ಡಿಕೆಶಿ ವಿರುದ್ಧ ದೆಹಲಿಯಲ್ಲಿ ಇಡಿ ಅಧಿಕಾರಿಗಳಿಂದ ಎಫ್​ಐಆರ್​ ದಾಖಲು

ಬೆಂಗಳೂರು: ದೆಹಲಿಯ ಅಪಾರ್ಟ್​ವೆುಂಟ್​ನಲ್ಲಿ ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದ 8.59 ಕೋಟಿ ರೂ.ಗೆ ಸಂಬಂಧಿಸಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್​ಗೆ ಜಾರಿ ನಿರ್ದೇಶನಾಲಯ ದೆಹಲಿಯಲ್ಲಿ ಎಫ್​ಐಆರ್ ದಾಖಲಿಸಿದ್ದು, ಬಂಧನ ಭೀತಿ ಎದುರಾಗಿದೆ.

ಪ್ರಕರಣದ ಎ1 ಆರೋಪಿ ಡಿ.ಕೆ. ಶಿವಕುಮಾರ್, ಎ2 ಸುನೀಲ್ ಶರ್ಮಾ, ಎ3 ಆಂಜನೇಯ ಮತ್ತು ಎ4 ರಾಜೇಂದ್ರ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದ್ದು, ಈ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆ ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಿತ್ತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದರಿಂದ ನಿರಾಳರಾಗಿದ್ದ ಡಿಕೆಶಿ ಈಗ ಮತ್ತೆ ಬಂಧನ ಭೀತಿಗೆ ಸಿಲುಕಿದ್ದಾರೆ.

ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಎಸ್. ಆಳ್ವ ಜಾಮೀನು ಮಂಜೂರು ಮಾಡಿ ಶನಿವಾರ ಆದೇಶ ಹೊರಡಿಸಿದ್ದರು. ಜತೆಗೆ 25 ಸಾವಿರ ರೂ. ಶ್ಯೂರಿಟಿ ಮತ್ತು 1 ಲಕ್ಷ ರೂ. ಬಾಂಡ್ ನೀಡಲು ಸೂಚಿಸಿದ್ದರು. ಅಲ್ಲದೆ, ಸಾಕ್ಷಿಗಳ ಮೇಲೆ ಪರಿಣಾಮ ಬೀರಬಾರದು ಮತ್ತು ತನಿಖೆಗೆ ಸಹಕರಿಸಬೇಕು ಎಂದು ತಿಳಿಸಿದ್ದರು. (ದಿಗ್ವಿಜಯ ನ್ಯೂಸ್​)