ಲಾಭ ತಂದ ಧರ್ಮದೇಟು ತಪ್ಪೊಪ್ಪಿಗೆ

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮ ರಚನೆಗೆ ಮುಂದಾಗಿ ವಿಧಾನಸಭಾ ಚುನಾವಣೆಯಲ್ಲಿ ಕೈಸುಟ್ಟುಕೊಂಡ ಕಾಂಗ್ರೆಸ್ ಈಗ ರಾಗ ಬದಲಿಸ ಲಾರಂಭಿಸಿದೆ. ಅಲ್ಲದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮತ್ತೆ ಪಶ್ಚಾತ್ತಾಪದ ಮಾತುಗಳನ್ನಾಡಿ ಅನುಕಂಪದ ಅಲೆ ಸೃಷ್ಟಿಸಿಕೊಳ್ಳುವ ಬಗ್ಗೆ ಕೈ ನಾಯಕರು ಪೀಠಿಕೆ ಸಿದ್ಧಪಡಿಸಲಾರಂಭಿಸಿದ್ದಾರೆ.

ಇತ್ತೀಚೆಗೆ ಮುಗಿದ ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ್ದ 2 ಕಡೆ ನಿರೀಕ್ಷೆಗೂ ಮೀರಿದ ಮತದ ಹರಿವು ಕಾಣಿಸಿದೆ. ಶಿವಮೊಗ್ಗ ದಲ್ಲಿ ಜೆಡಿಎಸ್ ಅಭ್ಯರ್ಥಿಗೂ ಹೆಚ್ಚಿನ ಮತ ಬಂದಿದೆ. ಈ ಬೆಳವಣಿಗೆಗೆ ಸಚಿವ ಡಿ.ಕೆ. ಶಿವಕುಮಾರ್ ಆಡಿದ ಪಶ್ಚಾತ್ತಾಪದ ಮಾತು ಕಾರಣ ಎಂದು ಡಿಕೆಶಿ ಬೆಂಬಲಿಗರು ನಂಬಿದ್ದಾರೆ.

‘ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಹಿಂದಿನ ಸರ್ಕಾರ ಹಸ್ತಕ್ಷೇಪ ಮಾಡಬಾರದಿತ್ತು. ನಮ್ಮನ್ನು ತುಂಬು ಹೃದಯದಿಂದ ಕ್ಷಮಿಸಿಬಿಡಿ. ಲಿಂಗಾಯತ ಪ್ರತ್ಯೇಕ ಧರ್ಮ ವಿವಾದದಲ್ಲಿ ಹಸ್ತಕ್ಷೇಪ ಮಾಡಿದ್ದು ನಮ್ಮ ಸರ್ಕಾರ ಮಾಡಿದ ಅಪರಾಧ’ ಎಂದು ಡಿ.ಕೆ.ಶಿವಕುಮಾರ್ ಕೈಮುಗಿದು ಕ್ಷಮಾಪಣೆ ಕೋರಿದ್ದರು. ಈ ಮಾತು ಕಾಂಗ್ರೆಸ್​ನಲ್ಲಿ ತಲ್ಲಣ ಸೃಷ್ಟಿಸಿದರೂ ‘ನನ್ನ ಮಾತಿಗೆ ಬದ್ಧ’ ಎಂದು ಅವರು ಸಮರ್ಥಿಸಿಕೊಂಡಿದ್ದರು.

ಪ್ರತ್ಯೇಕ ಧರ್ಮ ವಿಚಾರದಲ್ಲಿ ನಮ್ಮ ತಪ್ಪು ಒಪ್ಪಿಕೊಂಡಿದ್ದಕ್ಕೆ ಉಪಚುನಾವಣೆಯಲ್ಲಿ 3 ಕ್ಷೇತ್ರಗಳಲ್ಲಿ ಲಾಭವಾಗಿದೆ. ಪಕ್ಷದ ಲೆಕ್ಕಾಚಾರಕ್ಕಿಂತ ಹೆಚ್ಚು ಮತ ಬಂದಿದ್ದು, ಇದಕ್ಕೆ ಕ್ಷಮೆ ಯಾಚನೆಯೇ ಕಾರಣ. ಮುಂದೆ ಸಹ ಇದೇ ಕಾರ್ಡ್ ಪ್ರಯೋಗಿ ಸಿದರೆ ಮಧ್ಯ, ಉತ್ತರ, ಮುಂಬೈ ಕರ್ನಾಟಕ ಭಾಗದ 10ಕ್ಕೂ ಹೆಚ್ಚು ಲೋಕಸಭೆ ಕ್ಷೇತ್ರದಲ್ಲಿ ಅನುಕೂಲವಾಗಬಹುದೆಂದು ದೆಹಲಿ ನಾಯಕರಾದ ಅಹ್ಮದ್ ಪಟೇಲ್, ಗುಲಾಂ ನಬಿ ಆಜಾದ್ ಮೂಲಕ ಹೈಕಮಾಂಡ್ ಗಮನಕ್ಕೆ ತರಲು ಕಾಂಗ್ರೆಸ್​ನ ಒಂದು ಗುಂಪು ತಯಾರಿ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

20ಕ್ಕೂ ಹೆಚ್ಚು ಸ್ಥಾನ ಖೋತಾ

ಪ್ರತ್ಯೇಕ ಧರ್ಮ ರಚನೆ ಮಾಡಿ ಹಿಂದು ಸಮಾಜ ಒಡೆಯುತ್ತಿದ್ದಾರೆಂದು ಬಲವಾದ ಪ್ರಚಾರ ಹೆಚ್ಚಾದ ಕಾರಣ ವಿಧಾನ ಸಭಾ ಚುನಾವಣೆಯಲ್ಲಿ 20ಕ್ಕಿಂತ ಹೆಚ್ಚು ಸ್ಥಾನ ಕಡಿಮೆಯಾಗಿತ್ತು. ವೀರಶೈವ-ಲಿಂಗಾಯತ ರಲ್ಲದೆ ಇತರ ಸಮುದಾಯ ದವರೂ ಕಾಂಗ್ರೆಸ್​ನಿಂದ ದೂರಾಗಿದ್ದು ಸತ್ಯ. ಇದು ನಮ್ಮ ನಾಯಕರ ಅರಿವಿಗೆ ಬರುತ್ತಿದೆ ಎಂದು ಪಕ್ಷದ ಶಾಸಕರೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.