ರಮೇಶ್‌ ಜಾರಕಿಹೊಳಿ ಎಲ್ಲಿದ್ದಾರೆ ಎಂಬುದನ್ನು ಬಿಎಸ್‌ವೈ ಅವರನ್ನು ಕೇಳಿ ಹೇಳ್ತಾರೆ: ಡಿಕೆಶಿ

ಬೆಂಗಳೂರು: ನಿಗಮ ಮಂಡಳಿ ಅಸಮಾಧಾನ ವಿಚಾರ ನನಗೆ ಗೊತ್ತಿಲ್ಲ. ನಾನು ಯಾರ ವಕ್ತಾರನಲ್ಲ. ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ಎಂಬುದನ್ನ ಯಡಿಯೂರಪ್ಪನವರನ್ನು ಕೇಳಿ, ಹೇಳುತ್ತಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ನಿನ್ನೆ ಆಪರೇಷನ್ ಕಮಲ ಮಾಡುವುದಿಲ್ಲ ಎಂದು ಬಿ.ಎಸ್‌.ವೈ ಹೇಳುತ್ತಾರೆ. ಆದರೆ, ಶ್ರೀರಾಮುಲು, ಶೆಟ್ಟರ್, ಉಮೇಶ್ ಕತ್ತಿ ಏನು ಹೇಳಿದ್ದಾರೆ? ಪೂರಕವಾಗಿ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ರಾಜಕಾರಣ ಶಾಶ್ವತ ಅಲ್ಲ, ನಾವೇನು ಗೂಟ ಹೊಡ್ಕೊಂಡು ಕುಳಿತುಕೊಳ್ಳುವುದಿಲ್ಲ. ಇಲ್ಲಿ ಯಾರೂ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಬಿಜೆಪಿಯವರು ಈಗಲೇ ವಿಧಾನಸೌಧಕ್ಕೆ ಹೋಗಿ ಬಾಗಿಲು ಒಡೆದು ಕುಳಿತುಕೊಳ್ಳಲಿ ಎಂದು ಹೇಳಿದರು.

ಗೋವಿಂದ ರಾಜು ಹಣ ಸಂಗ್ರಹಣೆ ಮಾಡಿದ್ದಾರೆಂದು ಬಿಜೆಪಿಯವರು ಆರೋಪ ಮಾಡಿದ್ದಾರೆ. ಆದರೆ, ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ವಿಪಕ್ಷದವರು ಸಲಹೆ ನೀಡಲಿ, ಅದನ್ನು ಸ್ವಿಕರಿಸುತ್ತೇವೆ. ಮೋರ್ ವರ್ಕ್ ಮೋರ್ ಎನಿಮೀಸ್; ಮೋರ್ ಸ್ಟ್ರಾಂಗ್ ಮೋರ್ ಎನಿಮೀಸ್ ಇರುತ್ತಾರೆ. ಆದರೆ ನಾವು ನಮ್ಮ ಕೆಲಸ ಮಾಡುತ್ತಿರುತ್ತೇವೆ ಎಂದು ತಿಳಿಸಿದರು.

ಸ್ಟೀಲ್‌ ಬ್ರಿಡ್ಜ್‌ನಿಂದ ಸುಗಮ ಸಂಚಾರಕ್ಕೆ ಅನುವು

ಕಳೆದ ಬಾರಿ ಕಿಕ್ ಬ್ಯಾಕ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ ಈಗಲೂ ಏನು ಬೇಕಾದರೂ ಮಾಡಿಕೊಳ್ಳಿ. ಎಷ್ಟು ಹರಿಶ್ಚಂದ್ರರ ಮೊಮ್ಮಕ್ಕಳು ಎಂದು ಗೊತ್ತಿದೆ. ಸಿದ್ದರಾಮಯ್ಯ ಅವರು ಬಿಜೆಪಿಗೆ ಗೌರವ ಕೊಟ್ಟು ಸ್ಟೀಲ್‌ ಬ್ರಿಡ್ಜ್‌ ಯೋಜನೆ ಸ್ಥಗಿತಗೊಳಿಸಿದ್ದರು. ನಾನು ಸಿದ್ದರಾಮಯ್ಯ ಜಾಗದಲ್ಲಿದ್ದಿದ್ದರೆ ಅದನ್ನು ಮಾಡಿಫೈ ಮಾಡಿ ಜಾರಿಗೊಳಿಸುತ್ತಿದ್ದೆ. ಸ್ಟೀಲ್ ಬ್ರಿಡ್ಜ್​ ಯೋಜನೆಯಿಂದ ಜನರಿಗೆ ಅನುಕೂಲವಾಗುತ್ತದೆ. ಅವರು ವಿರೋಧಿಸುತ್ತಾರೆ ಅಂತ ನಾವು ಸುಮ್ಮನಿರಲು ಆಗುವುದಿಲ್ಲ ಎಂದು ಹೇಳಿದರು.

ಸಂಚಾರ ದಟ್ಟಣೆಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಸಂಚಾರ ದಟ್ಟಣೆಯಲ್ಲಿ ಸಿಲುಕಿ ಸಮಯ ವ್ಯರ್ಥವಾಗುತ್ತಿದೆ. ಸ್ಟೀಲ್ ​ಬ್ರಿಡ್ಜ್​ ಮಾಡಿದರೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ. ರಾಜಕೀಯ ಕಾರಣಕ್ಕೆ ವಿರೋಧಿಸುವುದು ಸರಿಯಲ್ಲ. ಮೊಸರಲ್ಲಿ ಕಲ್ಲು ಹುಡುಕುವವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತಾ? ಎಂದು ಸ್ಟೀಲ್‌ ಬ್ರಿಡ್ಜ್‌ ಪರ ಡಿಕೆಶಿ ಬ್ಯಾಟಿಂಗ್‌ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್)