ಆರ್ಥಿಕ ಮುಗ್ಗಟ್ಟಿನಲ್ಲೂ ದೀಪಾವಳಿ ಸಂಭ್ರಮಾಚರಣೆ

ಲಕ್ಷ್ಮೇಶ್ವರ: ಮುಂಗಾರು-ಹಿಂಗಾರಿನ ವೈಫಲ್ಯದಿಂದ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ರೈತರು, ಕೃಷಿ ಅವಲಂಬಿತರು, ವ್ಯಾಪಾರಸ್ಥರು ನಾಡಿನ ದೊಡ್ಡ ಹಬ್ಬ ದೀಪಾವಳಿಯನ್ನು ಸಡಗರ ಸಂಭ್ರಮದಿಂದಲೇ ಆಚರಿಸಿದ್ದು ಕಂಡುಬಂತು.
ನರಕ ಚತುರ್ಥಿ ದಿನವಾದ ಮಂಗಳವಾರ ನೀರು ತುಂಬುವ, ಹಿರಿಯರ ದಿನ ಆಚರಿಸಲಾಯಿತು. ಬುಧವಾರ ಅಮಾವಾಸ್ಯೆ ನಿಮಿತ್ತ ಎಲ್ಲರ ಮನೆ, ಅಂಗಡಿಗಳಲ್ಲಿ ಲಕ್ಷ್ಮೀ ದೇವಿ ಪೂಜೆ, ಮುತೆôದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಶ್ರದ್ಧಾ-ಭಕ್ತಿಯಿಂದ ಜರುಗಿತು.
ಎಲ್ಲೆಡೆ ತಳಿರು-ತೋರಣ, ಹೂವು-ಹಣ್ಣು, ಅಲಂಕಾರಿಕ ವಸ್ತುಗಳು, ಆಕಾಶಬುಟ್ಟಿ, ಪಟಾಕಿ, ದಿನಸಿ, ಬಟ್ಟೆ, ಆಭರಣ, ವಾಹನಗಳ ವ್ಯಾಪಾರ-ವಹಿವಾಟು ಜೋರಾಗಿ ನಡೆಯಿತು. ಮಣ್ಣಿನ ಹಣತೆ ಬದಲಿಗೆ ಚಿತ್ತಾಕರ್ಷಕ ಸಿರಾಮಿಕ್ ಹಣತೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದವು. ಪಟ್ಟಣದ ಮಾರುಕಟ್ಟೆ ಮೂರು ದಿನಗಳಿಂದ ಜನಸಂದಣಿಯಿಂದ ತುಂಬಿದ್ದರಿಂದ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕೆಲ ವ್ಯಾಪಾರಸ್ಥರು ಲಕ್ಷ್ಮೀಪೂಜೆಯೊಂದಿಗೆ ದೀಪಾವಳಿ ಪೂಜೆಯನ್ನು ಬುಧವಾರ ನೆರವೇರಿಸಿದರೆ ಬಹುತೇಕರು ಪಾಡ್ಯ ಪೂಜೆಗೆ ಪೆಂಡಾಲ್ ಹಾಕಿಸುವ, ತಳಿರು-ತೋರಣ ಕಟ್ಟುವ, ವಿದ್ಯುತ್ ಅಲಂಕಾರ ಸಿದ್ಧತೆ ಮಾಡಿಕೊಂಡರು. ಸಂಜೆ ವೇಳೆ ರೈತರು ಕೃಷಿ ಉಪಕರಣ, ಟ್ರ್ಯಾಕ್ಟರ್, ಬೈಕ್, ಕಾರು ಇತರ ವಾಹನಗಳನ್ನು ಅಲಂಕರಿಸಿ ನೆರೆಹೊರೆಯವರನ್ನು ಕರೆದು ಮುತೆôದೆಯರಿಗೆ ಉಡಿ ತುಂಬಿ ಪೂಜೆ ಸಲ್ಲಿಸಿದರು.
ಆರೋಗ್ಯ, ನೆಮ್ಮದಿಗಾಗಿ ದೇವರಲ್ಲಿ ಪ್ರಾರ್ಥನೆ: ಗದಗ-ಬೆಟಗೇರಿ ಅವಳಿ ನಗರ ಸೇರಿ ಜಿಲ್ಲಾದ್ಯಂತ ಬುಧವಾರ ದೀಪಾವಳಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಮನೆಯಲ್ಲಿ ಹಿರಿಯರು-ಕಿರಿಯರು, ಮಹಿಳೆಯರು, ಮಕ್ಕಳು ಹೊಸ ಬಟ್ಟೆಗಳನ್ನು ಧರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಗರದ ಪುಟ್ಟರಾಜ ಗವಾಯಿಗಳ ಆಶ್ರಮ, ಸಾಯಿಬಾಬಾ ದೇವಸ್ಥಾನ, ರಾಚೋಟೇಶ್ವರ ದೇವಸ್ಥಾನ, ಜೋಡು ಮಾರುತಿ ದೇವಸ್ಥಾನ ಮತ್ತಿತರ ದೇವಾಲಯಗಳಿಗೆ ಕುಟುಂಬ ಸಮೇತರಾಗಿ ತೆರಲಿ ಆರೋಗ್ಯ, ಸಂತೋಷ, ಸಮೃದ್ಧಿ, ನೆಮ್ಮದಿ ಕರುಣಿಸು ಎಂದು ಪ್ರಾರ್ಥಿಸಿದರು. ಅವಳಿ ನಗರದ ಬಹುತೇಕ ಮನೆಗಳು, ಅಂಗಡಿ-ಮುಂಗಟ್ಟುಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದವು. ತರಹೇವಾರಿ ಬೆಳಕಿನ ಕಿರಣಗಳ ಮಧ್ಯೆ ಕಟ್ಟಡಗಳು ಜಗಮಗಿಸುತ್ತಿದ್ದವು. ಮನೆ ಮುಂದೆ, ಬಾಗಿಲು ಬಳಿ ಮಣ್ಣಿನ ಹಣತೆಗಳಿಂದ ಹಚ್ಚಿಟ್ಟಿದ್ದ ದೀಪಗಳು ಕಂಗೊಳಿಸುತ್ತಿದ್ದವು. ಸಂಜೆ ವೇಳೆ ನಗರದ ಬಹುತೇಕರು ಲಕ್ಷ್ಮೀ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಮಹಿಳೆಯರನ್ನು ಮನೆಗೆ ಆಹ್ವಾನಿಸಿ ಸಿಹಿ ಹಂಚಿ ಹಬ್ಬದ ಶುಭಾಶಯ ಕೋರಿದರು. ಹೊಸ ವಾಹನ ಖರೀದಿಸಿದವರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಕೆಲವು ವರ್ತಕರು, ವಾಣಿಜ್ಯ ಸಂಸ್ಥೆಗಳು ಲಕ್ಷ್ಮೀ ಪೂಜೆ ನಿಮಿತ್ತ ಅಂಗಡಿ, ಮಳಿಗೆಗಳ ಮುಂದೆ ಶಾಮಿಯಾನ ಹಾಕಿ ಅಲಂಕರಿಸಿದ್ದರು. ವರ್ತಕರು ಈ ದಿನ ಹೊಸ ಖಾತೆ ರ್ಕಿದಿ ಪುಸ್ತಕಗಳನ್ನು ಅಂಗಡಿಗಳಿಂದ ಖರೀದಿಸಿ ಪೂಜಿಸಿದರು. ಸಂಜೆ ವೇಳೆ ಪಟಾಕಿಗಳ ಸಿಡಿತ, ರಾಕೆಟ್​ಗಳು ಆಕಾಶದೆತ್ತರಕ್ಕೇರಿ ಸಿಡಿಯುವುದನ್ನು ಮಕ್ಕಳು ನೋಡಿ ಸಂಭ್ರಮಪಟ್ಟರು.
ಲಕ್ಷ್ಮೀ , ಕುಬೇರ ಮೂರ್ತಿ ಪ್ರತಿಷ್ಠಾಪನೆ: ಮುಂಡರಗಿ ಪಟ್ಟಣ ಸೇರಿ ತಾಲೂಕಿನಾದ್ಯಂತ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಬಹುತೇಕ ಮನೆ, ವ್ಯಾಪಾರ ಮಳಿಗೆಗಳಲ್ಲಿ ಸಾರ್ವಜನಿಕರು ಸಾಂಪ್ರದಾಯಕವಾಗಿ ಲಕ್ಷಿ್ಮ, ಕುಬೇರ ಮೂರ್ತಿ ಪ್ರತಿಷ್ಠಾಪಿಸಿ ಭಕ್ತಿಯಿಂದ ಆರಾಧನೆ ಮಾಡಿದರು. ನರಕ ಚತುರ್ಥಿದಿನವಾದ ಮಂಗಳವಾರ ಹಿರಿಯರ ಹಬ್ಬ ನೆರವೇರಿಸಿ ಆಪ್ತರೊಂದಿಗೆ ಭೋಜನ ಮಾಡಿದರು. ಅಮಾವಾಸ್ಯೆ ನಿಮಿತ್ತ ಬುಧವಾರ ಬೆಳಗ್ಗೆ ಮಾರುಕಟ್ಟೆಯಲ್ಲಿ ಹಣ್ಣು, ಬಾಳೆ ಕಂಬ, ಕಬ್ಬು, ವಿವಿಧ ಹೂವು, ಹಣತೆ, ಅಲಂಕಾರಿಕ ವಸ್ತುಗಳನ್ನು ಖರೀದಿಸಿ ಲಕ್ಷಿ್ಮ ದೇವಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಮುತ್ತೈದೆಯರಿಗೆ ಉಡಿ ತುಂಬಿ ಹಬ್ಬದ ಶುಭಾಶಯ ಕೋರಿದರು. ಹೋಳಿಗೆ, ಕಡಬು, ರೊಟ್ಟಿ, ಚಪಾತಿ, ವಿವಿಧ ತರಕಾರಿ, ಕಾಳು ಪಲ್ಲೆ, ಅಗಸಿ, ಕೆಂಪು ಚಟ್ನಿ ತಯಾರಿಸಿ ದೇವಿಗೆ ನೈವೇದ್ಯ ಅರ್ಪಿಸಿದರು. ನಂತರ ಆಪ್ತಮಿತ್ರರೊಂದಿಗೆ ಸಹಭೋಜನ ಸವಿದರು.