ಮುಳುಗು ತಜ್ಞರಿಂದ ಬೋಟ್ ಶೋಧ: ಸಚಿವೆ ಡಾ.ಜಯಮಾಲ

ಉಡುಪಿ: ಮಲ್ಪೆ ಸುವರ್ಣ ತ್ರಿಭುಜ ಬೋಟು, ಏಳು ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಮುಳುಗು ತಜ್ಞರಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ತಿಳಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೌಕಾಪಡೆ ಪರಿಶೀಲನೆಯಲ್ಲಿ 23 ಮೀಟರ್ ಉದ್ದದ ಬೋಟ್ ಒಂದರ ಅವಶೇಷ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಸುವರ್ಣ ತ್ರಿಭುಜ 24 ಮೀ. ಉದ್ದವಿದೆ. ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ನೌಕಾಪಡೆ ಮುಳುಗು ತಜ್ಞರ ತಂಡ ಶೋಧಕ್ಕೆ ಇಳಿದಿದ್ದು, 35 ಮೀಟರ್ ಸಮುದ್ರದ ಆಳಕ್ಕೆ ತೆರಳಿದ್ದಾರೆ. ಕತ್ತಲು ಆವರಿಸಿದ್ದರಿಂದ ಅಡ್ಡಿಯಾಗಿ ವಾಪಸ್ ಬಂದಿದ್ದಾರೆ. ಎಷ್ಟು ಅಡಿ ಆಳದಲ್ಲಿಯೂ ಶೋಧ ಕಾರ್ಯ ನಡೆಸದೇ ಬಿಡುವುದಿಲ್ಲ. ನಮ್ಮ ಸಂಶಯಕ್ಕೆ ಪರಿಹಾರ ಸಿಗುವವರೆಗೂ ಎಲ್ಲ ಆಯಾಮಗಳಲ್ಲೂ ಶೋಧ ಕಾರ್ಯ ನಡೆಸಲಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿ ಹಲವು ವದಂತಿಗಳು ಹರಿದಾಡುತ್ತಿವೆ. ವದಂತಿಗಳು ಸತ್ಯವಾಗಲಿ ಎಂದು ನಮ್ಮ ಆಸೆಯಾಗಿದೆ ಎಂದರು.

ಕೋಟ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ತಂಡಗಳಿಂದ ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಶೀಘ್ರ ಬಂಧಿಸುತ್ತೇವೆ ಎಂದು ಭರವಸೆ ನೀಡಿದರು.