More

  ದೇಶಕಾಲ ಮೀರಿದ ಹೆಮ್ಮೆಯ ಆಟಗಾರ ಜೋಕೊವಿಕ್

  ದೇಶಕಾಲ ಮೀರಿದ ಹೆಮ್ಮೆಯ ಆಟಗಾರ ಜೋಕೊವಿಕ್

  ಫ್ರೆಂಚ್ ಓಪನ್ ಪಂದ್ಯಾವಳಿಯ ಅಂತಿಮ ಪಂದ್ಯ (2021). ಮೊದಲ ಶ್ರೇಯಾಂಕಿತ ಹಾಗೂ ಐದನೇ ಶ್ರೇಯಾಂಕಿತ ಆಟಗಾರರ ನಡುವೆ ಹಣಾಹಣಿ. ಮೊದಲ ಎರಡು ಸೆಟ್​ಗಳಲ್ಲಿ ಮೊದಲ ರ್ಯಾಂಕಿನ ಆಟಗಾರ ಸೋತುಹೋದ. ಸೆಮಿಫೈನಲ್​ನಲ್ಲಿ 2020ರ ಚಾಂಪಿಯನ್ ರಾಫೆಲ್ ನಡಾಲ್​ರನ್ನು ಸೋಲಿಸಿ ಪ್ರೇಕ್ಷಕರ ಫೇವರಿಟ್ ಬೇರೆ ಆಗಿದ್ದ ಮೊದಲ ರ್ಯಾಂಕಿಂಗ್​ನ ಈ ಆಟಗಾರ ಸೋತುಹೋಗುತ್ತಾನೆಯೇ ಎಂದುಕೊಂಡವರು ಅವರ ಬಗ್ಗೆ ಗೊತ್ತಿಲ್ಲದವರು ಮಾತ್ರ. ಆದರೆ ಅವರ ಕಟ್ಟಾ ಅಭಿಮಾನಿಗಳಲ್ಲಿ ಆತಂಕದ ಲಕ್ಷಣಗಳೇನೂ ಕಂಡುಬರಲಿಲ್ಲ. ಹಗೂರಕ್ಕೆ ಮೂರನೇ ಸೆಟ್ಟನ್ನು ಗೆದ್ದುಕೊಂಡ ಮೊದಲ ಶ್ರೇಯಾಂಕಿತ. ಈಗಂತೂ ಅವರ ಅಭಿಮಾನಿಗಳ ಮುಖದಲ್ಲಿ ಮುಗುಳ್ನಗೆ. ಏಕೆಂದರೆ ಅವರಿಗೆ ಗೊತ್ತು ಒಮ್ಮೆ ಮೂರನೇ ಸೆಟ್ ಗೆದ್ದ ಮೇಲೆ ಇವನು ಯಾವ ಕಾರಣಕ್ಕೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು! ಅದು ಹಾಗೆಯೇ ಆಯಿತು. ಕೊನೆಯ ಮೂರೂ ಸೆಟ್​ಗಳನ್ನು ಗೆದ್ದು ತನ್ನ ಹತ್ತೊಂಬತ್ತನೇ ಗ್ರ್ಯಾಂಡ್​ಸ್ಲ್ಯಾಮ್​ ಎತ್ತಿಹಿಡಿದ ಆ ಆಟಗಾರ ಬೇರೆ ಯಾರೂ ಅಲ್ಲ, ಹಲವಾರು ವರ್ಷಗಳಿಂದ ಟೆನಿಸ್ ಜಗತ್ತಿನ ಧ್ರುವತಾರೆಯಾಗಿ ಮೆರೆಯುತ್ತಿರುವ ನೊವಾಕ್ ಜೋಕೊವಿಕ್. ಮೊನ್ನೆ ನಡೆದ ವಿಂಬಲ್ಡನ್​ನಲ್ಲಿ ಕೂಡ ಪ್ರಶಸ್ತಿ ಗೆದ್ದು ನಡಾಲ್, ಫೆಡರರ್ ಜತೆ ಇಪ್ಪತ್ತು ಗ್ರ್ಯಾಂಡ್​ಸ್ಲ್ಯಾಮ್​ಗಳ ಸಾಧನೆ ಹಂಚಿಕೊಂಡ ಹಿರಿಮೆ ಇವರದ್ದು.

  1987 ಮೇ 22ರಂದು ಸರ್ಬಿಯಾದ ರಾಜಧಾನಿ ಬೆಲ್​ಗ್ರೇಡ್​ನಲ್ಲಿ ಜನಿಸಿದ ನೊವಾಕ್ ಬಾಲ್ಯ ಕಳೆದದ್ದು ಯುದ್ಧಪೀಡಿತ ತೊಂಬತ್ತರ ದಶಕದಲ್ಲಿ. ಆಗ ಯುದ್ಧದಿಂದ ಜರ್ಜರಿತವಾಗಿದ್ದ ಸರ್ಬಿಯಾದ ಜನರು ಆತಂಕದಲ್ಲೇ ದಿನ ದೂಡುತ್ತಿದ್ದರು. ನೊವಾಕ್ ತಂದೆತಾಯಿ ಕೂಡ ಅದರಿಂದ ಹೊರತಾಗಿರಲಿಲ್ಲ. ಇಬ್ಬರು ತಮ್ಮಂದಿರೂ ಇದ್ದರು ನೊವಾಕ್​ಗೆ. ಜೋಕೊವಿಕ್ ಮೂರು ವರ್ಷದವನಿರುವಾಗ ಅವರ ತಂದೆ- ತಾಯಿ ನಡೆಸುತ್ತಿದ್ದ ರೆಸ್ಟೋರೆಂಟ್ ಹತ್ತಿರ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಕಾರ್ವಿುಕರ ಬಳಿ, ‘ಏನನ್ನು ಕಟ್ಟುತ್ತಿದ್ದೀರಿ’ ಎಂದು ಕೇಳಿದಾಗ ‘ಟೆನಿಸ್ ಕೋರ್ಟ್’ ಎಂದವರು ಉತ್ತರಿಸಿದ್ದರಂತೆ. ನೊವಾಕ್ ಮೊದಲ ಬಾರಿ ‘ಟೆನಿಸ್’ ಎಂಬ ಶಬ್ದ ಕೇಳಿದ್ದು ಅಂದೇ. ಟೆನಿಸ್ ಮೇಲೆ ಆಗಿನಿಂದಲೂ ಏನೋ ವ್ಯಾಮೋಹ. ನಾಲ್ಕರ ವಯಸ್ಸಿನಿಂದಲೇ ಟೆನಿಸ್ ಆಡಲು ಶುರುಮಾಡಿದ.

  ಪೀಟ್ ಸಾಂಪ್ರಸ್ ತಮ್ಮ ಮೊದಲ ವಿಂಬಲ್ಡನ್ ಗೆದ್ದಿದ್ದನ್ನು ಟಿವಿಯಲ್ಲಿ ನೋಡಿ ಮನಸೋತ ಜೊಕೊವಿಕ್ ತಾನೂ ಒಂದು ದಿನ ಸೆಂಟರ್ ಕೋರ್ಟ್​ನಲ್ಲಿ ವಿಂಬಲ್ಡನ್ ಟ್ರೋಫಿ ಎತ್ತಿ ಹಿಡಿಯುವ ಕನಸು ಕಂಡ. ನೆನಪಿಡಿ, ಆಗ ಜೋಕೊವಿಕ್​ಗೆ ಬರೀ ಆರು ವರ್ಷ! ಅಷ್ಟೇ ಅಲ್ಲ, ಟೆನಿಸ್​ನಲ್ಲಿ ನಂಬರ್ ಒನ್ ಆಗಬೇಕೆಂಬುದೂ ಅವನ ಕನಸುಗಳಲ್ಲಿ ಮುಖ್ಯವಾದುದಾಗಿತ್ತು. ಆಗಿನಿಂದಲೇ ಅತ್ಯುತ್ತಮವಾದುದನ್ನು ಸಾಧಿಸುವ ಬಯಕೆ ಆ ಪುಟ್ಟ ಹುಡುಗನದ್ದು. ಟೆನಿಸ್ ಆ ಬಾಲಕನ ಜೀವನದ ಅವಿಭಾಜ್ಯ ಅಂಗವಾಯಿತು. ಅದೇ ವೇಳೆಗೆ ಕೋಚ್ ಜೆಲೆನಾ ಜೆನ್ಕಿಕ್ ಈತನ ಪ್ರತಿಭೆಯನ್ನು ಗುರುತಿಸಿದರು. ಹದಿನಾಲ್ಕರ ಹರಯದಲ್ಲಿ ಅಂತಾರಾಷ್ಟ್ರೀಯ ವೃತ್ತಿಜೀವನ ಪ್ರಾರಂಭಿಸಿದ ಜೋಕೊವಿಕ್ ಯುರೋಪಿಯನ್ ಚಾಂಪಿಯನ್​ಶಿಪ್​ಗಳಲ್ಲಿ ಸಿಂಗಲ್ಸ್, ಡಬಲ್ಸ್ ಎಲ್ಲದರಲ್ಲೂ ಗೆಲ್ಲತೊಡಗಿದ. ಹದಿನಾರರ ಹರಯದಲ್ಲಿ ಜರ್ಮನಿಗೆ ಹೆಚ್ಚಿನ ತರಬೇತಿಗೆ ತೆರಳಿದ.

  2008 ಜೋಕೊವಿಕ್ ತಮ್ಮ ಮೊದಲ ಗಾ ್ರಡ್​ಸ್ಲಾಮ್ ಸಿಂಗಲ್ಸ್ ಗೆದ್ದರು, ಅದು ಆಸ್ಟ್ರೇಲಿಯನ್ ಓಪನ್. ಅದೇ ವರ್ಷ ಬೀಜಿಂಗ್ ಒಲಿಂಪಿಕ್ಸ್​ನಲ್ಲಿ ತಾಯ್ನಾಡಿಗೆ ಕಂಚಿನ ಪದಕ ಗಳಿಸಿಕೊಟ್ಟರು. ಆದರೆ ಆಟದ ಮಧ್ಯೆ ಅವರ ಆರೋಗ್ಯ ಆಗಾಗ್ಗೆ ಕೈ ಕೊಡುತ್ತಿತ್ತು. 2010ರಲ್ಲಿ ಗ್ಲುಟನ್ ಸಮಸ್ಯೆಯಿಂದ ತೊಂದರೆಗೊಳಗಾಗುತ್ತಿರುವುದು ಗೊತ್ತಾಯಿತು. ಗ್ಲುಟನ್ ಎಂಬ ಗೋಧಿಯಲ್ಲಿರುವ ಪ್ರೋಟೀನ್ ಕೆಲವರಿಗೆ ಗಂಭೀರ ಆರೋಗ್ಯ ಸಮಸ್ಯೆಯನ್ನು ಉಂಟುಮಾಡುತ್ತದೆ. ವೈದ್ಯರ ಸಲಹೆಯಂತೆ ಕಠಿಣ ಡಯೆಟ್ ಅನುಸರಿಸ ತೊಡಗಿದ ಜೋಕೋ ಒಂದೇ ವರ್ಷದಲ್ಲಿ ಫಿಟ್​ನೆಸ್ ಅನ್ನು ಮರಳಿ ಪಡೆದರು. ಸತತ 43 ಪಂದ್ಯಗಳನ್ನು ಗೆದ್ದರು. 2011ರಲ್ಲಿ ಇಪ್ಪತ್ನಾಲ್ಕರ ಹರಯದಲ್ಲಿ ನಂಬರ್ 1 ಆಟಗಾರ ರಾಫೆಲ್ ನಡಾಲ್​ರನ್ನು ಹಿಂದಿಕ್ಕಿ ಎಟಿಪಿ ರ್ಯಾಂಕಿಂಗ್​ನಲ್ಲಿ ಮೊದಲ ಸ್ಥಾನ ಅಲಂಕರಿಸಿದರು. ಆ ಸ್ಥಾನಕ್ಕೇರಿದ ಮೊದಲ ಸರ್ಬಿಯನ್ ಆತ! ಅದು ತಮ್ಮ ಜೀವನದ ಅತ್ಯುತ್ತಮ ವರ್ಷ ಎನ್ನುತ್ತಾರೆ ಜೋಕೊವಿಕ್. 2011 ಇರಲಿ, 2015 ಇರಲಿ, ಆಗಲೂ ಈಗಲೂ ತುಂಬು ಫಾಮರ್್​ನಲ್ಲಿರುವ ಜೋಕೊವಿಕ್ ಆಟವನ್ನು ನೋಡುವುದೆಂದರೆ ಕಣ್ಣಿಗೆ ಹಬ್ಬ.

  ಬೇರೆ ಎಲ್ಲ ಗಾ ್ರಡ್​ಸ್ಲಾಮ್ಳನ್ನು ಜೊಕೊವಿಕ್ ಹಲವಾರು ಸಲ ಗೆದ್ದಿದರೂ ಫ್ರೆಂಚ್ ಓಪನ್ ಅನ್ನು ಮೊದಲ ಸಲ ಗೆದ್ದದ್ದು 2016ರಲ್ಲಿ. ಅಲ್ಲಿಗೆ ಎಂತಹ ಅಂಕಣದ ಮೇಲಾದರೂ ಆಡಬಲ್ಲ ಸವ್ಯಸಾಚಿ ತಾನು ಎಂದು ಸಾಬೀತುಪಡಿಸಿದರು. 2021ರಲ್ಲಿ ಮತ್ತೆ ಗೆಲ್ಲುವುದರ ಮೂಲಕ ಎಲ್ಲ ನಾಲ್ಕು ಗಾ ್ರಡ್​ಸ್ಲಾಮ್ಳನ್ನು ಕನಿಷ್ಠ ಎರಡೆರಡು ಬಾರಿ ಗೆದ್ದ ಮುಕ್ತಯುಗದ (1968ರ ನಂತರ) ಮೊದಲ ಆಟಗಾರರಾದರು! ಹತ್ತೊಂಬತ್ತು ಸಿಂಗಲ್ಸ್ ಗ್ರಾಂಡ್​ಸ್ಲಾಮ್ ಗೆದ್ದಿರುವ ಜೋಕೊವಿಕ್ ಗೆದ್ದಿರುವ ಇತರ ಅಂತಾರಾಷ್ಟ್ರೀಯ ಪಂದ್ಯಾವಳಿಗಳು ಲೆಕ್ಕವಿಲ್ಲದಷ್ಟು. ಪಡೆದಿರುವ ಪ್ರತಿಷ್ಠಿತ ಪ್ರಶಸ್ತಿಗಳೂ ಹತ್ತು ಹಲವು. ಈ ನಡುವೆ ಗಾಯಗಳಿಂದ ತೊಂದರೆಗೊಳಗಾದರೂ ಸುಧಾರಿಸಿಕೊಂಡು 31ರ ಹರಯದಲ್ಲಿ ಮತ್ತೆ ನಂಬರ್ 1 ಆಟಗಾರರಾದರು! ತನ್ನ ಸಮಕಾಲೀನ ಪ್ರತಿಭಾವಂತ ಆಟಗಾರರಾದ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್​ರ ಪ್ರತಿಭೆಯ ಪ್ರಭಾವಳಿಯಲ್ಲಿ ಸರ್ಬಿಯಾದಂತಹ ಪುಟ್ಟ ದೇಶದ ಜೋಕೊವಿಕ್ ಮರೆಯಾಗಿಬಿಡುವ ಎಲ್ಲ ಸಾಧ್ಯತೆಗಳೂ ಇದ್ದವು. ಜನಪ್ರಿಯತೆಯಲ್ಲೂ ಅವರಿಬ್ಬರೇ ಮುಂದೆ! ಮೊದಲೆಲ್ಲ ಇವರಿಬ್ಬರಲ್ಲಿ ಯಾರ ಜತೆ ಆಡುವಾಗಲೂ ಪ್ರೇಕ್ಷಕರಲ್ಲಿ ಮುಕ್ಕಾಲು ಜನ ಬೆಂಬಲಿಸುತ್ತಿದ್ದುದು ಅವರನ್ನೇ! ಆದರೆ ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ನಿಧಾನವಾಗಿ, ಪ್ರಬಲವಾಗಿ ಹೆಜ್ಜೆಗುರುತುಗಳನ್ನು ಮೂಡಿಸುತ್ತ ಬಂದ ಜೋಕೋ ಇಂದು ಜಗತ್ತಿನ ನಂಬರ್ ಒನ್ ಆಟಗಾರ.

  ಎರಡು ಯುದ್ಧಗಳನ್ನು ಒಳಗೊಂಡ ಸರ್ಬಿಯಾದ ಕಳೆದ ಕೆಲವು ದಶಕಗಳ ಪ್ರಕ್ಷುಬ್ಧ ಇತಿಹಾಸದ ಹಿನ್ನೆಲೆಯಲ್ಲಿ ಬದುಕಿನಲ್ಲಿ ದಕ್ಕುವ ಚಿಕ್ಕ ಚಿಕ್ಕ ಸಂಗತಿಗಳನ್ನೂ ಆಸ್ವಾದಿಸುತ್ತೇನೆ ಎನ್ನುತ್ತಾರೆ ಜೋಕೊವಿಕ್. ಹಣಕಾಸಿನ ತೊಂದರೆಯಿಂದ ಎಷ್ಟೋ ಜೂನಿಯರ್ ಟೂರ್ನ್​ವೆುಂಟುಗಳಿಗೆ ಹೋಗಲಾಗದೇ ಒದ್ದಾಡಿದ್ದೂ ಇದೆ. ಈ ರೀತಿಯ ಹಿನ್ನೆಲೆ ಹೊಂದಿರುವುದಕ್ಕೇ ತಮಗೆ ಬದುಕಿನ ಒಳ್ಳೆಯ ಸಂಗತಿಗಳ ಮಹತ್ವ ಅರಿವಿದೆ ಎನ್ನುತ್ತಾರವರು.

  ಆದಕಾರಣ ಇಪ್ಪತ್ತರ ಹರಯದಿಂದಲೇ ಜೋಕೊವಿಕ್ ಫೌಂಡೇಷನ್ ಸ್ಥಾಪಿಸಿ ಟೆನಿಸ್​ಗಾಗಿ, ಟೆನಿಸ್ ಆಡಲು ಆಸಕ್ತಿ ಯಿರುವ ಮಕ್ಕಳಿಗಾಗಿ, ಇತರ ಸೌಲಭ್ಯವಂಚಿತ ಮಕ್ಕಳಿಗಾಗಿ ಹಲವಾರು ಕೆಲಸ ಮಾಡುತ್ತಿದ್ದಾರೆ. ಅದೇ ಕಾರಣಕ್ಕೆ ಯುನಿಸೆಫ್ ರಾಯಭಾರಿಯೂ ಆಗಿದ್ದಾರೆ. ಬೆಲ್​ಗ್ರೇಡ್​ನಲ್ಲಿ ಮನೆಯಿಲ್ಲ ದವರಿಗೆ ಉಚಿತ ಹೋಟೆಲನ್ನೂ ತೆರೆದಿದ್ದಾರೆ. ಟೆನಿಸ್ ಕಠಿಣವಾದ ಮನೋಬಲವನ್ನು ಬೇಡುವ ಆಟ. ಆ ಮನೋ ಸ್ಥೈರ್ಯ ರೂಢಿಸಿಕೊಂಡಿರುವ ಜೋಕೊವಿಕ್​ರನ್ನು ಈ ಕಾರಣಕ್ಕೇ ಮೈದಾನದಲ್ಲಿ ಮಣಿಸುವುದು ಸುಲಭವಲ್ಲ. ಟೆನಿಸ್ ಕರಗತಗೊಳಿಸಿಕೊಳ್ಳುತ್ತ ಮನಸ್ಸಿನ ಮೇಲೂ ಹಿಡಿತ ಸಾಧಿಸಿರುವ ಅಪರೂಪದ ಆಟಗಾರ. ಟೆನಿಸ್ ಪಾಠ ಕಲಿಯುತ್ತ ಬದುಕಿನ ಪಾಠವನ್ನೂ ಆಳವಾಗಿ ಕಲಿತಿದ್ದಾರೆ ಜೋಕೊವಿಕ್.

  2014ರಲ್ಲಿ ಜೆಲೆನಾರೊಂದಿಗೆ ವಿವಾಹವಾಗಿರುವ ಜೋಕೊವಿಕ್ ಎರಡು ಪುಟ್ಟ ಗಂಡುಮಕ್ಕಳ ತಂದೆಯೂ ಹೌದು. ಟೆನಿಸ್ ಆಡುವಾಗ ಮೈದಾನದಲ್ಲಿ ಕೆಲವೊಮ್ಮೆ ರ್ಯಾಕೆಟ್ ಮೇಲೆ ಸಿಟ್ಟನ್ನು ತೋರಿಸಿ ವೀಕ್ಷಕರ ಅಸಹನೆಗೆ ಕಾರಣವಾಗಿದ್ದೂ ಇದೆ! ಅವರ ಸಿಟ್ಟು ತಾವು ಚೆನ್ನಾಗಿ ಆಡದ ಕಾರಣಕ್ಕೆ ತಮ್ಮ ಮೇಲೆಯೇ! ಆದರೆ ಸೋತಾಗಲೂ ವಿನೀತನಾಗಿರುವ ಆಟಗಾರ. ಅವರು ಸೋತ ನಂತರ ಗೆದ್ದವರನ್ನು ಆಪ್ತವಾಗಿ ಅಭಿನಂದಿಸುವ ದೃಶ್ಯಗಳೇ ಅದಕ್ಕೆ ಸಾಕ್ಷಿ. ತನ್ನ ಮಕ್ಕಳಿಗೇ ರೋಲ್​ವಾಡೆಲ್ ಆದ ಮೇಲೆ ಮೈದಾನದಲ್ಲಿ ಇನ್ನಷ್ಟು ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ ಎನ್ನುವ ಪ್ರಬುದ್ಧತೆಯೂ ಇದೆ. ಜೋಕೊವಿಕ್​ರ ಮಾತುಗಳಲ್ಲಿ ಸಿಗುವ ಬದುಕಿನ ಕುರಿತ ಹೊಳಹುಗಳು ನಿಜಕ್ಕೂ ಅಪರೂಪದವು. ಯುದ್ಧಪೀಡಿತ ದೇಶದಿಂದ ಬಂದರೂ ವಿಕ್ಟಿಮ್ ಮೆಂಟಾಲಿಟಿ ತನ್ನನ್ನು ಕಾಡಗೊಡದೆ ಜಗತ್ತಿನ ನಂಬರ್ ಒನ್ ಪಟ್ಟಕ್ಕೇರುವ ಮತ್ತು ಅದನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ಹೋರಾಡುವ ಅವರ ಗಟ್ಟಿತನ ನಿಜಕ್ಕೂ ರೋಮಾಂಚನಗೊಳಿಸುವಂತಹುದು. ಸೋಲು ಎಂಬುದು ನಮ್ಮ ಬದುಕಿನಿಂದ ನಾವು ತೆಗೆದು ಹಾಕಲೇಬೇಕಾದ ಸಂಗತಿ ಎನ್ನುವುದನ್ನು ಶಾಲಾಕಾಲೇಜು ದಿನಗಳಿಂದಲೂ ಕೇಳುತ್ತ ಬೆಳೆದಿರುತ್ತೇವೆ. ಆದರೆ ದೊಡ್ಡ ಯಶಸ್ಸುಗಳ ಹಾದಿಯಲ್ಲಿ ಸೋಲು ಸರ್ವೆಸಾಮಾನ್ಯ ಸಂಗತಿ ಎಂಬುದನ್ನು ಮಕ್ಕಳಿಗೆ, ಯುವಕರಿಗೆ ಹೇಳಿಕೊಡುವ ಅಗತ್ಯವಿದೆ. ಸೋಲಿಗೆ ಹೆದರದೇ ಮುನ್ನಡೆಯುವುದು ಸಾಧನೆ ಎಂಬುದನ್ನು ಕಲಿಸುವ ಅನಿವಾರ್ಯತೆಯಿದೆ. ಅಂತಹ ಸಂದರ್ಭದಲ್ಲಿ ಬೇಕಾಗುವ ಕಠಿಣ ಮನೋಬಲದ ಬಗ್ಗೆ ಉದಾಹರಣೆಯಾಗಿ ಕೊಡಬಲ್ಲ ಹೆಸರು ಜೋಕೊವಿಕ್.

  9 ಆಸ್ಟ್ರೇಲಿಯನ್ ಓಪನ್, 6 ವಿಂಬಲ್ಡನ್, 3 ಅಮೆರಿಕನ್ ಓಪನ್ ಮತ್ತು 2 ಫ್ರೆಂಚ್ ಓಪನ್ ಸೇರಿ ಹತ್ತೊಂಬತ್ತು ಗ್ರಾಂಡ್​ಸ್ಲಾಮ್ ಗೆದ್ದಿರುವ ಜೋಕೊವಿಕ್ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಅನಿರೀಕ್ಷಿತ ಸೋಲು ಕಂಡು ಗೋಲ್ಡನ್​ಸ್ಲಾಮ್ ಗೆಲ್ಲುವುದರಿಂದ ವಂಚಿತರಾಗಬೇಕಾಯಿತು. ವರ್ಷದ ನಾಲ್ಕೂ ಗ್ರಾಂಡ್​ಸ್ಲಾಮ್ ಜತೆಗೆ ಒಲಿಂಪಿಕ್ಸ್ ಚಿನ್ನವನ್ನೂ ಗೆದ್ದರೆ ಅದನ್ನು ಗೋಲ್ಡನ್ ಸ್ಲಾಮ್ ಎನ್ನುತ್ತಾರೆ. ಈ ಸಾಧನೆ ಮಾಡಿದ ಏಕೈಕ ಟೆನಿಸ್ ಪಟು ಸ್ಟೆಫಿ ಗ್ರಾಫ್(1988). ಅದೇನೇ ಇದ್ದರೂ ದೇಶಕಾಲ ಮೀರಿದ ಹೆಮ್ಮೆಯ ಆಟಗಾರ ಮತ್ತು ಮನುಷ್ಯ ನೊವಾಕ್ ಜೋಕೊವಿಕ್.

  (ಲೇಖಕರು ಉಪನ್ಯಾಸಕರು, ಕವಯಿತ್ರಿ)

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts