ಚನ್ನರಾಯಪಟ್ಟಣ: ಕೋಲಾರದಲ್ಲಿ ನ.22ರಿಂದ 24ರವರೆಗೆ ನಡೆಯಲಿರುವ ಕಬಡ್ಡಿ ಸ್ಟೇಟ್ ಚಾಂಪಿಯನ್‌ಶಿಪ್ ಪಂದ್ಯಾವಳಿಗಾಗಿ ಜಿಲ್ಲೆಯ ಮಹಿಳಾ ಮತ್ತು ಪುರುಷರ ಕಬಡ್ಡಿ ತಂಡಗಳ ಆಯ್ಕೆಗಾಗಿ ಪಟ್ಟಣದ ಎ1 ಸ್ಪೋರ್ಟ್ಸ್ ಆಕಾಡೆಮಿಯಲ್ಲಿ ಮಂಗಳವಾರ ಆಯ್ಕೆ ಪ್ರಕ್ರಿಯೆ ಆಯೋಜಿಸಲಾಗಿತ್ತು.
2024ನೇ ಸಾಲಿಗೆ ರಾಜ್ಯವನ್ನು ಪ್ರತಿನಿಧಿಸುವ ಮಹಿಳಾ ಮತ್ತು ಪುರುಷರ ಕಬಡ್ಡಿ ತಂಡವನ್ನು ಆಯ್ಕೆ ಮಾಡುವ ಸಲುವಾಗಿ ಕೋಲಾರದಲ್ಲಿ ನ. 22ರಿಂದ ನಡೆಯಲಿರುವ ಮೂರು ದಿನಗಳ ರಾಜ್ಯ ಚಾಂಪಿಯನ್‌ಶಿಪ್ ಪಂದ್ಯಾವಳಿಗೆ ಜಿಲ್ಲೆಯ ಪುರುಷ ಮತ್ತು ಮಹಿಳಾ ತಂಡವನ್ನು ಆಯ್ಕೆ ಮಾಡಿ ಕಳುಹಿಸುವ ಹೊಣೆಗಾರಿಕೆ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್‌ದಾಗಿದ್ದು, ಈ ಹಿನ್ನೆಲೆಯಲ್ಲಿ ಚನ್ನರಾಯಪಟ್ಟಣ ತಾಲೂಕು ಕ್ರೀಡಾಂಗಣದ ಬಳಿಯ ಎ1 ಸ್ಪೋರ್ಟ್ಸ್ ಆಕಾಡೆಮಿಯಲ್ಲಿ ಪುರುಷ ಮತ್ತು ಮಹಿಳಾ ಕಬಡ್ಡಿ ತಂಡಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಪುರಷರ ತಂಡಕ್ಕಾಗಿ 20 ಮಂದಿ ಆಟಗಾರರು, ಮಹಿಳಾ ತಂಡಕ್ಕಾಗಿ 15 ಮಂದಿ ಆಟಗಾರರ ಆಯ್ಕೆಗೆ ಜಿಲ್ಲೆಯ ವಿವಿಧೆಡೆ 150ಕ್ಕೂ ಹೆಚ್ಚು ಕಬಡ್ಡಿ ಆಟಗಾರರು ಆಗಮಿಸಿದ್ದರು.
ಪುರಷರ 12 ತಂಡಗಳು ಮತ್ತು ಮಹಿಳೆಯರ 2 ತಂಡಗಳನ್ನು ರಚಿಸಿ ನಡೆಸಲಾದ ಕಬಡ್ಡಿ ಪಂದ್ಯಾವಳಿಗಳಲ್ಲಿ ಉತ್ತಮ ಕ್ರೀಡಾಪಟುಗಳನ್ನು ಪರಿಣಿತರ ತಂಡ ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ನಡೆಸಿತ್ತು.
ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಸುನೀಲ್ ಮಾತನಾಡಿ, ಕರ್ನಾಟಕ ಚಾಂಪಿಯನ್ ಶಿಪ್‌ಗಾಗಿ ತಂಡದ ಆಯ್ಕೆಗಾಗಿ ಪಟ್ಟಣದ ರಂಗನಾಥ್‌ರವರ ಎ1 ಸ್ಪೋಟ್ಸ್ ಆಕಾಡೆಮಿಯಲ್ಲಿ ತಂಡಗಾರರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಪ್ರತಿಭಾನ್ವಿತರ ಆಯ್ಕೆಯ ನಂತರ ಅವರು ದೇಶಕ್ಕೆ ಮತ್ತು ಪ್ರೋ ಕಬಡ್ಡಿ ಪಂದ್ಯಾವಳಿಗಳಲ್ಲಿ ಆಡಲು ತಯಾರಿಗೊಳಿಸಲಾಗುತ್ತದೆ. 20 ವರ್ಷದೊಳಗಿನ ಬಾಲಕರು 70 ಕೆಜಿ ತೂಕಕ್ಕಿಂತ ಕಡಿಮೆ, ಮಹಿಳೆಯರು 65 ಕೆಜಿ ತೂಕದೊಳಗಿರುವವರಷ್ಟೇ ಭಾಗವಹಿಸಬಹುದು ಎಂದರು.
ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಕಾರ್ಯದರ್ಶಿ ತಾತೇಗೌಡ ಮಾತನಾಡಿ, ನ.22 ರಿಂದ 24ರವರೆಗೆ ಕೋಲಾರದಲ್ಲಿ ರಾಜ್ಯಮಟ್ಟದ ಜೂನಿಯರ್ ಕಬಡ್ಡಿ ಚಾಂಪಿಯನ್ ಶಿಪ್ ನಡೆಯಲಿದೆ. ಆ ಚಾಂಪಿಯನ್ ಶಿಪ್‌ಗಾಗಿ ಭಾಗವಹಿಸಲು ಜಿಲ್ಲಾ ಕಬಡ್ಡಿ ತಂಡವನ್ನು ಆಯ್ಕೆ ಮಾಡಬೇಕಾಗಿದೆ. 20 ವರ್ಷದೊಳಗಿನ ಮಹಿಳಾ ಮತ್ತು ಪುರಷರ 35 ಜನರ ತಂಡವನ್ನು ಆಯ್ಕೆ ಮಾಡಿ ಅವರಿಗೆ ಒಂದು ವಾರಗಳ ಕಾಲ ತರಬೇತಿ ನೀಡಿ ಕೋಲಾರದಲ್ಲಿ ನಡೆಯುವ ಚಾಂಪಿಯನ್ ಶಿಪ್‌ನಲ್ಲಿ ಪಾಲ್ಗೊಳಲಿದ್ದಾರೆ. ಆಲ್ಲಿನ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುವ ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂದರು.\
ಈ ಸಂದರ್ಭ ಅಂತಾರಾಷ್ಟ್ರೀಯ ರೆಫರಿ ಮತ್ತು ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್‌ನ ಖಜಾಂಚಿ ನಂಜೇಶ್‌ಗೌಡ, ಉಪಾಧ್ಯಕ್ಷ ಜಯರಾಂ, ಗೌರವ ಅಧ್ಯಕ್ಷ ಎಚ್.ಕೆ.ಮಹೇಶ್, ಸಹಕಾರ್ಯದರ್ಶಿ ರಂಗನಾಥ್, ಸಂಘಟನಾ ಕಾರ್ಯದರ್ಶಿ ಸುನೀಲ್, ಹಿರಿಯ ಕಬಡ್ಡಿ ಆಟಗಾರರಾದ ಮಹಾಲಿಂಗೇಗೌಡ, ಸುನೀಲ್, ಅನಂತ್ ಇತರರು ಇದ್ದರು.