ಐಟಿ ‘ಇಡಿ’ತಕ್ಕೆ ಡಿಕೆಶಿ

ಬೆಂಗಳೂರು: ಐಟಿ ದಾಳಿ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಕಾಂಗ್ರೆಸ್​ನ ಪ್ರಭಾವಿ ಮುಖಂಡ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್​ಗೆ ಬಂಧನ ಭೀತಿ ಎದುರಾಗಿದೆ. ದೆಹಲಿಯ ಅಪಾರ್ಟ್​ವೆುಂಟ್​ನಲ್ಲಿ 8.59 ಕೋಟಿ ರೂ. ಪತ್ತೆಯಾದ ಪ್ರಕರಣ ಸಂಬಂಧ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಜಾರಿ ನಿರ್ದೇಶನಾಲಯ(ಇ.ಡಿ) ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ವಿಚಾರಣೆ ವೇಳೆ ಡಿಕೆಶಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಐಟಿ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅಪಾರ್ಟ್​ವೆುಂಟ್​ನಲ್ಲಿ ಪತ್ತೆಯಾದ ಹಣದ ಜತೆಗೆ ಹವಾಲಾ ಮೂಲಕ ಏಜೆಂಟ್​ಗಳ ಸಹಾಯದಿಂದಲೂ ಡಿಕೆಶಿ ಕೋಟ್ಯಂತರ ರೂ.ಗಳನ್ನು ಕಾಂಗ್ರೆಸ್ ಹೈಕಮಾಂಡ್​ಗೆ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ವಿದೇಶದಲ್ಲೂ ಡಿಕೆಶಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಹಣದ ಮೂಲದ ಬಗ್ಗೆ ಸೂಕ್ತ ರೀತಿಯಲ್ಲಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ದೆಹಲಿಯ ಇ.ಡಿ. ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದ ಕೆಲ ಮಹತ್ವದ ಮಾಹಿತಿಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಕಲೆ ಹಾಕಿದ್ದಾರೆ.

ಡಿಕೆಶಿಗೆ ಸೇರಿದ್ದೆನ್ನಲಾದ ಹಣ ದೆಹಲಿಯ ಅಪಾರ್ಟ್​ವೆುಂಟ್​ನಲ್ಲಿ ಸಿಕ್ಕ ಹಿನ್ನೆಲೆಯಲ್ಲಿ ಅಲ್ಲಿನ ಇ.ಡಿ. ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲಿದ್ದಾರೆ. ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಸಾವಿರಾರು ಕೋಟಿ ರೂ.ಗಳನ್ನು ಬದಲಾಯಿಸಿದ್ದಾರೆ; ಆಪ್ತರ ಮೂಲಕ ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಡಿಕೆಶಿ ಪ್ರತಿತಂತ್ರ : ಇ.ಡಿ. ಕಾರ್ಯಾಚರಣೆ ಸಾಧ್ಯತೆಯ ಸುಳಿವು ಸಿಗುತ್ತಿದ್ದಂತೆಯೇ ಬಂಧನದಿಂದ ತಪ್ಪಿಸಿಕೊಳ್ಳುವ ಯತ್ನವಾಗಿ ಸಚಿವರು ಕಾನೂನು ತಜ್ಞರ ಮೊರೆ ಹೋಗಿದ್ದಾರೆ.

ನಾಳೆ ಕೇಸ್?

ಭಾನುವಾರ ಸರ್ಕಾರಿ ರಜೆಯಿರುವ ಹಿನ್ನೆಲೆಯಲ್ಲಿ ಸೋಮವಾರ(ಸೆ.10) ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಡಿಕೆಶಿ ಪ್ರತಿತಂತ್ರ

ಇಡಿ ಕಾರ್ಯಾಚರಣೆ ಸಾಧ್ಯತೆಯ ಸುಳಿವು ಸಿಗುತ್ತಿದ್ದಂತೆಯೇ ಬಂಧನದಿಂದ ತಪ್ಪಿಸಿಕೊಳ್ಳುವ ಯತ್ನವಾಗಿ ಸಚಿವರು ಕಾನೂನು ತಜ್ಞರ ಮೊರೆ ಹೋಗಿದ್ದಾರೆ.

ಮುಂದೇನಾಗಬಹುದು?

 • ಹೆಚ್ಚಿನ ತನಿಖೆಗಾಗಿ ಬಂಧನ ಅನಿವಾರ್ಯ ಎಂದು ಇ.ಡಿ. ವಾದಿಸಬಹುದು
 • ಪ್ರಕರಣವನ್ನು ಬೆಂಗಳೂರಿನ ಇ.ಡಿ. ಅಧಿಕಾರಿಗಳಿಗೆ ವರ್ಗಾಯಿಸಬಹುದು.
 • ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಬಹುದು
 • ಸೂಕ್ತ ರೀತಿಯಲ್ಲಿ ಮಾಹಿತಿ ನೀಡಲಿಲ್ಲ ಎಂಬ ಕಾರಣ ನೀಡಿ ಬಂಧಿಸಬಹುದು
 • ಇದಕ್ಕೂ ಮೊದಲು ರಾಜ್ಯಪಾಲರು, ಸಿಎಂ, ಸ್ಪೀಕರ್ ಅನುಮತಿ ಪಡೆದುಕೊಳ್ಳಬಹುದು.
 • ನೋಟಿಸ್ ನೀಡದೆಯೇ ಫೆಮಾ ಕಾಯ್ದೆ ಅಡಿಯಲ್ಲಿ ಬಂಧಿಸುವ ಅವಕಾಶ ಬಳಸಿಕೊಳ್ಳಬಹುದು
 • ಬೇನಾಮಿ ಅಥವಾ ಅಕ್ರಮ ಆಸ್ತಿ ಹೊಂದಿದ್ದರೆ ಫೆಮಾದಡಿ ಜಪ್ತಿ ಮಾಡಿಕೊಳ್ಳಬಹುದು.

 

ಸಾಧ್ಯಾಸಾಧ್ಯತೆ

 • ಸಚಿವರಾಗಿರುವ ಹಿನ್ನೆಲೆಯಲ್ಲಿ ಏಕಾಏಕಿ ಬಂಧಿಸಲು ಸಾಧ್ಯವಿಲ್ಲವಾದ್ದರಿಂದ ಇ.ಡಿ. ಸಮನ್ಸ್ ಜಾರಿ ಮಾಡಿದ ಕೂಡಲೇ ಜಾಮೀನಿಗಾಗಿ ದೆಹಲಿ ಹೈಕೋರ್ಟ್​ನ ಮೊರೆ ಹೋಗಬಹುದು.
 • ಬಂಧಿಸದಂತೆ ಕೋರ್ಟ್ ಸೂಚಿಸಿದರೆ ನಿರಾಳರಾಗಬಹುದು.
 • ದೆಹಲಿಯ ಜಾರಿ ನಿರ್ದೇಶನಾಲಯದಲ್ಲಿ ಪ್ರಕರಣ ದಾಖಲಾದರೆ ಅನಿವಾರ್ಯವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಬಹುದು.
 • ಆರೋಪ ಸಾಬೀತಾದರೆ 3ರಿಂದ 7 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ

 

ವಿಚಾರಣೆಗಾಗಿ ಇ.ಡಿ. ಅಧಿಕಾರಿ ಗಳು ಬೆಂಗಳೂರಿಗೆ ಬಂದಿರುವ ಮಾಹಿತಿ ಸಿಕ್ಕಿದೆ. ನಾವು ಹೆದರಲ್ಲ. ರಾಜ್ಯ ಬಿಜೆಪಿಗರ ಕುತಂತ್ರವನ್ನು ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ತರುತ್ತೇನೆ.

| ಡಿ.ಕೆ.ಸುರೇಶ್, ಸಂಸದ