ಬಿಜೆಪಿಗೆ ಮಾಸ್ಟರ್​ ಸ್ಟ್ರೋಕ್​ ಕೊಟ್ಟ ಡಿಕೆಶಿ ಬಳ್ಳಾರಿಯಲ್ಲಿ ಬಡವ್ರ ಸೇವೆ ಮಾಡ್ಕೊಂಡ್​​ ಇರ್ತಾರಂತೆ…

ಬಳ್ಳಾರಿ: ಬಿಜೆಪಿ ಅಭ್ಯರ್ಥಿ ಎಲ್​.ಚಂದ್ರಶೇಖರ್​ ರಾಮನಗರ ಚುನಾವಣಾ ಕಣದಿಂದ ಹಿಂದೆ ಸರಿಯುವುದಕ್ಕೆ ಡಿಕೆಶಿ ಬ್ರದರ್ಸ್​ ಮಾಸ್ಟರ್​ ಸ್ಟ್ರೋಕ್​ ಕಾರಣ ಎಂದು ರಾಜಕೀಯ ವಲಯ ಹೇಳುತ್ತಿರುವ ಬೆನ್ನಲ್ಲೇ ಸಚಿವ ಡಿ.ಕೆ.ಶಿವಕುಮಾರ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಗ್ಗೆ ನನಗೇನು ಗೊತ್ತಿಲ್ಲಪ್ಪ. ನನ್ನ ಗಮನಕ್ಕೇನು ಬಂದಿತ್ತೆಂದರೆ ಯೋಗೇಶ್ವರ್​, ಅಶ್ವಥ್​ ನಾರಾಯಣ್​ ಸೇರಿ ಹಲವು ಬಿಜೆಪಿ ಮುಖಂಡರು ನ.6ರಂದು ಬಿಜೆಪಿ ಸರ್ಕಾರ ರಚನೆ ಮಾಡುತ್ತಾರೆ. ಬ್ಯಾಗ್​ಗಳಲ್ಲಿ ದುಡ್ಡಿನ ಕಂತೆ ತೆಗೆದುಕೊಂಡು ನಮ್ಮ ಎಂಎಲ್​ಎಗಳಿಗೆ ಕೇಳಲಿದ್ದಾರೆ. ಇದೇ ನಿಟ್ಟಿನಲ್ಲಿ ಬಿಎಸ್​ವೈ ಕೂಡ ನ.6ರಂದು ಸರ್ಕಾರ ರಚನೆ ಮಾಡುವುದಾಗಿ ಹೇಳಿದ್ದರು ಎಂದು ಟಾಂಗ್​ ನೀಡಿದರು.

ನಾನು ರಾಮನಗರಕ್ಕೆ ಹೋಗೇ ಇಲ್ಲ. ನನಗೆ ಏನೂ ಗೊತ್ತಿಲ್ಲ. ಇಂದು ರಾಮನಗರಕ್ಕೆ ತೆರಳಿ ಧ್ವಜಾರೋಹಣ ಮಾಡಬೇಕೆಂದಿದ್ದೆ. ಆದರೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂಬ ಕಾರಣಕ್ಕೆ ಅಲ್ಲಿಗೆ ತೆರಳಿಲ್ಲ ಎಂದರು.

ಬಿಜೆಪಿಯವರನ್ನು ಆಪರೇಟ್​ ಮಾಡುವುದು ಅಸಾಧ್ಯ
ಚಂದ್ರಶೇಖರ್​ ಅವರ ಆಪರೇಷನ್​ ಕುರಿತು ಮಾಹಿತಿ ಇರಲಿಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಬಿಜೆಪಿಯವರನ್ನು ಆಪರೇಟ್​ ಮಾಡುವುದಕ್ಕಾಗುತ್ತೇನ್ರಿ? ಅವರು ಬಹಳ ನಿಸ್ಸೀಮರು, ಅವರನ್ನು ಆಪರೇಟ್​ ಮಾಡುವುದು ಅಸಾಧ್ಯ. ನಾನು ಯಾವುದೇ ಹಣ ಕೊಟ್ಟಿಲ್ಲ. ಇದು ಅವರ ನಿತ್ಯ ಜೀವನ ಎಂದು ಆರೋಪಿಸಿದರು.

ದೊಡ್ಡವ್ರ ಸಹವಾಸ ಸಾಕು
ನನಗೆ ದೊಡ್ಡವರ ಸಹವಾಸ ಸಾಕು. ಬಳ್ಳಾರಿ ಬಡವರನ್ನು ನನಗೆ ಬಿಟ್ಟುಬಿಡಿ. ಅವರ ಸೇವೆ ಮಾಡಿಕೊಂಡು ಇದ್ಬಿಡ್ತೀನಿ ಎಂದು ನಗುತ್ತಾ ಮಾಸ್ಟರ್​ ಸ್ಟ್ರೋಕ್​ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಕೇವಲ ನಗುವಿನಲ್ಲೇ ಉತ್ತರ ನೀಡಿದರು.