ವಿಟಿಯು ವಿಭಜನೆ ಖಂಡಿಸಿ 16ರಂದು ಬೃಹತ್ ಜಾಥಾ

ಬೆಳಗಾವಿ: ವಿಟಿಯು ವಿಭಜನೆಗೆ ಮುಂದಾಗಿರುವ ಮೈತ್ರಿ ಸರ್ಕಾರದ ವಿರುದ್ಧ ಗಡಿ ಭಾಗದ ಜನತೆ ತಿರುಗಿಬಿದ್ದಿದ್ದು, ಹೋರಾಟದ ಕಾವು ತೀವ್ರ ಸ್ವರೂಪ ಪಡೆಯುತ್ತಿದೆ. 16ರಂದು ನಗರ ವ್ಯಾಪ್ತಿಯಲ್ಲಿ ಬೃಹತ್ ಜಾಥಾ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ವಿವಿಧ ಸಂಘಟನೆಗಳ ಪದಾಧಿಕಾರಿಗಳು ತೀರ್ಮಾನಿಸಿದ್ದಾರೆ.
ಉದ್ಯಮಬಾಗ ಕೈಗಾರಿಕೆ ಪ್ರದೇಶದ ೌಂಡ್ರಿ ಕ್ಲಸ್ಟರ್‌ನಲ್ಲಿ ಮಂಗಳವಾರ ಸಭೆ ನಡೆಸಿದ ಮಠಾಧೀಶರು, ಉದ್ಯಮಿಗಳು, ವೈದ್ಯರು ಮತ್ತು ವಿವಿಧ ಸಂಘಟನೆಗಳ ಮುಖಂಡರು, 16ರಂದು ನಗರ ವ್ಯಾಪ್ತಿಯಲ್ಲಿ ಬೃಹತ್ ಜಾಥಾ ನಡೆಸುವ ನಿರ್ಣಯ ತೆಗೆದುಕೊಂಡರು.

ನಿರ್ಣಯ ೋಷಿಸಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸರ್ವರ ಅಭಿಪ್ರಾಯದ ಮೇರೆಗೆ ಆರಂಭಿಕ ಹಂತದಲ್ಲಿ ಜಾಥಾ ನಡೆಸಲು ತೀರ್ಮಾನಿಸಲಾಗಿದೆ. ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು, ವೈದ್ಯರು, ಉದ್ಯಮಿಗಳು ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ಬೆಳಗಾವಿಯ ನಾಗರಿಕರು ಪಾಲ್ಗೊಳ್ಳಲಿದ್ದಾರೆ. ಸ್ಥಳ, ವೇಳೆ ಇನ್ನು ನಿಗದಿಯಾಗಿಲ್ಲ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ನಂತರದ ದಿನಗಳಲ್ಲಿ ಇನ್ನಷ್ಟು ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಟಿಯು ವಿಭಜನೆ ರಾಜ್ಯ ವಿಭಜನೆಗೆ ಕಾರಣವಾದೀತು ಎನ್ನುವ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ವಿಟಿಯು ಒಡೆಯುವುದಾದರೆ ರಾಜ್ಯವನ್ನೇ ಒಡೆಯುವಂತೆ ಒತ್ತಾಯಿಸಿದರು.
ಒಂದೇ ಸಂಘಟನೆಯಿಂದ ಹೋರಾಟ ಯಶಸ್ಸು ಕಾಣಲು ಸಾಧ್ಯವಿಲ್ಲ. ಎಲ್ಲ ಸಂಘಟನೆಗಳ ಪದಾಧಿಕಾರಿಗಳು, ನೌಕರರು ಕೈಜೋಡಿಸಬೇಕು. ಈ ಭಾಗದ ಜನಪ್ರತಿನಿಧಿಗಳು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಪದಾಧಿಕಾರಿಗಳು ಕೋರಿದರು.

ಮಾಜಿ ಮೇಯರ್ ಡಾ.ಸಿದ್ಧನಗೌಡ ಪಾಟೀಲ, ಒಂದು ಕಾಲಕ್ಕೆ ನಾನು ರಾಜ್ಯ ಏಕೀಕರಣಕ್ಕಾಗಿ ಹೋರಾಟ ನಡೆಸಿದ್ದೆ. ಆದರೆ, ಈಗಿನ ರಾಜಕೀಯ ಬೆಳವಣಿಗೆ ಅವಲೋಕಿಸಿದರೆ, ನಾವು ಪ್ರತ್ಯೇಕ ರಾಜ್ಯ ಬೇಡುವ ಕಾಲ ಸನ್ನಿಹಿತವಾಗುತ್ತಿದೆ. ಮೈತ್ರಿ ಸರ್ಕಾರ ಇದಕ್ಕೆ ಆಸ್ಪದ ನೀಡಬಾರದು. ವಿಟಿಯು ವಿಭಜನೆ ಕೈಬಿಡಬೇಕು ಎಂದು ಒತ್ತಾಯಿಸಿದರು. ವೈದ್ಯ ಡಾ.ಎಚ್.ಬಿ.ರಾಜಶೇಖರ, ಡಾ.ಸೋನಾಲಿ ಸರ್ನೋಬತ್, ಪತ್ರಕರ್ತ ಎಂ.ಕೆ.ಹೆಗಡೆ ಮತ್ತಿತರರು ಮಾತನಾಡಿದರು.

ಅಧಿವೇಶನದಲ್ಲಿ ದನಿ ಎತ್ತಿ: ಈಗ ಬೆಂಗಳೂರಿನಲ್ಲಿ ಅಧಿವೇಶನ ನಡೆಯುತ್ತಿದೆ. ಉತ್ತರ ಕರ್ನಾಟಕದ ಸಚಿವರು, ಶಾಸಕರು ಅಧಿವೇಶನದಲ್ಲಿ ಪಾಲ್ಗೊಂಡಿದ್ದೀರಿ. ನಿಮಗೆ ಈ ಭಾಗದ ಮೇಲೆ ನಿಜವಾದ ಕಳಕಳಿ ಇದ್ದರೆ ವಿಟಿಯು ವಿಭಜನೆ ವಿರುದ್ಧ ದನಿ ಎತ್ತಿ ಎಂದು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದರು.

ಉತ್ತರ ಕರ್ನಾಟಕದ ಮೇಲೆ ನಡೆಯುತ್ತಿರುವ ಶೋಷಣೆಗೆ ಕೊನೆ ಇಲ್ಲದಂತಾಗಿದೆ. ತಕ್ಷಣ ಈ ಪ್ರಾದೇಶಿಕ ತಾರತಮ್ಯವನ್ನು ಬಗೆಹರಿಸದಿದ್ದರೆ ಪ್ರತ್ಯೇಕ ರಾಜ್ಯದ ಕೂಗು ಬಲಗೊಳ್ಳಲಿದೆ ಎಂದು ತಿಳಿಸಿದರು.

ವಿಟಿಯು ವಿಭಜನೆ ವಿರೋಧಿಸಿ ವಕೀಲರ ಪ್ರತಿಭಟನ

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜನೆ ಪ್ರಸ್ತಾವನೆ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮಂಗಳವಾರ ಬೆಳಗಾವಿ ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಡಿಸಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಉತ್ತರ ಕರ್ನಾಟಕ ಭಾಗದ ಜನರು, ಸಾಹಿತಿಗಳು ಸೇರಿದಂತೆ ವಿದ್ಯಾರ್ಥಿಗಳು ನಿರಂತರ ಹೋರಾಟ ನಡೆಸಿದ ಫಲವಾಗಿ ಬೆಳಗಾವಿ ವಿಶ್ವೇಶ್ವರಯ್ಯ ವಿವಿ ಸ್ಥಾಪನೆ ಆಗಿದೆ. ಆದರೆ, ರಾಜಕೀಯ ಲಾಭಕ್ಕಾಗಿ ರಾಜ್ಯ ಮೈತ್ರಿ ಸರ್ಕಾರ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ವಿಶ್ವೇಶ್ವರಯ್ಯ ವಿವಿ ವಿಭಜನೆ ಮಾಡಲು ಬಜೆಟ್‌ನಲ್ಲಿ ಪ್ರಸ್ತಾಪಿಸಿದೆ. ವಿಟಿಯು ವಿಭಜನೆ ನಿರ್ಧಾರ ಸರಿಯಲ್ಲ ಎಂದು ವಕೀಲರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವು ತನ್ನ ರಾಜಕೀಯ ಲಾಭಕ್ಕಾಗಿ ಉತ್ತರ ಕರ್ನಾಟಕ ಭಾಗದ ಪ್ರದೇಶಗಳ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ. ಗಡಿಭಾಗದಲ್ಲಿ ಕನ್ನಡ ಬಲಪಡಿಸುವ, ಕನ್ನಡಿಗರಲ್ಲಿ ಆತ್ಮವಿಶ್ವಾಸ ತುಂಬುವ ಬದಲು ಅನ್ಯಾಯ ಮಾಡುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಮನವಿ ಮೂಲಕ ಎಚ್ಚರಿಕೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಕಿವಡಸಣ್ಣವರ, ಉಪಾಧ್ಯಕ್ಷ ಮುರುೇಂದ್ರಗೌಡ ಪಾಟೀಲ, ಎಂ.ಬಿ.ಝಿರಲಿ ಸೇರಿದಂತೆ ಇತರರು ಇದ್ದರು.

ಸಾರ್ವಜನಿಕರ ಸೇವೆಯಲ್ಲಿ ಶ್ರಮಿಸುತ್ತಿರುವ ನ್ಯಾಯವಾದಿಗಳಿಗಾಗಿ ಕೇಂದ್ರ ಸರ್ಕಾರ ವಕೀಲರ ಕಲ್ಯಾಣ ಯೋಜನೆಗಳು ಸೇರಿದಂತೆ ವಿವಿಧ ಸೌಕರ್ಯಗಳನ್ನು ಕಲ್ಪಿಸಲು ಯೋಜನೆ ರೂಪಿಸಬೇಕು. ಜತೆಗೆ ನ್ಯಾಯಾಲಯಗಳಿಗೆ ಸೌಕರ್ಯಗಳನ್ನು ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಬೇಕು. ವಕೀಲರ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು ಎಂದು ಜಿಲ್ಲಾ ವಕೀಲರು ವಿನಂತಿಸಿದರು.
……………..

ಪೋಟೋ
12ಮಂಜು2- ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ವಕೀಲರು ಪ್ರತಿಭಟನೆ ನಡೆಸಿದರು.