ಬೆಳೆ ನಷ್ಟ ಖಚಿತ ಮಾಹಿತಿ ಕಲೆಹಾಕಿ

ಚಿಕ್ಕಮಗಳೂರು: ಅತಿವೃಷ್ಟಿ, ಅನಾವೃಷ್ಟಿಯಿಂದ ಜಿಲ್ಲೆಯಲ್ಲಾಗಿರುವ ಬೆಳೆ ನಷ್ಟ ಖಚಿತ ಮಾಹಿತಿಯೊಂದಿಗೆ ದಾಖಲು ಮಾಡಿ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೀವ್ ಚಾವ್ಲಾ ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅತಿವೃಷ್ಟಿ, ಅನಾವೃಷ್ಟಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.

ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜಂಟಿ ತಂಡ ಹಾನಿ ಪ್ರದೇಶಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಸಮೀಕ್ಷೆ ಮಾಡಬೇಕು. ಸಮೀಕ್ಷೆಯಲ್ಲಿ ತೊಂದರೆಗೊಳಗಾದ ಯಾವುದೇ ರೈತ ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದರು.

ರಬಿ, ಖರಿಫ್ ಬೆಳೆಗಳ ನಮೂದು ಮಾಡುವಾಗ ನೌಕರರು ಲೋಪವೆಸಗಬಾರದು. ವ್ಯತ್ಯಾಸವಾದರೆ ಅಂಕಿ ಅಂಶಗಳು ತಪ್ಪಾಗುತ್ತದೆ. ರಬಿ, ಖರಿಫ್​ಗೆ ಪ್ರತ್ಯೇಕವಾಗಿ ಸಾಪ್ಟ್​ವೇರ್ ರೂಪಿಸಲಾಗಿದೆ. ಕಂದಾಯ ಇಲಾಖೆ ನಂಬಿಕೊಂಡು ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ದಾಖಲೆ ಮಾಡಬಾರದು. ಅಗತ್ಯಬಿದ್ದರೆ ಸ್ಥಳೀಯರ ನೆರವು ಪಡೆದು ಸಮೀಕ್ಷೆ ಮಾಡಿ ಸರಿಯಾದ ಮಾಹಿತಿ ನೀಡಬೇಕು ಎಂದು ತಾಕೀತು ಮಾಡಿದರು.

ಒಂದು ಹಳ್ಳಿಯಲ್ಲಿ ಕನಿಷ್ಠ ಐದು ಸ.ನಂ.ಗಳಲ್ಲಿ ಅಧಿಕಾರಿಗಳು ಸಮೀಕ್ಷೆ ಮಾಡಬೇಕು. ಹಾನಿಯಾದ ಎಲ್ಲ ಪ್ರದೇಶಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು. ಸಮೀಕ್ಷೆಯಲ್ಲಿ ರೈತರು ಹೊರಗುಳಿದರೆ ಅವರಿಗೆ ಸರ್ಕಾರ ನೀಡಬಹುದಾದ ಪರಿಹಾರ ಸಿಗುವುದಿಲ್ಲ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳೂ ಜವಾಬ್ದಾರರಾಗುತ್ತಾರೆ ಎಂದರು.

ಅತಿವೃಷ್ಟಿ, ಅನಾವೃಷ್ಟಿ ಜಿಲ್ಲೆ ಘೊಷಣೆಗೆ ಪ್ರಸ್ತಾವನೆ: ಜಿಲ್ಲೆಯನ್ನು ಅತಿವೃಷ್ಟಿ, ಅನಾವೃಷ್ಟಿ ಜಿಲ್ಲೆಯೆಂದು ಘೊಷಣೆ ಮಾಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಹೇಳಿದರು. ಸಭೆಯಲ್ಲಿ, ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟದ ಮಾಹಿತಿ ನೀಡಿ, ಮಲೆನಾಡಿನಲ್ಲಿ ಅತಿಯಾದ ಮಳೆ ಸುರಿದು ಕಾಫಿ, ಅಡಕೆ, ಮೆಣಸು ಬೆಳೆ ಹಾನಿಯಾಗಿದೆ. ಬಯಲು ಸೀಮೆಯ ಕಡೂರು ತಾಲೂಕು ಹಾಗೂ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿ ಗ್ರಾಮದಲ್ಲಿ ಮುಂಗಾರು ಬೆಳೆಗಳು ನಾಶವಾಗುತ್ತಿವೆ. ಕೆಲವು ರೈತರು ಇನ್ನೂ ಬಿತ್ತನೆ ಮಾಡಿಲ್ಲ. ಮಳೆ ಒಂದು ವಾರದಲ್ಲಿ ಬಾರದಿದ್ದರೆ ಮತ್ತಷ್ಟು ಬೆಳೆ ನಷ್ಟವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯ ಗಮನ ಸೆಳೆದರು.

ಜಿಪಂ ಇಂಜಿನಿಯರ್ ವ್ಯಾಪ್ತಿಯ ರಸ್ತೆ, ಮೋರಿಗಳು ಹಾಳಾಗಿ 100 ಕೋಟಿ ರೂ., ಲೋಕೋಯೋಗಿ ಇಲಾಖೆಯ ರಸ್ತೆ, ಸೇತುವೆ ಹಾಳಾಗಿ 73 ಕೋಟಿ ರೂ. ನಷ್ಟವಾಗಿದೆ. ಮಳೆ ಅನಾಹುತಕ್ಕೆ ನಾಲ್ವರು ಮೃತಪಟ್ಟಿದ್ದು, 20 ಲಕ್ಷ ರೂ. ಪರಿಹಾರ ನೀಡಲಾಗಿದೆ. ಸರ್ಕಾರದಿಂದ 25.13 ಕೋಟಿ ರೂ. ಪ್ರಕೃತಿ ವಿಕೋಪ ಪರಿಹಾರದ ಅನುದಾನ ಬಿಡುಗಡೆಯಾಗಿದ್ದು, ನಿಯಮಾನುಸಾರ ಇದನ್ನು ವಿನಿಯೋಗಿಸಲಾಗುವುದು ಎಂದರು.

ಡ್ರೋಣ್ ಸಮೀಕ್ಷೆ 400 ಕೋಟಿ ರೂ. ಬೇಕು: ಬೆಳೆ ಸಮೀಕ್ಷೆ ಪ್ರಾಯೋಗಿಕವಾಗಿ ಹೊಲಗಳಿಗೆ ಹೋಗಿ ಮಾಡಲು ಕಷ್ಟವಾಗುತ್ತಿದ್ದು, ಡ್ರೋಣ್ ಸೌಲಭ್ಯ ನೀಡಬೇಕೆಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಪೂರ್ಣಿಮಾ ಅವರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗೆ ಮನವಿ ಮಾಡಿದರು.

ರಾಜ್ಯಾದ್ಯಂತ ಡ್ರೋಣ್ ಸಮೀಕ್ಷೆ ಮಾಡಬೇಕಾದರೆ ಒಟ್ಟು 400 ಕೋಟಿ ರೂ. ಬೇಕಾಗುತ್ತದೆ. ಇಷ್ಟೊಂದು ಹಣ ಬರಿ ಬೆಳೆ ನಷ್ಟ ಸಮೀಕ್ಷೆ ಮಾಡುವುದು ಸರಿಯಲ್ಲ. ಹೀಗಾಗಿ ಅಧಿಕಾರಿಗಳು ಸ್ಥಳೀಯ ರೈತರ ನೆರವು ಪಡೆದು ಮಾಡಬೇಕು ಎಂದು ರಾಜೀವ್ ಚಾವ್ಲಾ ಹೇಳಿದರು.