15 ರಿಂದ ಜಿಲ್ಲಾದ್ಯಂತ ಕ್ಷಯರೋಗ ಆಂದೋಲನ
ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಸಕ್ರಿಯ ಕ್ಷಯರೋಗ ಆಂದೋಲನ ಕಾರ್ಯಕ್ರಮ ಜು.15 ರಿಂದ ಜು.27 ರವರೆಗೆ ಜಿಲ್ಲಾದ್ಯಂತ ಆಯೋಜಿಸಲಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಎ.ಸಿ.ಶಿವಕುಮಾರ್ ತಿಳಿಸಿದ್ದಾರೆ.
ಕೇಂದ್ರ ಕ್ಷಯರೋಗ ವಿಭಾಗದ ಮಾರ್ಗಸೂಚಿಯಂತೆ ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕ್ಷಯರೋಗ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿಯೂ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಶೇ.20 ರಷ್ಟು ಜನ ಸಂಖ್ಯೆಯನ್ನು ದುರ್ಬಲ ಮತ್ತು ಹಿಂದುಳಿದ ಪ್ರದೇಶ ಮತ್ತು ಉದ್ದೇಶಿತ ಜನಸಂಖ್ಯೆಯೆಂದು ಗುರುತಿಸಲಾಗಿದೆ. ಅಂದರೆ ಸುಮಾರು 1,37,565 ಜನರನ್ನು ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮ ನಡೆಸಲು ಗುರುತಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಡಿಕೇರಿ ತಾಲೂಕಿನ 8,916 ಮನೆಗಳು ಹಾಗೂ ಒಟ್ಟು 39,426 ಜನರು, ವಿರಾಜಪೇಟೆ ತಾಲೂಕಿನ 11,325 ಮನೆ ಹಾಗೂ 37,879 ಜನರು ಮತ್ತು ಸೋಮವಾರಪೇಟೆ ತಾಲೂಕಿನ 15,719 ಮನೆ ಹಾಗೂ 60,260 ಜನರನ್ನು ಅಯ್ಕೆ ಮಾಡಿಕೊಳ್ಳಲಾಗಿದೆ. ಈ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಶಾ ಕಾರ್ಯಕರ್ತರು, ವೈದ್ಯಾಧಿಕಾರಿಗಳು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಮತ್ತು ಕಿರಿಯ ಪುರುಷ ಆರೋಗ್ಯ ಸಹಾಯಕರಿಗೆ ಈ ಬಗ್ಗೆ ತಾಲೂಕುವಾರು ತರಬೇತಿಗಳನ್ನು ಈಗಾಗಲೇ ನೀಡಿದ್ದು, ಜಿಲ್ಲೆಯಲ್ಲಿ ಒಟ್ಟು 35,960 ಉದ್ದೇಶಿತ ಮನೆಗಳನ್ನು ಕ್ಷಯರೋಗದ ಆಂದೋಲನ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 190 ತಂಡ ಕೆಲಸ ನಿರ್ವಹಿಸಲಿದ್ದು, ಪ್ರತಿ ತಂಡದಲ್ಲಿ ಇಬ್ಬರು ಸಿಬ್ಬಂದಿ ಇರುತ್ತಾರೆ. ದಿನದಲ್ಲಿ ಒಂದು ತಂಡ 50 ಮನೆಗೆ ಭೇಟಿ ನೀಡಲಿದೆ. 2018 ರಲ್ಲಿ ಜುಲೈ ತಿಂಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ 12 ಕ್ಷಯರೋಗ ಪ್ರಕರಣ ಕಂಡು ಬಂದಿತ್ತು. ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಕುಟುಂಬದ ಸದಸ್ಯರಲ್ಲಿ ಕ್ಷಯರೋಗದ ಲಕ್ಷಣಗಳಿದ್ದಲ್ಲಿ ಅವರ ಮಾಹಿತಿಯನ್ನು ಆರೋಗ್ಯ ಕಾರ್ಯಕರ್ತರ ತಂಡಗಳಿಗೆ ನೀಡಿ ಸಕ್ರೀಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿ ಸಹಕರಿಸಬೇಕೆಂದು ಕೋರಿದರು.

Leave a Reply

Your email address will not be published. Required fields are marked *