ಗಂಗಾವತಿ: ಪ್ರಸಕ್ತ ಸಾಲಿನ ದೀಪಾವಳಿ ಹಬ್ಬವನ್ನು ನಗರ ಮತ್ತು ತಾಲೂಕಾಧ್ಯಕ್ಷ ವಿಜೃಂಭಣೆಯಿಂದ ಶನಿವಾರ ಮತ್ತು ಭಾನುವಾರ ಆಚರಿಸಿದ್ದು, ಬೆಳಕಿನ ಹಬ್ಬಕ್ಕೆ ವಿದ್ಯುತ್ ದೀಪದಲಂಕಾರ ಮತ್ತು ಪಟಾಕಿ ಸದ್ದಿನ ಸಂಭ್ರಮ ಮೆರಗು ನೀಡಿತ್ತು.
ಸಂಪ್ರದಾಯಬದ್ಧ ಆಚರಣೆಗಾಗಿ ಮೊದಲ ದಿನದಂದು ಲಕ್ಷ್ಮೀಪೂಜೆ ನಂತರ ಪಾಡ್ಯ ಅಚರಿಸಿದ್ದು, ಈ ಬಾರಿ ಮೂರು ದಿನ ಆಚರಿಸಿದಂತಾಗಿತ್ತು. ಚಿನ್ನದ ಒಡವೆ ಮತ್ತು ನೋಟಿನ ಕಂತೆಗಳನ್ನಿಟ್ಟು ಶಾಸ್ತ್ರೋಕ್ತವಾಗಿ ಕೆಲವರು ಆಚರಿಸಿದರೆ, ಇನ್ನೂ ಕೆಲವರು ವಿದ್ಯುತ್ ದೀಪದಲಂಕಾರದ ಅಬ್ಬರದೊಂದಿಗೆ ಪೂಜೆ ನೆರವೇರಿಸಿದರು. ಉದ್ಯಮಿದಾರರು ಅಂಗಡಿಯಲ್ಲಿ ಲಕ್ಷ್ಮೀ ಪೂಜೆ ನೆರವೇರಿಸಿದ್ದು, ಸಿಬ್ಬಂದಿಗೆ ವಸದ ಜತಗೆ ಬೋನಸ್ ನೀಡಿದರು. ಗಾಂಧಿ, ಸಿಬಿಎಸ್, ಮಹಾವೀರ, ಗಣೇಶ ವೃತ್ತದಲ್ಲಿ ಹಬ್ಬದ ಜನಜಂಗುಳಿ ಹೆಚ್ಚಾಗಿದ್ದು, ಟ್ರಾಫಿಕ್ ಜಾಮ್‌ನಿಂದ ಪೊಲೀಸರಿಗೆ ಕಿರಿಕಿರಿಯಾಗಿತ್ತು. ಹಬ್ಬದ ವಸ್ತುಗಳ ಖರೀದಿಗಾಗಿ ಕೆಲವರು ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿದ್ದು, ಕಂಡು ಬಂದಿದ್ದು, 3 ದಿನಗಳಲ್ಲಿ ಆನ್‌ಲೈನ್‌ನಲ್ಲಿ 60ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಖರೀದಿಯಾಗದ ಬಾಳೆ, ಕಬ್ಬು, ಅಡಕೆ, ಚೆಂಡುಹೂವುಗಳನ್ನು ಎಲ್ಲೆಂದರಲ್ಲಿ ಬೀಸಾಡಿದ್ದರಿಂದ ರಸ್ತೆಯಲ್ಲಿ ತ್ಯಾಜ್ಯ ಸಂಗ್ರಹವಾಗಿತ್ತು.
ವಿಭಿನ್ನ ಆಚರಣೆ: ತಾಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ದೀಪಾವಳಿ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದ್ದು, ದೀಪಾವಳಿ ಹಬ್ಬದ ವಿಶೇಷತೆ, ಜ್ಞಾನ ದೀವಿಗೆ ಕುರಿತು ಉಪನ್ಯಾಸಕರು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಮಕ್ಕಳು ಪ್ರಸ್ತುತಪಡಿಸಿದ ಬಲಿಚಕ್ರವರ್ತಿ ಸಂಹಾರದ ರೂಪಕ ಗಮನಸೆಳೆದಿದ್ದು, ಮಕ್ಕಳು ಮನೋಜ್ಞವಾಗಿ ಅಭಿನಯಿಸಿದರು. ಕಾರ್ಯಕ್ರಮದ ಕುರಿತು ಸಮೂಹ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಆದರ್ಶ ನೆಕ್ಕಂಟಿ ಮಾಹಿತಿ ನೀಡಿದರು. ಅದರಂತೆ ಮಹಾನ್ ಕಿಡ್ಸ್ ಸ್ಕೂಲ್‌ನಲ್ಲಿ ದೀಪಾವಳಿ ಹಬ್ಬಕ್ಕೆ ಬೇಕಾಗುವ ವಸ್ತುಗಳನ್ನು ಮಕ್ಕಳೇ ಮಾರಾಟ ಮಾಡುವುದರ ಮೂಲಕ ಮಾದರಿಯಾದರು.
ಪಟಾಕಿಗೆ ಅವಕಾಶ…
ಕಳೆದ ಬಾರಿ ಪಟಾಕಿ ಮಾರುವವರು ಪರವಾನಗಿ ಪಡೆಯದೇ ಮತ್ತು ಷರತ್ತುಗಳನ್ನು ಉಲ್ಲಂಸಿದ ಪರಿಣಾಮ ಪಟಾಕಿಗಳನ್ನು ಜಪ್ತಿ ಮಾಡಿದ್ದರಿಂದ ಮಾರಾಟ ರದ್ದಾಗಿತ್ತು. ಹೀಗಾಗಿ ಕಂಪ್ಲಿ ಮತ್ತು ಶ್ರೀರಾಮನಗರಕ್ಕೆ ತೆರಳಿ ತರುವ ಸ್ಥಿತಿ ಬಂದಿತ್ತು. ಈ ಬಾರಿ 6 ಪರವಾನಗಿದಾರರು ಪಟಾಕಿ ಮಾರಾಟಕ್ಕೆ ಮುಂದಾಗಿದ್ದು, ನಗರದ ಬಾಲಕರ ಪ.ಪೂ.ಕಾಲೇಜು ಮೈದಾನದಲ್ಲಿ ತಾಲೂಕಾಡಳಿತದಿಂದ ವ್ಯವಸ್ಥೆ ಮಾಡಲಾಗಿತ್ತು. ಮುನ್ನೆಚ್ಚರಿಕೆ ಕ್ರಮದೊಂದಿಗೆ ವ್ಯವಸ್ಥೆ ಕೈಗೊಂಡರೂ ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರವಾಗಿಲ್ಲ. ಹಬ್ಬದ ತ್ಯಾಜ್ಯ ವಿಲೇವಾರಿಯದ್ದೇ ಸಮಸ್ಯೆಯಾಗಿದ್ದು, ರಸ್ತೆ ಬದಿಯಲ್ಲಿ ಹಾಕಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿದೆ.