ನಾನು ಆಟವಾಡುವ ಕಾಲ ಬರುತ್ತದೆ, ಆಗ ಯಾರೇನು ಮಾಡಿದ್ದಾರೆ ಎಂದು ಹೇಳುತ್ತೇನೆ: ಡಿಕೆಶಿ

ಬೆಂಗಳೂರು: ನಾವು ತಪ್ಪು ಮಾಡಿದರೆ ನೇಣಿಗೆ ಹಾಕಲಿ. ರಾಜಕಾರಣ ಶಾಶ್ವತ ಅಲ್ಲ. ಏನೇ ವಿಚಾರ ಇದ್ದರೂ ಸಲಹೆ ನೀಡಲಿ ಸ್ವೀಕರಿಸುತ್ತೇವೆ ಎಂದು ಬಿಜೆಪಿ ನಾಯಕರ ವಿರುದ್ಧ ಸಚಿವ ಡಿ.ಕೆ. ಶಿವಕುಮಾರ್ ವಾಗ್ಧಾಳಿ ನಡೆಸಿದ್ದಾರೆ.

ನಿಗಮ ಮಂಡಳಿ ನೇಮಕಕ್ಕೆ ಡೆಡ್‌ಲೈನ್‌ ಕೊಟ್ಟಿಲ್ಲ. ನಮ್ಮದು ಹಿಂದು ಸಂಸ್ಕೃತಿ. ನಿನ್ನೆ ಅಮಾವಾಸ್ಯೆ, ಇಂದು ಗ್ರಹಣ, ಎಲ್ಲ ನೋಡ್ಕೊಂಡು ಮಾಡುತ್ತೇವೆ. ನಮ್ಮ ಶಾಸಕರ ಒತ್ತಾಸೆ ಮೇರೆಗೆ ಪಟ್ಟಿಯನ್ನು ಸಿಎಂಗೆ ಕಳುಹಿಸಿದ್ದೇವೆ. ಇದರಲ್ಲಿ ಯಾವುದೇ ಸಮಸ್ಯೆ, ಅಸಮಾಧಾನ ಇಲ್ಲ ಎಂದು ಹೇಳಿದರು.

ಡಿಸ್ನಿಲ್ಯಾಂಡ್‌ ಯೋಜನೆಗೆ ಕಾನೂನಿನ ಅಡಿ ವಿರೋಧಿಸಲಿ

ಡಿಸ್ನಿ ಲ್ಯಾಂಡ್ ಮಾದರಿ ಕೆಆರ್​ಎಸ್ ಅಭಿವೃದ್ಧಿ ವಿಚಾರ ಹಿನ್ನೆಲೆ ಇನ್ನೆರಡು ದಿನದಲ್ಲಿ ಸಿಎಂ ಸಭೆ ಕರೆದು ಚರ್ಚೆ ಮಾಡುತ್ತಾರೆ. ಬಜೆಟ್‌ನಲ್ಲಿ ಘೋಷಿಸಿದ ಯೋಜನೆ ಇದು. ಹೀಗಾಗಿ ಸಲಹಾ ಸಮಿತಿ ರಚಿಸಿ ಸಲಹೆ ಪಡೆಯುತ್ತೇವೆ. ನಾವು ಯಾರ ಜಮೀನನ್ನು ಪಡೆಯುವುದಿಲ್ಲ. ಈಗಿರುವ ಗಾರ್ಡನ್‌ಗೆ ಧಕ್ಕೆ ಆಗದ ರೀತಿ ಮೇಲ್ದರ್ಜೆಗೇರಿಸುತ್ತೇವೆ. ಪ್ರವಾಸೋದ್ಯಮ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮಾಡುತ್ತೇವೆ. ವಿರೋಧ ಮಾಡುವವರು ಮಾಡಲಿ. ಈ ಹಿಂದೆ ಪಾವಗಡದಲ್ಲಿ ಸೋಲಾರ್ ಪಾರ್ಕ್ ಮಾಡಿದಾಗ ವಿರೋಧಿಸಿದ್ದರು. ಈಗ ವಿದ್ಯುತ್‌ನ್ನು ನಾವು ಬೇರೆ ರಾಜ್ಯಕ್ಕೆ ಮಾರಾಟ ಮಾಡುತ್ತಿದ್ದೇವೆ.

ಪುಟ್ಟರಂಗಶೆಟ್ಟಿ ರಾಜೀನಾಮೆ ನೀಡುವ ಅಗತ್ಯವಿಲ್ಲ

‘ನಾನು ಆಟವಾಡುವ ಕಾಲ ಬರುತ್ತದೆ’. ಸರ್ಕಾರ ಬಂದ ಮೇಲೆ ನಮ್ಮ ಮೇಲಿನ ಆರೋಪಗಳಿಗೆ ಅಧಿವೇಶನದಲ್ಲಿ ಉತ್ತರ ಕೊಡುತ್ತೇವೆ. ಕಾಂಗ್ರೆಸ್ ನಾಯಕರು ಮತ್ತು ಜೆಡಿಎಸ್‌ ನಾಯಕರ ಮೇಲೆ ಆರೋಪ ಮಾಡಬೇಕೆಂದು ಈ ರೀತಿ ಮಾತನಾಡುತ್ತಿದ್ದಾರೆ. ಯಾರೋ ಗಾಡಿಯಲ್ಲಿ ದುಡ್ಡು ಇಟ್ಟುಕೊಂಡರೆ ಇದಕ್ಕೂ ಪುಟ್ಟರಂಗ ಶೆಟ್ಟಿಗೂ ಏನು ಸಂಬಂಧ ಇಲ್ಲ. ಪುಟ್ಟರಂಗ ಶೆಟ್ಟಿ ರಾಜೀನಾಮೆ ನೀಡಬೇಕಾದ ಅವಶ್ಯಕತೆ ಇಲ್ಲ. ನಾನು ಕೆಲವೊಂದನ್ನು ಬಿಚ್ಚಬೇಕಾಗುತ್ತದೆ. ಈ ಹಿಂದೆ ಕೋಟಿ ಹಣ ಸಿಕ್ಕಿತ್ತು, ಅದು ಏನಾಯ್ತು? ಯಾರದು ಹಣ? ಚೆಕ್‌ನಲ್ಲಿ ದುಡ್ಡು ತೆಗೆದುಕೊಂಡಿದ್ದು ಗೊತ್ತಿಲ್ಲವಾ ಎಂದು ಪ್ರಶ್ನಿಸಿದರು. (ದಿಗ್ವಿಜಯ ನ್ಯೂಸ್)