ತೇಗೂರು ಗ್ರಾಮದಲ್ಲಿ ಸಿಡಿಲು ಬಡಿದು ದಂಪತಿ ಬಲಿ

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಸೋಮವಾರ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು, ಚಿಕ್ಕಮಗಳೂರು ತಾಲೂಕು ತೇಗೂರು ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಉಳಿದಂತೆ ತರೀಕೆರೆ, ಕಳಸ, ಬಾಳೆಹೊನ್ನೂರು, ಮೂಡಿಗೆರೆ, ಆಲ್ದೂರಲ್ಲಿ ಭಾರಿ ಮಳೆಯಾಗಿದೆ.

ಚಿಕ್ಕಮಗಳೂರು ತಾಲೂಕು ತೇಗೂರಿನ ಮಂಜಾಚಾರ್(48) ಹಾಗೂ ಭಾರತಿ(42) ಮೃತ ದುರ್ದೈವಿಗಳು. ಹೊಲದಲ್ಲಿಯೇ ಮನೆ ನಿರ್ವಿುಸಿಕೊಂಡಿರುವ ಇವರು ಅಲ್ಲಿಯೇ ಇದ್ದ ಮತ್ತೊಂದು ಹೊಲದ ತರಕಾರಿ ಬೆಳೆಯಲ್ಲಿದ್ದ ಕಳೆ ಕೀಳಲು ಹೋಗಿದ್ದರು. ವಾಪಸು ಬರುವಾಗ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ದೀಪಕ್ ದ್ವಿತಿಯ ಹಾಗೂ ಪೂಜಾ ಅಂತಿಮ ಬಿಕಾಂ ಪದವಿ ಓದುತ್ತಿದ್ದಾರೆ.

ಹೊಲದಲ್ಲೇ ಮನೆ ನಿರ್ವಿುಸಿಕೊಂಡು ಅಲ್ಲಿಯೇ ವಾಸಿಸುತ್ತಿರುವ ದಂಪತಿ ಸಮೀಪದ ಮತ್ತೊಂದು ಹೊಲದಲ್ಲಿ ಶುಂಠಿ, ತರಕಾರಿ ಬೆಳೆದಿದ್ದಾರೆ. ಮಳೆಗಾಲದಲ್ಲಿ ಭತ್ತ ಬೆಳೆಯುವ ಇವರು, ಬೇಸಿಗೆಯಲ್ಲಿ ತರಕಾರಿ ಬೆಳೆಯುತ್ತಾರೆ. ಸೋಮವಾರ ಗ್ರಾಮದಲ್ಲಿದ್ದ ನೆಂಟರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮದುವೆ ಮುಗಿಸಿಕೊಂಡು ಮಧ್ಯಾಹ್ನದ ನಂತರ ತರಕಾರಿ ಬೆಳೆಯಲ್ಲಿದ್ದ ಕಳೆ ಕೀಳಲು ಹೋಗಿದ್ದರು. ಬೆಳಗ್ಗೆಯಿಂದ ಸುರಿಯುತ್ತಿದ್ದ ಬಿಸಿಲು ಮಧ್ಯಾಹ್ನ ನಂತರ ಆಕಾಶದಲ್ಲಿ ಮೋಡಗಳಿಂದ ತುಸು ತಣ್ಣನೆ ವಾತಾವರಣ ನಿರ್ವಿುಸಿತ್ತು. ಮಧ್ಯಾಹ್ನ 4 ಗಂಟೆ ಸಮಯದಲ್ಲಿ ಬಿರುಗಾಳಿ ಹಾಗೂ ಮಿಂಚು ಸಿಡಿಲು ಆರ್ಭಟ ಜೋರಾಗಿತ್ತು.

ಮುಗಿಲು ಮುಟ್ಟಿದ ರೋಧನ: ಇಬ್ಬರ ಶವಗಳನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿತ್ತು. ಸಾವಿರಾರು ಜನರು ಜಮಾಯಿಸಿದ್ದರು. ಇಬ್ಬರು ಮಕ್ಕಳು ಮತ್ತು ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು. ಇಬ್ಬರು ಮಕ್ಕಳು ಅಪ್ಪ-ಅಮ್ಮನ ನೆನದು ಗೋಳಾಡುತ್ತಿದ್ದರು. ಈ ದೃಶ್ಯ ನೋಡಿದವರ ಕಣ್ಣಾಲಿಗಳೂ ನೀರಾಗಿದ್ದವು.

ನೀವು ಓದಬೇಕು, ನಮ್ಮಂತೆ ಕಷ್ಟಪಡಬಾರದು ಎಂದು ಮಕ್ಕಳಿಗೆ ಸದಾ ಹೇಳುತ್ತಿದ್ದ ಈ ಇಬ್ಬರು ಕಷ್ಟ ಪಟ್ಟು ಓದಿಸುತ್ತಿದ್ದರು. ಇದನ್ನು ಮಕ್ಕಳು ಶವಾಗಾರದ ಬಳಿ ನೆನಪು ಮಾಡಿಕೊಂಡು ಸಂಕಟಪಡುತ್ತಿದ್ದರು. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೂಗಳತೆ ದೂರಲ್ಲಿತ್ತು ಮನೆ: ಮಿಂಚು, ಸಿಡಿಲಿನ ಆರ್ಭಟ ಕೇಳಿದ ದಂಪತಿ ಮನೆಗೆ ಹೋಗಲು ಹೊರಟರು. ಬಿರುಗಾಳಿ ಜತೆ ಗುಡುಗಿನ ಆರ್ಭಟ, ಆಕಾಶದಲ್ಲಿ ಕಣ್ಣು ಕೋರೈಸುವಷ್ಟು ಮಿಂಚಿನಿಂದ ಕಂಗೆಟ್ಟು ಮನೆ ಕಡೆ ಹೆಜ್ಜೆ ಹಾಕಿದರು. ಕೆಲಸ ಮಾಡುವ ಹೊಲದಿಂದ 200 ಹೆಜ್ಜೆ ಹಾಕಿದ್ದರೆ ಮನೆ ತಲುಪುತ್ತಿದ್ದರು. ಆದರೆ ವಿಧಿಯಾಟವೇ ಬೇರೆ ಆಗಿತ್ತು. ಕೆಲಸ ಮಾಡುತ್ತಿದ್ದ ಹೊಲ ಹಾಗೂ ಮನೆಯ ಮಧ್ಯ ಇದ್ದ ಬಸವನಕಟ್ಟೆ ಕೆರೆ ಏರಿ ಮೇಲೆ ದಂಪತಿ ನಡೆದುಕೊಂಡು ಹೋಗುತ್ತಿದ್ದರು. ಆಕಾಶವನ್ನೇ ಸೀಳಿ ಬಂದ ಕೋಲ್ಮಿಂಚಿನ ಸಿಡಿಲು ಇಬ್ಬರಿಗೆ ಬಡಿದು ನೆಲಕ್ಕುರುಳಿದ್ದಾರೆ.

ಮನೆಯಲ್ಲಿ ಕಾಯುತ್ತಿದ್ದ ಮಕ್ಕಳು: ಕಾಲೇಜು ಮುಗಿಸಿಕೊಂಡು ಬಂದ ಮಕ್ಕಳು ಅಪ್ಪ-ಅಮ್ಮನಿಗಾಗಿ ಕಾಯುತ್ತಿದ್ದರು. ಸಿಡಿಲು ಬಡಿದು ಇಬ್ಬರು ಮೃತರಾದರೂ ಅರ್ಧ ತಾಸು ಯಾರಿಗೂ ಮಾಹಿತಿ ತಿಳಿದಿರಲಿಲ್ಲ. ಮಳೆ ಆರ್ಭಟ ನಿಂತ ಮೇಲೆ ಹಸು ಮನೆಗೆ ಹೊಡೆದುಕೊಂಡು ಬರಲು ಕೆಲವರು ಕೆರೆ ಏರಿ ಮೇಲೆ ಹೋದಾಗ ಇಬ್ಬರು ಮಂಜುನಾಥ್ ಮತ್ತು ಭಾರತಿ ದಂಪತಿ ಮೃತಪಟ್ಟಿರುವುದು ನೋಡಿದ್ದಾರೆ. ತಕ್ಷಣ ಗ್ರಾಮದ ಜನರಿಗೆ ಹಾಗೂ ಹೊಲದ ಮನೆಯಲ್ಲಿದ್ದ ಇಬ್ಬರು ಮಕ್ಕಳಿಗೆ ಮಾಹಿತಿ ಮುಟ್ಟಿಸಿದರು.

Leave a Reply

Your email address will not be published. Required fields are marked *