಯ ಲೆಕ್ಕಾಚಾರ ತಪ್ಪಾಗಿದೆ. ರಾಜಕೀಯ ಲೆಕ್ಕಾಚಾರ ತಪ್ಪಾಗಿದ್ದರಿಂದ ತಪ್ಪಿನ ಅರಿವಾಗಿದೆ. ಈಗ ತಪ್ಪು ಎಂದರೆ ಏನು ಮಾಡಲು ಆಗುವುದಿಲ್ಲ ಎಂದರು.

ಬಳ್ಳಾರಿ ಉಪಚುನಾವಣೆಗಾಗಿ ಡಿಕೆಶಿಯಿಂದ ಇಂಥ ಆಟ ನಡೆಯುತ್ತಿದೆ. ಇನ್ನು 2019ರ ಚುನಾವಣೆಯಲ್ಲಿ ಏನೇನಿದೆಯೋ? ಈ ಹಿಂದೆ ಎಲ್ಲ ಪಂಚ ಪೀಠದ ಸ್ವಾಮೀಜಿಗಳು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ವಿರೋಧ ಮಾಡಿದ್ದರೂ ಕೂಡ ಆಗ ಇವರಿಗೆ ಅವರ ಮಾತು ಕಿವಿಗೆ ಬಿದ್ದಿರಲಿಲ್ಲ. ಈಗ ಚುನಾವಣೆ ಬಂದಿದೆ ಎಂದು ಈ ರೀತಿ ಹೇಳುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)