ಮಗು ತಂದೆ ನಾನಲ್ಲ.. ನಾನಲ್ಲ..!

ಪತ್ನಿ ಹೆತ್ತ ಮಗು ನನ್ನದಲ್ಲ. ಆ ಕೂಸು ಅವಳ ಅಕ್ರಮ ಸಂತಾನ ಎಂದು ಪತಿ ಹೇಳುತ್ತಿದ್ದರೆ, ಮದುವೆಗೂ ಮುನ್ನ ಬೇರೊಬ್ಬನನ್ನು ಪ್ರೀತಿಸಿದ್ದು ನಿಜವಾದರೂ ಮಗು ಗಂಡನದ್ದೇ ಎಂಬುದು ಪತ್ನಿಯ ಅಹವಾಲು! ಇಂಥ ಆರೋಪ-ಪ್ರತ್ಯಾರೋಪಗಳೊಂದಿಗೆ ವಿಚ್ಛೇದನ ದಲ್ಲಿ ಅಂತ್ಯವಾಗಿದ್ದ ಬೆಂಗಳೂರು ದಂಪತಿಯ ಪ್ರಕರಣ ಹೊಸ ರೂಪ ಪಡೆದು ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದೆ.

2014ರಲ್ಲಿ ಮದುವೆ ಯಾಗಿತ್ತು. ಮದುವೆಗೂ ಮುನ್ನ ಪತ್ನಿ ಬೇರೊಬ್ಬ ನೊಂದಿಗೆ ಹೊಂದಿದ್ದ ಅನೈತಿಕ ಸಂಬಂಧ ದಿಂದ ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆ ನನ್ನ ಹಾಗೂ ಪಾಲಕರ ಯೋಗಕ್ಷೇಮ ನೋಡುತ್ತಿಲ್ಲ ಎಂದು ಆರೋಪಿಸಿದ್ದ ಪತಿ, 2016ರಲ್ಲಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದ. ಮದುವೆಗೂ ಮೊದಲು ಬೇರೊಬ್ಬನನ್ನು ಪ್ರೀತಿಸುತ್ತಿದ್ದುದನ್ನು ಪತ್ನಿ ಒಪ್ಪಿದಳಾದರೂ, ಮಗು ಗಂಡನದ್ದೇ ಎಂಬ ವಾದ ಮುಂದಿಟ್ಟಿದ್ದಳು. ಎಲ್ಲ ವಿಚಾರ ತಿಳಿದಿದ್ದರೂ ಪತಿ ಮತ್ತವನ ಕುಟುಂಬದವರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಳು.

ಆದರೆ ಆ ಬಳಿಕ ನ್ಯಾಯಾಲಯದತ್ತ ಸುಳಿಯದ ಪತ್ನಿ, ಮುಂದಿನ ಎಲ್ಲ ವಿಚಾರಣೆ- ಪಾಟಿ ಸವಾಲಿಗೆ ಗೈರಾಗಿದ್ದಳು. ಹೀಗಾಗಿ ಪತಿಯ ಪಾಟಿ ಸವಾಲು ನಡೆಸಲು ಆಕೆಗೆ ಅವಕಾಶ ನೀಡದೆ ಏಕಪಕ್ಷೀಯ ಆದೇಶ ಹೊರಡಿಸಿದ್ದ ಕೌಟುಂಬಿಕ ನ್ಯಾಯಾಲಯ, 2018ರಲ್ಲಿ ದಂಪತಿಗೆ ವಿಚ್ಛೇದನ ನೀಡಿತ್ತು.

ಇದೀಗ ಹೈಕೋರ್ಟ್ ಮೆಟ್ಟಿಲೇರಿರುವ ಪತ್ನಿ, ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಿ ನನ್ನ ವಾದವನ್ನೂ ಆಲಿಸಬೇಕು ಎಂದಿದ್ದಾಳೆ. ಈ ಮನವಿ ಮಾನ್ಯ ಮಾಡಿರುವ ಹೈಕೋರ್ಟ್, ಪ್ರಕರಣವನ್ನು ಮತ್ತೆ ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸಿದೆ.

ಪತಿ ಆರೋಪ: ಮದುವೆ ಆದಾಗಿನಿಂದ ಪತ್ನಿ ಅನಾರೋಗ್ಯದ ಕಾರಣ ನೀಡಿ ದೈಹಿಕವಾಗಿ ದೂರಾಗಿದ್ದಳು. ಒಂದು ದಿನ ಸತ್ಯ ಬಿಚ್ಚಿಟ್ಟ ಆಕೆ, ಕಾಲೇಜಿನ ದಿನಗಳಲ್ಲಿ ಮತ್ತೊಬ್ಬನನ್ನು ಪ್ರೀತಿಸುತ್ತಿದ್ದೆ. ಆತನೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದೆ. ಈ ಮದುವೆ ತನಗೆ ಇಷ್ಟವಿರಲಿಲ್ಲ ಎಂದಿದ್ದಳು. ಈ ಮಧ್ಯೆ ಅನಾರೋಗ್ಯ ಎಂದಿದ್ದ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಗರ್ಭಿಣಿ ಎಂದು ತಿಳಿಯಿತು.

ಆಕೆಯೊಂದಿಗೆ ನಾನು ದೈಹಿಕ ಸಂಪರ್ಕವನ್ನೇ ಹೊಂದಿರದ ಮೇಲೆ ಮಗು ನನ್ನದಲ್ಲ ಎಂದಿದ್ದೆ. ಮನೆಯಲ್ಲಿ ಈ ವಿಚಾರ ತಿಳಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹಾಗೂ ಸಾವಿಗೆ ಪತಿಯೇ ಕಾರಣ ಎಂದು ಪತ್ರ ಬರೆದಿಡುವುದಾಗಿ ಬೆದರಿಕೆ ಹಾಕಿದ್ದಳು. ಗರ್ಭಪಾತ ಮಾಡಿಸುವ ನಿರ್ಧಾರ ಕೈಗೊಂಡು ಆಸ್ಪತ್ರೆಗೆ ತೆರಳುವ ವೇಳೆಗೆ ಮಗು ಬೆಳವಣಿಗೆಯಾಗಿದ್ದರಿಂದ ಆ ಪ್ರಯತ್ನವೂ ಆಗಲಿಲ್ಲ.

ಮಗು ಜನಿಸಿದ ನಂತರ ಆಕೆ ತವರು ಮನೆಯಲ್ಲಿದ್ದಳು. ಒಂದು ತಿಂಗಳ ಬಳಿಕ ಮರಳಿದ ಆಕೆ, ನನ್ನನ್ನು ಹಾಗೂ ನನ್ನ ಪಾಲಕರನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎಂದಿದ್ದ ಪತಿ, ವಿಚ್ಛೇದನಕ್ಕೆ ಕೌಟುಂಬಿಕ ನ್ಯಾಯಾಲಯದ ಮೊರೆಹೋಗಿದ್ದ.

ಪತ್ನಿ ವಾದವೇನು?

ವಿಚ್ಛೇದನಾ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ಪತ್ನಿ, ಮದುವೆಗೂ ಮುನ್ನ ಬೇರೊಬ್ಬನನ್ನು ಪ್ರೀತಿಸಿದ್ದ ವಿಚಾರ ಬಿಟ್ಟು ಪತಿಯ ಉಳಿದೆಲ್ಲ ಆರೋಪಗಳನ್ನು ಅಲ್ಲಗಳೆದಿದ್ದಳು. ನನ್ನ ಚಾರಿತ್ರ್ಯಹರಣ ಮಾಡಲು ಸುಳ್ಳು ಆರೋಪ ಮಾಡುತ್ತಿದ್ದಾನೆ. ಮದುವೆ ನಿಶ್ಚಯವಾದ ಬಳಿಕ ಹೋಟೆಲ್, ಸಿನಿಮಾ, ಪಾರ್ಕ್ ಎಂದು ಸುತ್ತಾಡುವಾಗ ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದಿತ್ತು. ಮದುವೆ ನಂತರವೂ ಗಂಡನೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದೇನೆ. ಪತಿಗೆ ಮತ್ತೊಂದು ಹೆಣ್ಣಿನ ಜತೆ ಸಂಬಂಧವಿತ್ತು. ಪತಿ ಮತ್ತವರ ಮನೆಯವರು ನನ್ನನ್ನು ಗುಲಾಮಳಂತೆ ನಡೆಸಿಕೊಳ್ಳುತ್ತಿದ್ದರು. ನಾನು ಗರ್ಭಿಣಿ ಎಂದು ತಿಳಿದಾಗ ಬಲವಂತವಾಗಿ ಗರ್ಭಪಾತ ಮಾಡಿಸಲು ಮುಂದಾಗಿದ್ದರು. ಮಗು ಜನಿಸಿದ ನಂತರ ತವರು ಮನೆಗೆ ಕಳುಹಿಸಿ, ವರದಕ್ಷಿಣೆ ತರುವಂತೆ ಬೆದರಿಕೆ ಹಾಕಿದ್ದರು. ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾಳೆ.

| ಜಗನ್ ರಮೇಶ್ ಬೆಂಗಳೂರು

Leave a Reply

Your email address will not be published. Required fields are marked *