ಇನ್ನು ಮುಂದೆ ನಾನು ಜಾತಿ-ಧರ್ಮದ ವಿಚಾರಕ್ಕೆ ತಲೆಹಾಕಲ್ಲ

ಳೆದ ಚುನಾವಣೆಗಿಂತ 44 ಸ್ಥಾನಗಳನ್ನು ಕಳೆದುಕೊಂಡರೂ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಸರ್ಕಾರದಲ್ಲಿ ಪಾತ್ರ ವಹಿಸುವ ಮೂಲಕ ಸೋಲಿನ ನೋವು ಮರೆತಿದ್ದ ಕಾಂಗ್ರೆಸ್​ಗೆ ಈಗ ಆಘಾತ ಕಾಡಿದೆ. ಪ್ರತ್ಯೇಕ ಧರ್ಮದ ವಿಚಾರದಲ್ಲಿ ರಾಜಕೀಯ ಮಾಡಿದ್ದರಿಂದ ಸೋಲುಂಡೆವು ಎಂದು ಪಕ್ಷದ ಹಿರಿಯ ನಾಯಕರಲ್ಲೊಬ್ಬರಾದ ಡಿ.ಕೆ. ಶಿವಕುಮಾರ್ ಹೇಳಿದ್ದರಿಂದ ಕಾಂಗ್ರೆಸ್ ಗಾಯಕ್ಕೆ ಉಪ್ಪು ಸುರಿಯುವ ಜತೆಗೆ ನಾಯಕತ್ವ ಸಂಘರ್ಷಕ್ಕೂ ಕಾರಣವಾಗಿದೆ. ಈ ಕುರಿತು ದಿಗ್ವಿಜಯ ನ್ಯೂಸ್ 24×7 ಜತೆ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ.

| ವಿಜಯ್ ಜೊನ್ನಹಳ್ಳಿ ದಿಗ್ವಿಜಯ ನ್ಯೂಸ್

ಬಳ್ಳಾರಿ ಚುನಾವಣೆ ಏನಾಗುತ್ತೆಂಬ ಭಯ-ಟೆನ್ಷನ್ ಇದೆಯೇ?

-ಯಾವ ಟೆನ್ಷನ್-ಭಯವೂ ಇಲ್ಲ, ನಾನು ಆರಾಮಾಗಿದ್ದೇನೆ.

ಬಳ್ಳಾರಿ ಉಸ್ತುವಾರಿ ವಹಿಸಿರುವ ನಿಮಗೆ ಸ್ಥಳೀಯ ಕಾಂಗ್ರೆಸ್ ನಾಯಕರ ವಿರೋಧ ಇದೆ ಎಂಬ ಮಾತಿದೆ?

-ಬಳ್ಳಾರಿ ಕಾಂಗ್ರೆಸ್ ಶಾಸಕರಲ್ಲಿ ಯಾವುದೇ ಅಸಮಾಧಾನ ಇಲ್ಲ. ನಾಗೇಂದ್ರ ತಮ್ಮ ಸಹೋದರನಿಗೆ ಟಿಕೆಟ್ ಕೇಳಿದ್ದರು, ಅಲ್ಲದೆ ಬೇರೆ ಸಮರ್ಥರಿದ್ದರೆ ನೀಡಿ ಎಂದೂ ಹೇಳಿದ್ದರು. ಎಲ್ಲರೂ ತಮ್ಮದೇ ಚುನಾವಣೆ ಎಂದು ಕೆಲಸ ಮಾಡುತ್ತಿದ್ದಾರೆ.

ರಮೇಶ್ ಜಾರಕಿಹೊಳಿ ಮಾತ್ರವಲ್ಲ, ಆ ಭಾಗದ ಬಹುತೇಕ ಕಾಂಗ್ರೆಸ್ ನಾಯಕರು ನಿಮ್ಮನ್ನು ವಿರೋಧಿಸುತ್ತಿದ್ದಾರಂತೆ?

-ಯಾರು? ನೀವು ಹೆಸರು ಹೇಳುತ್ತೀರಾ? ಯಾರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ? ಈ ಹಿಂದೆ ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆಯಲ್ಲಿ ಇವರೆಲ್ಲ ಎಲ್ಲಿದ್ದರು? ನನ್ನನ್ನೇ ಏಕೆ ಕಳುಹಿಸಿ ದರು? ಬಳ್ಳಾರಿ ಬಂಡೆಗೆ ತಲೆ ಒಡೆಯಲು ನಾನೇ ಹೋಗಬೇಕಿತ್ತು ತಾನೆ? ಕೆಲವರು ನನ್ನ ಹೆಸರು ಬಳಸಿದರೆ ದೊಡ್ಡವರಾಗಬಹುದು ಎಂದು ತಿಳಿದಿದ್ದಾರೆ. ಅವರ ಹೇಳಿಕೆಗೆ ಪ್ರತಿಕ್ರಿಯಿಸಲ್ಲ.

ಬಳ್ಳಾರಿ ಲೋಕಸಭೆಯ ಉಪಚುನಾವಣೆ ಗೆಲ್ಲುವ ವಿಶ್ವಾಸ ಇದೆಯೇ, ಫಲಿತಾಂಶದ ಹೊಣೆ ಯಾರದ್ದು?

-ಹೊಣೆ ಎಲ್ಲರೂ ಹೊರುತ್ತೇವೆ. ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು, ನಾನು, ಪರಮೇಶ್ವರ್, ಕಾಂಗ್ರೆಸ್ ಶಾಸಕರು ಎಲ್ಲರೂ. ಎಲ್ಲ ಕ್ಷೇತ್ರದಲ್ಲೂ ಗೆಲ್ಲುವ ವಿಶ್ವಾಸ ಇದೆ.

ಹಿತಶತ್ರು ಗಳಿದ್ದಾರೆಯೇ?

– ಬೇಕಾದಷ್ಟು ಏಟು ತಿಂದಿದ್ದೇನೆ, ಸಾಕಷ್ಟು ಸಂತೋಷ ಪಟ್ಟಿದ್ದೇನೆ. ಒಳಗೂ ಪೆಟ್ಟುಗಳು ಬೀಳಬೇಕು.

ಶ್ರೀರಾಮುಲು ಅವರು ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ ಎಂದು ನಿಮ್ಮ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ..

-ನಮ್ಮಣ್ಣ ಶ್ರೀರಾಮುಲು ಅವರಿಗೆ ಬಳ್ಳಾರಿ ಜನರ ಮೇಲೆ ನಂಬಿಕೆ ಇದ್ದಿದ್ದರೆ ಮೊಳಕಾಲ್ಮೂರು ಕ್ಷೇತ್ರಕ್ಕೆ ಏಕೆ ಹೋಗುತ್ತಿದ್ದರು? ತಿಪ್ಪೇಸ್ವಾಮಿ ಅವರಿಗೆ ತೊಂದರೆ ಮಾಡಿ ಪಕ್ಕದ ಜಿಲ್ಲೆಗೆ ಹೋಗಿ ಏಕೆ ನಿಲ್ಲಬೇಕಿತ್ತು?

ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಈಗ ತಪ್ಪು ಎನಿಸಿದ್ದೇಕೆ? ಈಗ ಜ್ಞಾನೋದಯ ಆಯಿತೇ?

-ನಾನು ಗಾಡಿ ಓಡಿಸಿದ್ದು ಸರಿ ಇಲ್ಲ ಎಂದು ಗೊತ್ತಾಗುವುದು, ಗಾಡಿ ಅಪಘಾತಕ್ಕೆ ಒಳಗಾದಾಗ ತಾನೇ? ಈಗ ನನಗೆ ಹಾಗೆ ಅನಿಸಿತು, ನನ್ನ ಆತ್ಮಸಾಕ್ಷಿ ಪ್ರಕಾರ ಹೇಳಿದ್ದೇನೆ.

ಪ್ರತ್ಯೇತ ಲಿಂಗಾಯತ ಧರ್ಮ ಮಾಡಲು ಹೊರಟಾಗಲೇ ನೀವು ಹೇಳಬಹುದಿತ್ತಲ್ಲವೇ?

-ಸಚಿವ ಸಂಪುಟದ ಸಭೆಯಲ್ಲಿ ನಾನಿದ್ದ ಕಾರಣ ಇದರಲ್ಲಿ ಭಾಗಿ ಯಾಗಿದ್ದೇನೆ ಎಂದು ಹೇಳಬಹುದು. ಆದರೆ ಆಂತರಿಕವಾಗಿ ಏನು ಚರ್ಚೆಯಾಗಿದೆ ಎಂಬುದನ್ನು ನಾನು ಹೇಳುವುದಿಲ್ಲ.

ನೀವು ಕ್ಷಮೆ ಕೇಳಿದಿರಿ, ಆದರೆ ನಿಮ್ಮ ಪಕ್ಷದ ಬೇರೆಯವರು ಕೇಳುತ್ತಿಲ್ಲವಲ್ಲ? ಕ್ಷಮೆ ಕೋರಿದ್ದು ಕಾಂಗ್ರೆಸ್​ಗೆ ಲಾಭ ತರುತ್ತೋ?

-ಕೆಲವರು ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುತ್ತಾರೆ. ನಾನು ಕ್ಷಮಾಪಣೆ ಕೇಳಿದ್ದೇನೆ. ಅದು ಕೆಲವರಿಗೆ ಅಸಮಾಧಾನ ತಂದರೆ ಏನೂ ಚಿಂತೆ ಇಲ್ಲ. ಲಾಭದ ಬಗ್ಗೆ ಸಮಯ ಬಂದಾಗ ಹೇಳುತ್ತೇನೆ.

ಚುನಾವಣೆ ನಂತರ ಸರ್ಕಾರ ಬಿದ್ದುಹೋಗುತ್ತೆ ಎಂಬ ಮಾತುಗಳು ಕೇಳಿಬರುತ್ತವೆ.

– ಎಲ್ಲವೂ ಫಸ್ಟ್ ಕ್ಲಾಸ್ ಆಗಿದೆ. ಕುಮಾರಸ್ವಾಮಿ ನಾಯಕತ್ವದಲ್ಲಿ ಸರ್ಕಾರ ಐದು ವರ್ಷ ಪೂರೈಸುತ್ತದೆ.

ಪಕ್ಷದ ಮುಖಂಡರಿಗೆ ಚುನಾವಣೆ ಸಂಬಂಧ ಏನು ಹೇಳುತ್ತೀರ?

-ಇದು ನನ್ನ ಚುನಾವಣೆಯಲ್ಲ, ಪಕ್ಷದ ಚುನಾವಣೆ. ಎಲ್ಲರೂ ಪ್ರಚಾರಕ್ಕೆ ಬರಬೇಕು, ಅವರವರ ಜವಾಬ್ದಾರಿ ನಿಭಾಯಿಸಬೇಕು.

ನೀವು ಒಕ್ಕಲಿಗ ನಾಯಕರಾಗಿ ಒಕ್ಕಲಿಗ ಸಂಘಟನೆಯ ವಿಚಾರದಲ್ಲಿ ಪ್ರವೇಶಿಸಿದ್ದಕ್ಕೆ ಪಶ್ಚಾತ್ತಾಪವಾಗುತ್ತಿದ್ದೆಯೇ?

– ಖಂಡಿತ ನನಗೆ ಪಶ್ಚಾತ್ತಾಪ ಕಾಡುತ್ತಿದೆ. ನಾನು ನನ್ನ ಸಮಯ ಹಾಳುಮಾಡಿಕೊಂಡೆ ಅನಿಸುತ್ತಿದೆ. ನಾನು ರಾಜಕೀಯ ಪಕ್ಷದ ಮುಖಂಡನಾಗಿ ಒಕ್ಕಲಿಗ ಸಂಘದ ವಿಚಾರದಲ್ಲಿ ತಲೆ ಹಾಕಿದ್ದು ತಪ್ಪು ಅನಿಸುತ್ತಿದೆ. ಒಕ್ಕಲಿಗ ಸಂಘದ ಭಿನ್ನಮತ ಬಗೆಹರಿಸಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಮುಂದೆ ಎಂದಿಗೂ ಒಕ್ಕಲಿಗ ಸಂಘಟನೆ ವಿಚಾರಕ್ಕೆ, ಜಾತಿ ವಿಚಾರಕ್ಕೆ ತಲೆ ಹಾಕಬಾರದು ಎಂದು ತೀರ್ವನಿಸಿದ್ದೇನೆ. ನಾನು ಇನ್ನು ಮುಂದೆ ಒಕ್ಕಲಿಗ ಸಂಘದ ವಿಚಾರದಲ್ಲಿ ಭಾಗಿಯಾಗುವುದಿಲ್ಲ ಎಂದು ದೇವೇಗೌಡರಿಗೂ ಹೇಳಿದ್ದೇನೆ.

ಸಿದ್ದರಾಮಯ್ಯ ಕೂಡ ಕ್ಷಮೆ ಕೇಳಬೇಕಾ? ಅವರದ್ದೂ ಪಾತ್ರವಿದೆಯಲ್ಲ?

– ಇದರಲ್ಲಿ ಅವರ ತಪ್ಪಿಲ್ಲ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನೀಡಿದ್ದ ಅಭಿಪ್ರಾಯದಿಂದ ಸಮಿತಿ ರಚಿಸಿದ್ದು, ಅದರಲ್ಲಿ ಒತ್ತಡವಿತ್ತು. ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ಪಕ್ಷದಲ್ಲಿ ಚರ್ಚೆಯಾಗಿಲ್ಲ. ನನ್ನ ಪ್ರಕಾರ, ಸರ್ಕಾರ ಹಾಗೂ ಪಕ್ಷಗಳು ಜಾತಿ-ಧರ್ಮದ ವಿಚಾರದಲ್ಲಿ ಮಧ್ಯೆ ಪ್ರವೇಶಿಸಬಾರದು.