ಡಿಕೆ ಬ್ರದರ್ಸ್ ಬಂಧನ ಕಳವಳ ಕೈ ತಳಮಳ

ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಕೇಂದ್ರದ ತನಿಖಾ ಸಂಸ್ಥೆಗಳು ಬೆನ್ನು ಬಿದ್ದಿವೆ ಎಂಬ ಸುದ್ದಿ ಕಾಂಗ್ರೆಸ್ ನಾಯಕರಲ್ಲಿ ಕಂಪನ ಹುಟ್ಟಿಸಿದೆ. ‘ಯಾವುದೇ ಸಂದರ್ಭದಲ್ಲಾದರೂ ಡಿಕೆಶಿ ಬಂಧನವಾಗಬಹುದಂತೆ ಹೌದಾ’ ಎನ್ನುವುದು ಪಕ್ಷದ ಕಚೇರಿಯಲ್ಲಿ ಬಹುರ್ಚಚಿತ ಪ್ರಶ್ನೆ. ಕೈ ನಾಯಕರಲ್ಲೂ ಒಳಗೊಳಗೆ ದುಗುಡ ಆವರಿಸಿದೆ.

ಡಿ.ಕೆ.ಶಿವಕುಮಾರ್ ಪ್ರಭಾವಿ, ಅವರು ಈ ಸವಾಲನ್ನೆಲ್ಲ ಎದುರಿಸಬಲ್ಲರು ಎಂಬ ಮಾತು ಮುಖಂಡರ ಬಾಯಲ್ಲಿ ಬಂದರೂ, ಏನು ಬೇಕಾದರೂ ಆಗಬಹುದೆಂಬ ಅಳುಕು ಸಹ ಇದ್ದೇ ಇದೆ. ಶನಿವಾರ ಬೆಳಗಿನ ಬೆಳವಣಿಗೆಯಲ್ಲಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಪತ್ರಿಕಾಗೋಷ್ಠಿ ನಡೆಸಿದ್ದು, ಪಕ್ಷದ ಪಾಳಯದಲ್ಲಿ ಅಳುಕು ಹುಟ್ಟುಹಾಕಿದ್ದು ಸುಳ್ಳಲ್ಲ.

ಲೋಕಸಭಾ ಚುನಾವಣೆ ತಯಾರಿಯಲ್ಲಿ ಬಿರುಸಾಗಿ ತೊಡಗಿಕೊಂಡ ಸಂದರ್ಭದಲ್ಲಿ ಪದೇಪದೆ ಅಡೆತಡೆಗಳು ಸಂಘಟನೆಯನ್ನು ಗೊಂದಲಕ್ಕೆ ನೂಕಿವೆ. ಬೆಳಗಾವಿ ಪ್ರಕರಣ ಬಳಿಕ ಈಗ ಡಿಕೆಶಿ ಪ್ರಕರಣ ಆರಂಭವಾಗಿದೆ. ಸಹಜವಾಗಿ ಇಂಥ ಘಟನೆಗಳು ಕಾರ್ಯಕರ್ತರ ಮೇಲೆ ಪರಿಣಾಮ ಬೀರಲಿದೆ ಎಂದು ಪಕ್ಷದ ಪದಾಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ಡಿ.ಕೆ.ಶಿವಕುಮಾರ್ ಪ್ರಮುಖ ಮುಖಂಡರಲ್ಲಿ ಒಬ್ಬರು. ಪಕ್ಷದ ಅನೇಕ ಕ್ಲಿಷ್ಟ ಸಂದರ್ಭಗಳಲ್ಲಿ ಟ್ರಬಲ್ ಶೂಟರ್ ಆಗಿ ಕಾಣಿಸಿಕೊಂಡವರು. ಚುನಾವಣೆ ವೇಳೆ ಅವರ ಪಾತ್ರ ಪ್ರಮುಖವಾದುದು. ಒಂದು ವೇಳೆ ಅವರನ್ನು ರಾಜಕೀಯ ಉದ್ದೇಶದಿಂದ ಬಂಧಿಸಿದ್ದೇ ಆದರೆ ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಖಂಡಿತ ಹಿನ್ನೆಡೆಯಾಗಲಿದೆ ಎಂಬುದು ಮುಖಂಡರ ಆತಂಕ.

ಬಿಜೆಪಿ ವಿರುದ್ಧ ದಿನೇಶ್ ಕಿಡಿ: ಡಿಕೆಶಿ ಬಂಧನ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ‘ಬಿಜೆಪಿಯವರು ಸರ್ಕಾರ ಬೇಗ ಬೀಳಲಿದೆ ಎಂದು ಹೇಳುತ್ತಿದ್ದಾರೆ. ಇಂತಹ ನೀತಿಗೆಟ್ಟ ಪಕ್ಷ ದೇಶದಲ್ಲಿ ಇನ್ನೊದಿಲ್ಲ. ಬಿಜೆಪಿ ವಿರುದ್ಧ ಯಾರೂ ಮಾತನಾಡುವಂತೆಯೇ ಇಲ್ಲ. ಹಾಗೆ ಮಾಡಿದ್ದೇ ಆದಲ್ಲಿ ಮುಗಿಸುವ ಪ್ರಯತ್ನ ಮಾಡುತ್ತಾರೆ. ಇಲ್ಲವೇ ಕಿರುಕುಳ ಕೊಡುತ್ತಾರೆ. ಡಿಕೆ ಸಹೋದರರನ್ನು ಜೈಲಿಗೆ ಕಳುಹಿಸುತ್ತೇವೆ ಅಂತಾರೆ. ಇದನ್ನು ಹೇಳಲು ಬಿಜೆಪಿಯವರು ಯಾರು’ ಎಂದು ಪ್ರಶ್ನಿಸಿದರು. ‘ಬಿಜೆಪಿಯವರು ಅಧಿಕಾರ ಹಿಡಿಯಲು ಏನು ಬೇಕಾದರೂ ಮಾಡುತ್ತಾರೆ. ಸಿಬಿಐ, ಐಟಿ, ಇಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಶಾಸಕರ ಕುದುರೆ ವ್ಯಾಪಾರಕ್ಕೂ ಮುಂದಾಗಿದ್ದಾರೆ. ಈಗಾಗಲೇ ಎಷ್ಟು ಜನರಿಗೆ ತೊಂದರೆಕೊಟ್ಟಿದ್ದಾರೆ. ಗೋವಿಂದರಾಜು, ರಮೇಶ್ ಜಾರಕಿಹೊಳಿ, ಈಗ ಡಿಕೆಶಿಯವರಿಗೆ ತೊಂದರೆ ಕೊಡುತ್ತಿದ್ದಾರೆ’ ಎಂದರು.

ಮಾಜಿ ಸಿಎಂ ಬಿಎಸ್​ವೈ ಬರೆದರೆಂಬ ಪತ್ರ ಬಿಡುಗಡೆ

ಬೆಂಗಳೂರು: ಇಡಿಗೆ ಯಡಿಯೂರಪ್ಪ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಸಂಸದ ಡಿ.ಕೆ. ಸುರೇಶ್ ಬಿಡುಗಡೆ ಮಾಡಿದರು. ಕೇಂದ್ರ ಸರ್ಕಾರದ ಅಧೀನ ದಲ್ಲಿರುವ ತನಿಖಾ ಸಂಸ್ಥೆಯನ್ನು ರಾಜ್ಯ ಬಿಜೆಪಿ ನಾಯಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಿಎಸ್​ವೈ ಕೂಡ 2017ರ ಜನವರಿ 10ರಂದು ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದಿದ್ದಾರೆ. ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಮತ್ತು ಅವರ ಸಹವರ್ತಿಗಳು ಭ್ರಷ್ಟಾಚಾರ ನಡೆಸಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಕೂಡಲೇ ತನಿಖೆ ನಡೆಸಿ ಕ್ರಮಕೈಗೊಳ್ಳಿ ಎಂದು ಐಟಿ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಉಲ್ಲೇಖವಿದೆ. ಪತ್ರ ಬರೆದು ಒತ್ತಡ ಹೇರಿರುವ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ ಎಂದು ಸುರೇಶ್ ದೂರಿದರು.

ಪತ್ರ ಆರೋಪ: ಡಿ.ಕೆ.ಶಿವಕುಮಾರ್ ವಿರುದ್ಧ ಐಟಿ ದಾಳಿ ನಡೆಸಲು ಪ್ರೇರೇಪಿಸಿ ಯಡಿಯೂರಪ್ಪ ಪತ್ರ ಬರೆದಿದ್ದರೆಂಬ ಸಂಸದ ಡಿ.ಕೆ.ಸುರೇಶ್ ಆರೋಪ ಹಾಗೂ ಅದು ನಕಲಿ ಎಂಬ ಬಿಎಸ್​ವೈ ಸ್ಪಷ್ಟನೆ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಸುರೇಶ್ ಬಿಡುಗಡೆ ಮಾಡಿದ ಪತ್ರಕ್ಕೆ ಪ್ರತಿಯಾಗಿ, ಯಡಿಯೂರಪ್ಪರ ಅಸಲಿ ಲೆಟರ್​ಹೆಡ್​ಗಿಂತ ಭಿನ್ನವಾಗಿರುವುದನ್ನು ಎತ್ತಿ ತೋರಿಸಿ, ಇದು ಸುಳ್ಳು ಪತ್ರ ಎಂದು ಬಿಜೆಪಿ ಸರಣಿ ಟ್ವೀಟ್ ಮಾಡಿದೆ.

ಡಿ.ಕೆ.ಸುರೇಶ್ ಪತ್ರಕ್ಕೆ ಬಿಜೆಪಿ ಸರಣಿ ಟ್ವೀಟ್

ಡಿ.ಕೆ.ಸುರೇಶ್ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ ರಾಜ್ಯ ಬಿಜೆಪಿ ಸರಣಿ ಟ್ವೀಟ್​ಗಳ ಮೂಲಕ ಆರೋಪವನ್ನು ಅಲ್ಲಗಳೆಯಿತು. ರಾಜಕಾರಣಕ್ಕೆ ಬಂದಂದಿನಿಂದಲೂ ಭ್ರಷ್ಟಾಚಾರ ನಡೆಸಿ ಅಗಾಧ ಆಸ್ತಿ ಮಾಡಿಕೊಂಡಿರುವ ಡಿಕೆ ಸಹೋದರರು, ಯಡಿಯೂರಪ್ಪ ಪತ್ರ ಬರೆದಿದ್ದಾರೆ ಎಂಬಂತಹ ಸುಳ್ಳನ್ನು ಮಾಧ್ಯಮಗಳೆದುರು ಹೆಣೆದು ಐಟಿ ಹಾಗೂ ಇಡಿ ತನಿಖೆಯನ್ನು ಪ್ರಭಾವಿಸಲು ಮುಂದಾಗಿದ್ದಾರೆ. ಸುರೇಶ್ ಬಿಡುಗಡೆ ಮಾಡಿರುವ ಲೆಟರ್​ಹೆಡ್​ನಲ್ಲಿ ಯಡಿಯೂರಪ್ಪ ಹೆಸರಿನ ಕೆಳಗೆ ‘ಮಾಜಿ ಮುಖ್ಯಮಂತ್ರಿ’ ಎಂಬ ವಾಕ್ಯವಿಲ್ಲ. ಅಸಲಿ ಲೆಟರ್​ಹೆಡ್​ನಲ್ಲಿ ದೆಹಲಿ ವಿಳಾಸವಿದ್ದರೆ, ಸುರೇಶ್ ಬಿಡುಗಡೆ ಮಾಡಿರುವ ಪತ್ರದಲ್ಲಿ ಬೆಂಗಳೂರು ವಿಳಾಸವಿದೆ. ಆದರೆ ಶಿವಮೊಗ್ಗದ ದೂರವಾಣಿ ಸಂಖ್ಯೆಯಿದೆ. ಇಮೇಲ್ ಐಡಿ ತಪ್ಪಾಗಿದೆ, ಸಾಮಾನ್ಯವಾಗಿ ಬಿಎಸ್​ವೈ ಪತ್ರದ ಬಲಗಡೆ ಸಹಿ ಮಾಡುತ್ತಾರೆ. ಈ ಪತ್ರದಲ್ಲಿ ಎಡಗಡೆ ಸಹಿ ಇದೆ. ಜಾತಿಯನ್ನು ಆಧಾರವಾಗಿಸಿಕೊಂಡು ತಮ್ಮನ್ನು ಹಾಗೂ ಅನಧಿಕೃತ ಆಸ್ತಿಯನ್ನು ಕಾನೂನು ಕುಣಿಕಿಕೆಯಿಂದ ಬಚಾವು ಮಾಡಿಕೊಳ್ಳವುದು ಇವರ ಉದ್ದೇಶ ಎಂದು ಬಿಜೆಪಿ ಕಿಡಿಕಾರಿದೆ.

ನನ್ನ ಹೆಸರಿನಲ್ಲಿ ನಕಲಿ ಪತ್ರ

2017ರ ಜನವರಿಯಿಂದ ಇಲ್ಲಿಯವರೆಗೆ ನಾನು ಡಿ.ಕೆ.ಶಿವಕುಮಾರ್ ವಿರುದ್ಧ ಆರೋಪ ಮಾಡಿಲ್ಲ. ನಮ್ಮಿಬ್ಬರ ನಡುವೆ ಉತ್ತಮ ಸಂಬಂಧ ಇದೆ. ಈ ಕುರಿತು ಶಿವಕುಮಾರ್ ಅವರನ್ನೆ ಒಮ್ಮೆ ಸುರೇಶ್ ಕೇಳಿಕೊಳ್ಳಲಿ. ಅವರೇಕೆ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ತಿಳಿದಿಲ್ಲ. ಆ ಪತ್ರ ಸಂಪೂರ್ಣ ನಕಲಿ. ನನ್ನದೇ ಆದ ರೀತಿಯಲ್ಲಿ ರಾಜಕೀಯ ಪಾಲಿಸಿಕೊಂಡು ಬಂದಿರುವ ನನ್ನ ವಿರುದ್ಧ ಇಂತಹ ಆರೋಪ ಸರಿಯಲ್ಲ. ಆಧಾರ ರಹಿತ ಆರೋಪ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾದರೆ, ನಾನೇನೂ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಡಿಕೆಶಿ ಅವರೇ ಸ್ಪಷ್ಟಪಡಿಸಲಿ. ನನ್ನ ಪುತ್ರ ವಿಜಯೇಂದ್ರ ಐಟಿ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ ಎಂದು ಸಿಎಂ ಹೇಳಿದ್ದರು. ಈಗ ಇವರು ಇಡಿಗೆ ಪತ್ರ ಬರೆದಿದ್ದೇನೆ ಎನ್ನುತ್ತಿದ್ದಾರೆ. ಐಟಿ, ಇಡಿಗೂ ಯಡಿಯೂರಪ್ಪನಿಗೂ ಏನು ಸಂಬಂಧ? ಎಂದು ಬಿಎಸ್​ವೈ ಪ್ರಶ್ನಿಸಿದ್ದಾರೆ.

ಸರ್ಕಾರಕ್ಕಾವರಿಸಿದ ಅಸ್ಥಿರತೆ ಭಯ

ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಸುತ್ತುವರಿದಿದ್ದು ಬಂಧನವಾಗುತ್ತದೆ ಎಂಬ ಊಹಾಪೋಹದ ಸುದ್ದಿ ಸಮ್ಮಿಶ್ರ ಸರ್ಕಾರದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಇದರಿಂದಾಗಿ ಸಮ್ಮಿಶ್ರ ಸರ್ಕಾರದ ಭವಿಷ್ಯ ಕುರಿತಾದ ಚರ್ಚೆ ರಾಜಕೀಯ ವಲಯದಲ್ಲಿ ಮತ್ತೊಮ್ಮೆ ಆರಂಭವಾಗಿದೆ. ಡಿಕೆಶಿ ಹಣಿಯುವ ಮೂಲಕ ಸಮ್ಮಿಶ್ರ ಸರ್ಕಾರ ಕೆಡವಲು ಪ್ರಯತ್ನ ನಡೆದಿದೆ ಎಂಬ ಮಾತುಗಳು ಕೇಳಿಬಂದಿವೆೆ. ಕಾಂಗ್ರೆಸ್ ಸಂಸದರೇ ಹೇಳಿರುವಂತೆ, ಪ್ರಮುಖ ಕೈ ನಾಯಕರು ಹಾಗೂ ಶಾಸಕರಿಗೆ ಬಿಜೆಪಿ ನಾಯಕರು ಗಾಳ ಹಾಕಿದ್ದಾರೆ! ಜಾರಕಿಹೊಳಿ ಸಹೋದರರನ್ನು ಬಿಜೆಪಿಗೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಶ್ರೀರಾಮುಲು ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡಿದ್ದಾರೆಂಬ ವದಂತಿ ಇದೆ.

ಜೆಡಿಎಸ್​ನಲ್ಲೂ ಆತಂಕ

ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸಚಿವ ಡಿ.ಕೆ.ಶಿವಕುಮಾರ್ ಬಂಧನ ವದಂತಿ ಜೆಡಿಎಸ್ ವಲಯದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದೆ. ಶಿವಕುಮಾರ್ ಪ್ರಕರಣ ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೆ ಉಂಟು ಮಾಡಬಹುದಾದ ಪರಿಣಾಮಗಳು ಹಾಗೂ ಅದರಿಂದ ಮುಂದೆ ಆಗುವ ಬೆಳವಣಿಗೆಗಳ ಕುರಿತು ಆಂತರಿಕ ಚರ್ಚೆಗಳು ಆರಂಭವಾಗಿವೆ. ಜಾರಿ ನಿರ್ದೇಶನಾಲಯ ಡಿಕೆಶಿ ಬಂಧನಕ್ಕೆ ಮುಂದಾದರೆ ನಂತರ ಯಾವ ರೀತಿ ಸರ್ಕಾರವನ್ನು ಸಮರ್ಥಿಸಿಕೊಳ್ಳಬೇಕು, ಸರ್ಕಾರವನ್ನು ರಕ್ಷಿಸಿಕೊಳ್ಳಬೇಕು ಎಂಬ ಬಗೆಗೆ ಚಿಂತನೆ ನಡೆದಿದೆ. ಈ ಎಲ್ಲ ಬೆಳವಣಿಗೆಗಳನ್ನು ಮೌನವಾಗಿ ಗಮನಿಸುತ್ತಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಇಡೀ ವಿದ್ಯಮಾನದ ಕುರಿತು ಈತನಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸರ್ಕಾರದ ಮೇಲೆ ಕಾನೂನಾತ್ಮಕ ಮತ್ತು ರಾಜಕೀಯವಾಗಿ ಆಗುವ ಪರಿಣಾಮಗಳ ಕುರಿತಂತೆ ಆಲೋಚನೆಯಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ. ಶುಕ್ರವಾರ ಸಂಜೆಯೇ ಸಿಎಂ ಕುಮಾರಸ್ವಾಮಿ, ಶಿವಕುಮಾರ್ ಬಂಧನ ಯತ್ನಗಳ ಬಗೆಗೆ ಪರೋಕ್ಷ ಅಸಮಾಧಾನ ಹೊರಹಾಕಿದ್ದರಿಂದ ಈ ವಿಚಾರ ಪಕ್ಷದ ಒಳಗೆ ಗುಪ್ತಗಾಮಿನಿಯಂತೆ ಹರಿದಾಡುತ್ತಲೇ ಇದೆ. ಶನಿವಾರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಕೂಡ ಬಿಜೆಪಿ ಸರ್ಕಾರದ ಸಚಿವರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಪಕ್ಷದ ಕಚೇರಿಯಲ್ಲಿ ಹಲವಾರು ನಾಯಕರ ಜತೆಗೆ ಇದೇ ವಿಚಾರ ವಿಮರ್ಶೆಯಲ್ಲಿ ತೊಡಗಿದ್ದರು.

ಸಿಎಂ-ಡಿಕೆಶಿ ಗೌಪ್ಯ ಚರ್ಚೆ: ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಶನಿವಾರ ಚರ್ಚೆ ನಡೆಸಿದ್ದು, ವಿಚಾರ ವಿನಿಯಮ ಮಾಡಿಕೊಂಡಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ. ಐಟಿ ಕುಣಿಕೆ ಬಿಗಿಯಾದ ವಿಚಾರವನ್ನು ಶಿವಕುಮಾರ್ ಮುಖ್ಯಮಂತ್ರಿ ಬಳಿ ಹೇಳಿಕೊಂಡಿದ್ದಾರೆನ್ನಲಾಗಿದೆ.

ಬಿಜೆಪಿ ಶಾಸಕರಿಗೆ ಶಿವಕುಮಾರ್ ಗಾಳ

ಬಿಜೆಪಿಯ ಇಬ್ಬರು ಶಾಸಕರೊಂದಿಗೆ ಡಿ.ಕೆ.ಶಿವಕುಮಾರ್ ಶುಕ್ರವಾರ ರಾತ್ರಿ ಮಾತುಕತೆ ನಡೆಸಿದ್ದಾರೆಂಬ ಸುದ್ದಿ ಕಾಂಗ್ರೆಸ್ ವಲಯದಲ್ಲಿ ಹರಿದಾಡಿದೆ. ಶಾಸಕರಾದ ಗೂಳಿಹಟ್ಟಿ ಶೇಖರ್ ಮತ್ತು ಪೂರ್ಣಿಮಾ ಅವರನ್ನು ಡಿಕೆಶಿಯವರೇ ಖುದ್ದಾಗಿ ಕರೆಸಿ ಮಾತುಕತೆ ನಡೆಸಿದ್ದಾರೆ. ಸರ್ಕಾರವನ್ನು ಅಸ್ಥಿರತೆಗೆ ತಳ್ಳುವ ಪ್ರಯತ್ನವನ್ನು ವಿಫಲಗೊಳಿಸುವುದು ಅವರ ಈ ಪ್ರಯತ್ನದ ಉದ್ದೇಶ ಎಂದು ಹೇಳಲಾಗುತ್ತಿದೆ.

ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಪತ್ರ ಬರೆದಿರುವುದು ರಾಜಕೀಯ ಷಡ್ಯಂತ್ರ ಅಲ್ಲದೇ ಇನ್ನೇನು?

| ಡಾ.ಜಿ.ಪರಮೇಶ್ವರ್, ಡಿಸಿಎಂ

 

ಸಾಂವಿಧಾನಿಕ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ಸಮ್ಮಿಶ್ರ ಸರ್ಕಾರದ ಸಚಿವರ ವಿರುದ್ಧ ಕೇಂದ್ರ ಸರ್ಕಾರ ದಮನಕಾರಿ ನೀತಿ ಅನುಸರಿಸುತ್ತಿದೆ. ನಾವು ಸಚಿವ ಡಿ.ಕೆ.ಶಿವಕುಮಾರ್ ಅಥವಾ ಇನ್ನಾರದೋ ಪರ ಇಲ್ಲ. ಆದರೆ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತೇವೆ. ಶಿವಕುಮಾರ್ ಕೂಡ ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದಾರೆ. ಹೀಗಾಗಿ ನಾವು ಅನ್ಯಾಯದ ವಿರುದ್ಧ ನಿಲ್ಲುತ್ತೇವೆ.

| ಎಚ್.ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ

 

ಇಡಿ, ಸಿಬಿಐ, ಐಟಿ ಬಿಜೆಪಿ ಮೋರ್ಚಾಗಳಾಗಿವೆ

ಬೆಂಗಳೂರು: ತಮ್ಮನ್ನು ವಿಚಾರಣೆಗೊಳಪಡಿಸಲು ಜಾರಿ ನಿರ್ದೇಶನಾಲಯದವರು ಬೆಂಗಳೂರಿಗೆ ಬಂದಿದ್ದಾರೆಂಬ ಮಾಹಿತಿ ಪಡೆದುಕೊಂಡಿರುವ ಸಂಸದ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಶನಿವಾರ ಬೆಳಗ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಬಂಧನ ಭೀತಿಯನ್ನು ಬಹಿರಂಗವಾಗಿ ತೋರ್ಪಡಿಸದೆ ‘ನಾವು ಎಲ್ಲದಕ್ಕೂ ಸಿದ್ಧ, ಬಂಧಿಸಿದರೂ ಅಂಜುವುದಿಲ್ಲ. ಕಾನೂನಿದೆ’ ಎಂದು ಡಿ.ಕೆ.ಸುರೇಶ್ ಹೇಳಿಕೊಂಡರೂ, ಹಣಕಾಸು ವ್ಯವಹಾರ ವಿಚಾರವಾಗಿ ತನಿಖೆ ಕುಣಿಕೆಯಲ್ಲಿ ಸಿಕ್ಕಿಬೀಳುತ್ತಿರುವ ಬಗ್ಗೆ ಆತಂಕ ಮುಚ್ಚಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ.

ಇನ್ನೊಂದು ವಾರದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗೆ ಕಳಿಸುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ನಾವು ಅದಕ್ಕೆ ಹೆದರಲ್ಲ. ಸಿಬಿಐ ಅಧಿಕಾರಿಗಳು ಬಂಧಿಸಲು ಮುಂದಾದರೂ ಹೆದರಲ್ಲ, ಹೇಗೆ ಕಾನೂನು ಹೋರಾಟ ನಡೆಸಬೇಕು ಎನ್ನುವುದು ನಮಗೆ ಗೊತ್ತು.

| ಡಿ.ಕೆ.ಸುರೇಶ್, ಸಂಸದ

 

ಡಿಕೆಸು ಹೇಳಿದ್ದೇನೇನು?

1. ಸದ್ಯ ಇಡಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ಬಂದರೂ ಬರಬಹುದು. ಕೇಂದ್ರ ಸರ್ಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆಯನ್ನು ರಾಜ್ಯ ಬಿಜೆಪಿ ನಾಯಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ರಾಜ್ಯ ಸರ್ಕಾರ ಅಸ್ಥಿರಗೊಳಿಸುವ ಯತ್ನ ಮಾಡುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆ ಮೇಲೆ ಒತ್ತಡ ಹೇರಿದ್ದಕ್ಕೆ ನಮ್ಮ ಬಳಿ ದಾಖಲೆ ಇದೆ.

2. ರಾಜ್ಯ ಬಿಜೆಪಿ ನಾಯಕರ ಕುತಂತ್ರ ಮಾಹಿತಿ ನೀಡಲು ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅವಕಾಶ ಕೇಳಿದ್ದೇನೆ. ಪ್ರಧಾನಿ ಅರಿವಿಗೆ ಇಲ್ಲದೇ ಅವರ ಅಧೀನದಲ್ಲಿನ ತನಿಖಾ ಸಂಸ್ಥೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮೋದಿ ಅವರನ್ನು ಭೇಟಿ ಮಾಡಿ ವಿಚಾರ ಗಮನಕ್ಕೆ ತರುತ್ತೇನೆ.

3. ಫೆರಾ, ಫೆಮಾ ಕಾಯ್ದೆ ಉಲ್ಲಂಘನೆಯಾಗದಿದ್ದರೂ ಸಿಬಿಐ ಮತ್ತು ಐಟಿ ಇಲಾಖೆಗಳು ಪ್ರಕರಣವನ್ನು ಇಡಿಗೆ ಶಿಫಾರಸ್ಸು ಮಾಡಿವೆ. ಹೀಗಾಗಿ ರಾಜ್ಯ ಬಿಜೆಪಿ ಒತ್ತಡಕ್ಕೆ ಮಣಿದು ಸಿಬಿಐ ಮೋರ್ಚಾ, ಐಟಿ ಮೋರ್ಚಾ ಹಾಗೂ ಇಡಿ ಮೋರ್ಚಾದಂತೆ ತನಿಖಾ ಸಂಸ್ಥೆಗಳು ಕೆಲಸ ಮಾಡುತ್ತಿವೆ. ನೋಟು ಅಮಾನ್ಯ ಸಂದರ್ಭ 10 ಲಕ್ಷ ರೂ. ಹಣ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ಹತ್ತು ದಿನದ ಹಿಂದೆ ನನಗೆ ನೋಟಿಸ್ ನೀಡಿತ್ತು. ವಿಚಾರಣೆಗೆ ಹಾಜರಾಗಿದ್ದೆ, ಅವರ ಪ್ರಶ್ನೆಗೆ ಉತ್ತರಿಸಿ ಸಹಕಾರ ನೀಡಿದ್ದೇವೆ. ನನ್ನ ಸಿಬ್ಬಂದಿಯನ್ನು ಆರೋಪಿ ಮಾಡಿದ್ದಾರೆ, ಪ್ರಕರಣ ಸಾಬೀತಾಗಲಿ ನೋಡೋಣ.

4. ಕೇಂದ್ರ ಅಧೀನ ಸಂಸ್ಥೆ ಬಳಸಿಕೊಂಡು ಸರ್ಕಾರ ಅಸ್ಥಿರಗೊಳಿಸುವುದು, ಪ್ರಮುಖ ನಾಯಕರನ್ನು ಬಂಧಿಸುವುದು ಬಿಜೆಪಿ ಉದ್ದೇಶ. ನಮ್ಮ ಸಹೋದರ ಸೇರಿ ಇನ್ನೂ 3-4 ಕಾಂಗ್ರೆಸ್ ನಾಯಕರ ಮೇಲೆ ಷಡ್ಯಂತ್ರ ನಡೆಯುತ್ತಿದೆ.

5. ನನ್ನ ಸಹೋದರ, ಸ್ನೇಹಿತರು, ಮನೆಗೆ ಬಂದು ಹೋಗುವವರ ಮೇಲೆ ಐಟಿ ದಾಳಿ ನಡೆಯಿತು. ಒಟ್ಟು 80 ಕಡೆ ದಾಳಿ ಆಗಿದೆ. ನಾಲ್ಕು ಪ್ರಾಸಿಕ್ಯೂಷನ್ ಕೇಸ್ ಹಾಕಿದ್ದಾರೆ. ಕೇಸ್ ಏನೂ ಆಗಲ್ಲ ಎಂದು ತಿಳಿದ ಮೇಲೆ ಲೋಕಸಭಾ ಚುನಾವಣೆಯ ಮಿಷನ್ 25 ಗುರಿಯಂತೆ ಗೆಲ್ಲಬೇಕೆಂದು ಈಗ ಜಾರಿ ನಿರ್ದೇಶನಾಲಯ ಮೂಲಕ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇಡಿಯಿಂದ ಯಾವುದೇ ನೋಟಿಸ್ ತಲುಪಿಲ್ಲ.

ನಾನು ಮಾಗಿದ ಹಣ್ಣು

ಬೆಂಗಳೂರು: ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ಈಗಾಗಲೆ ನಡೆಯುತ್ತಿದ್ದು, ಎಫ್​ಐಆರ್ ದಾಖಲಾಗಿರುವ ಬಗ್ಗೆ ಯಾವ ಅಧಿಕಾರಿಗಳು ಮಾಹಿತಿ ನೀಡಿಲ್ಲ, ಬಿಜೆಪಿಯ ಕೆಲ ನಾಯಕರು ಅನಗತ್ಯ ಮಾತಾಡುತ್ತಿದ್ದಾರೆ. ಅವರು ಎಷ್ಟು ಆತುರದಲ್ಲಿದ್ದಾರೆ ತಿಳಿದಿದೆ. ಹಣ, ಅಧಿಕಾರ ಪ್ರಭಾವದಿಂದಲೇ ರಾಜಕೀಯ ಮಾಡಿದರೆ ಅದಕ್ಕೂ ನಾನು ರೆಡಿ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇಲ್ಲಿ ಯಾರೂ ಶಾಶ್ವತರಲ್ಲ. ಸದ್ದಾಂ ಹುಸೇನ್, ರಾಜಮಹಾರಾಜರು ಏನಾಗಿದ್ದಾರೆ ಎಂದು ಗೊತ್ತಿದೆ. ನಾನೂ ಶಾಶ್ವತವಲ್ಲ. ಮರದಲ್ಲೇ ಹಣ್ಣು ಚೆನ್ನಾಗಿ ಕೆಂಪಾಗಿದ್ದರೆ ಎಲ್ಲರೂ ಕಲ್ಲಿನಲ್ಲಿ ಹೊಡೆಯುತ್ತಾರೆ ಎಂದು ಮಾರ್ವಿುಕವಾಗಿ ನುಡಿದಿದ್ದಾರೆ. ಪತ್ರ ನಕಲಿ ಎಂದು ಯಡಿಯೂರಪ್ಪ ಹೇಳಿಕೆಗೆ, ‘ಹಾಗೆ ಯಡಿಯೂರಪ್ಪ ಹೇಳಿದ್ದರೆ ಸಂತೋಷ. ಆದರೆ ಪುಟ್ಟಸ್ವಾಮಿಗೌಡ ಎಂಬವರ ಮೂಲಕ ಪತ್ರ ಕಳಿಸಿದ್ದಾರೆ ಎಂಬುದು ಮೊದಲೇ ನನಗೆ ಗೊತ್ತಿತ್ತು. ಪತ್ರ ನಕಲಿಯೋ ಅಸಲಿಯೋ.. ನಾನಂತೂ ಅನುಭವಿಸಿದ್ದೇನೆ. ನನಗೂ ಕೆಲ ವಿಚಾರಗಳು ಗೊತ್ತಿದ್ದು, ಅದೆಲ್ಲ ಹೇಳಲು ಈಗ ಕಾಲವಲ್ಲ’ ಎಂದು ಡಿಕೆಶಿ ಹೇಳಿದ್ದಾರೆ.