ಜಿಲ್ಲೆಯಲ್ಲಿ 37.22 ಲಕ್ಷ ಮತದಾರರು

ಬೆಳಗಾವಿ: ಲೋಕಸಭೆ ಚುನಾವಣೆ ಸಿದ್ಧತೆಗಳು ಚುರುಕು ಪಡೆದುಕೊಂಡಿವೆ. ಜಿಲ್ಲಾಡಳಿತ ಬುಧವಾರ ಜಿಲ್ಲೆಯ ಮತದಾರರ ಅಂತಿಮ ಪಟ್ಟಿ ಪ್ರಕಟಿಸಿದ್ದು, ಬೆಳಗಾವಿ ಜಿಲ್ಲೆಯಲ್ಲಿ 37,22,034 ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಚುನಾವಣೆ ಆಯೋಗ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿ ಆದೇಶದ ಮೇರೆಗೆ ಮತದಾರರ ಪಟ್ಟಿ ಪರಿಷ್ಕರಿಸಲಾಗಿದೆ. 2018ರ ಅ.10ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. ಆಗ 37,16,701 ಮತದಾರರಿದ್ದರು. ಈಗ ಮತದಾರರ ಸಂಖ್ಯೆ 37,22,034ಕ್ಕೆ ಏರಿಕೆಯಾಗಿದೆ. ಈಗಿನ ಪಟ್ಟಿಯ ಪ್ರಕಾರ, 18,87,283 ಪುರುಷ ಮತದಾರರು ಮತ್ತು 18,34,751 ಮಹಿಳಾ ಮತದಾರರಿದ್ದಾರೆ. 66,901 ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. 63,1253 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದರು.

2013ರಲ್ಲಿ ಬೆಳಗಾವಿ ಜಿಲ್ಲೆಯ ಜನಸಂಖ್ಯೆಯು 47.79 ಲಕ್ಷ ಇತ್ತು. ಈಗ 53.17 ಲಕ್ಷ ಜನಸಂಖ್ಯೆ ಹೊಂದಿದೆ. ಕರ್ನಾಟಕ ರಾಜ್ಯದಲ್ಲಿ ಪುರುಷ, ಮಹಿಳಾ ಜನಸಂಖ್ಯೆಯ ಅನುಪಾತ 1000ಕ್ಕೆ 975 ಇದ್ದು, ಬೆಳಗಾವಿ ಜಿಲ್ಲೆಯಲ್ಲಿ ಈ ಪ್ರಮಾಣ 1000ಕ್ಕೆ 972 ಇದೆ ಎಂದು ತಿಳಿಸಿದರು.

ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದ ಮೇರೆಗೆ ಗ್ರಾಮೀಣ ಪ್ರದೇಶದಲ್ಲಿ 1,300 ಹಾಗೂ ನಗರ ಪ್ರದೇಶಗಳಲ್ಲಿ 1,400ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ಬೇರ್ಪಡಿಸಿ ಹೊಸ ಮತಗಟ್ಟೆಗಳನ್ನು ಸೃಷ್ಟಿಸಲಾಗಿದೆ. ಜಿಲ್ಲೆಯಲ್ಲಿ ಈ ಹಿಂದೆ 4,408 ಮತಗಟ್ಟೆಗಳಿದ್ದವು. ಈಗ ಮತಗಟ್ಟೆಗಳ ಸಂಖ್ಯೆ 4,434ಕ್ಕೆ ಏರಿಕೆಯಾಗಿದೆ. 26 ಮತಗಟ್ಟೆಗಳನ್ನು ಹೊಸದಾಗಿ ರಚಿಸಲಾಗಿದೆ ಎಂದು ತಿಳಿಸಿದರು.

ಇದು ಅಂತಿಮ ಮತದಾರರ ಪಟ್ಟಿಯಾಗಿದ್ದರೂ ಲೋಕಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆಯ ಕೊನೆಯ ಹಂತದವರೆಗೂ ಮತದಾರರ ಹೆಸರು ಸೇರಿಸಿಕೊಳ್ಳಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮತದಾರರಿಗೆ ಮಾಹಿತಿ ನೀಡಲು ಉಚಿತ ಸಹಾಯವಾಣಿ ಆರಂಭಿಸಲಾಗಿದೆ. ಮತದಾರರು ತಮ್ಮ ಜಿಲ್ಲೆಯ ಕೋಡ್ (ಉದಾ; ಬೆಳಗಾವಿ 0831)ನೊಂದಿಗೆ 1950 ಟೋಲ್‌ಫ್ರೀ ಸಂಖ್ಯೆಗೆ ಕರೆಮಾಡಿ ಮಾಹಿತಿ ಪಡೆಯಬಹುದು ಎಂದರು.

ಇದರ ಜತೆಗೆ, ಮೊ.8277816154ಕ್ಕೆ ಸಂದೇಶ ಕಳುಹಿಸಿ ಚುನಾವಣೆಗೆ ಸಂಬಂಧಿಸಿದ ದೂರು ಸಲ್ಲಿಸಬಹುದಾಗಿದೆ. ಜಿಲ್ಲೆಯಲ್ಲಿ 2,200 ಮತದಾರರನ್ನು ಬಿಟ್ಟರೆ ಉಳಿದೆಲ್ಲ ಮತದಾರರ ಭಾವಚಿತ್ರಗಳು ಮತದಾರರ ಪಟ್ಟಿಯಲ್ಲಿ ಲಭ್ಯವಾಗಿವೆ. ಜ.25ರಂದು ರಾಷ್ಟ್ರೀಯ ಮತದಾರರ ದಿನ ಆಚರಿಸುವ ಸಂದರ್ಭ ಹೊಸದಾಗಿ ಮತದಾರರ ಚೀಟಿ ನೀಡುವ ವ್ಯವಸ್ಥೆಗೆ ಚಾಲನೆ ನೀಡಲಾಗುವುದು ಎಂದರು. ಅಪರ ಜಿಲ್ಲಾಧಿಕಾರಿ ಡಾ.ಎಚ್.ಬಿ.ಬೂದೆಪ್ಪ ಉಪಸ್ಥಿತರಿದ್ದರು.