More

    23ರಂದು ಜಿಲ್ಲಾಸ್ಪತ್ರೆ ಲೋಕಾರ್ಪಣೆ

    ಮೈಸೂರು: ಅಂತೂ ಇಂತೂ ಸಾಂಸ್ಕೃತಿಕ ನಗರಿ ಜನರ ಬಹುದಿನಗಳ ಜಿಲ್ಲಾಸ್ಪತ್ರೆ ಬೇಡಿಕೆ ಈಡೇರುವ ಕಾಲ ಕೂಡಿಬಂದಿದ್ದು, ಜ.23ರಂದು ಆಸ್ಪತ್ರೆ ಲೋಕಾರ್ಪಣೆಗೊಳ್ಳಲಿದೆ.

    ನಗರದ ಕೆಆರ್‌ಎಸ್ ರಸ್ತೆಯಲ್ಲಿರುವ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಆವರಣದಲ್ಲಿ ನೂತನ ಆಸ್ಪತ್ರೆಯನ್ನು ಅಂದು ಸಂಜೆ 4 ಗಂಟೆಗೆ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉದ್ಘಾಟಿಸಲಿದ್ದಾರೆ ಎಂದು ಶಾಸಕ ಎಲ್.ನಾಗೇಂದ್ರ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    13.11 ಎಕರೆ ಜಾಗದಲ್ಲಿ 75 ಕೋಟಿ ರೂ.ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲಾಗಿದ್ದು, 250 ಹಾಸಿಗೆಗಳ ಸೌಲಭ್ಯ ನೀಡುವ ಉದ್ದೇಶವಿದೆ. ರಕ್ತನಿಧಿ, ಮಕ್ಕಳ ಆಸ್ಪತ್ರೆ, ನರರೋಗಶಾಸ್ತ್ರ, ಮೂಳೆ, ದಂತ, ಚರ್ಮ, ಹೆರಿಗೆ ಕೇಂದ್ರ, ಇಎನ್‌ಟಿ ಮತ್ತಿತರ ವಿಭಾಗಗಳು, ಆಪರೇಷನ್ ಥಿಯೇಟರ್‌ಗಳು, ವಿವಿಧ ಥೆರಪಿಗಳು ಸೇರಿದಂತೆ ಎಲ್ಲ ರೀತಿಯ ಸೇವೆಗಳು ಇಲ್ಲಿ ಸಿಗಲಿವೆ. ನೆಲಮಹಡಿ ಸೇರಿ 5 ಅಂತಸ್ತಿನ ಕಟ್ಟಡ ಇಲ್ಲಿದೆ ಎಂದರು.

    ಏನೇನು ಸೇವೆ?: ಕಟ್ಟಡದ ಕೆಳ ಮಹಡಿಯಲ್ಲಿ ಹೊರರೋಗಿಗಳ ವಿಭಾಗ, ಗೈನಿಕ್ ಕೊಠಡಿ, ಅಲ್ಟ್ರಾಸೌಂಡ್, ಎಕ್ಲಾಂಸಿಯಾ, ಲೇಬರ್ ಕ್ಲೀನ್, ಸೆಪ್ಟಿಕ್ ಲೇಬರ್, ಪೋಸ್ಟ್ ಲೇಬರ್ ಲ್ಯಾಬ್, ಆಕ್ಸಿಜನ್ ಸಿಲಿಂಡರ್ ಕೊಠಡಿ, ಪಿಡಿಯಾಟ್ರಿಕ್ಸ್, ಪುರುಷ ಮತ್ತು ಮಹಿಳೆಯರ ಪ್ರತ್ಯೇಕ ಶೌಚಗೃಹ… ಇತ್ಯಾದಿ ವೈದ್ಯಕೀಯ ಸೌಲಭ್ಯಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ.

    ನೆಲಮಹಡಿಯಲ್ಲಿ ಹೊರರೋಗಿಗಳ ವಿಭಾಗ , ಫಾರ್ಮಸಿ, ಪುರುಷ ಮತ್ತು ಮಹಿಳೆಯರ ಚುಚ್ಚುಮದ್ದು ಕೊಠಡಿ, ಇಸಿಜಿ, ಟ್ರೆಡ್‌ಮಿಲ್, ಎಕೋ ಪರೀಕ್ಷಾ ಕೊಠಡಿಗಳು, ಪಿಸಿಯೋಥೆರಪಿ, ಅಲ್ಟ್ರಾಸೌಂಡ್, ರೇಡಿಯಾಲಜಿ ವಿಭಾಗ, ಮೈನರ್ ಒಟಿ, ಎಕ್ಸರೇ, ಲ್ಯಾಬ್, ಡ್ರಗ್‌ಸ್ಟೋರ್, ಸಿಟಿ ಸ್ಕ್ಯಾನ್, ಸ್ಪೆಷಲ್, ಸೆಮಿಸ್ಪೆಷಲ್, ಕ್ಯಾಷೂಯಾಲಿಟಿ ವಾರ್ಡ್, ಶಸ್ತ್ರಚಿಕಿತ್ಸಕರ ಕೊಠಡಿ, ಆರ್ಥೋಪೆಡಿಕ್, ಆಡಳಿತ ವೈದ್ಯಾಧಿಕಾರಿ ಕೊಠಡಿ, ಒಪಿಡಿ ರೆಕಾರ್ಡ್ಸ್, ರ‌್ಯಾಂಪ್, ಲಿಪ್ಟ್ ಇತ್ಯಾದಿ ಮೂಲಸೌಲಭ್ಯ ಕಲ್ಪಿಸಲಾಗಿದೆ.

    ಮೊದಲನೇ ಮಹಡಿಯಲ್ಲಿ ಡರ್ಮಾಟಾಲಜಿ, ವೈಟಿಂಗ್, ಸಮಾಜ ಸೇವಕರ ಕೊಠಡಿ, ಸ್ಟರಾಮಿಲ್, ಮೈನರ್ ಒಟಿ, ಯೂರಾಲಜಿ, ಕೌನ್ಸಿಲರ್ ಸೈಕಿಯಾಟ್ರಿ, ಸ್ಪೀಚ್ ಆ್ಯಂಡ್ ಹಿಯರಿಂಗ್, ಇಎನ್‌ಟಿ, ಸಿಟಿಸಿ (ಎಂ), ಸಿಟಿಸಿ (ಎಫ್), ಇಸಿಜಿ, ಅಡಿಯೋಮೀಟರಿ, ನ್ಯೂರಾಲಜಿ, ಡಿಇಐಸಿ ಕೇಂದ್ರ ವೈದ್ಯಕೀಯ ಹಾಗೂ ದಾದಿಯರ ಅಧೀಕ್ಷಕರು ಹಾಗೂ ಶಸ್ತ್ರಚಿಕಿತ್ಸಕರ ಕೊಠಡಿ, ಸಭಾಂಗಣ, ಆಡಳಿತ ಭಾಗ, ಆರ್‌ಎಂಒ ಕೊಠಡಿ, ಐಸಿಯು, ಎರಡನೇ ಮಹಡಿಯಲ್ಲಿ ಲೈಬ್ರರಿ, ಪ್ಯಾಂಟ್ರಿ, ಕಾನ್ಫರೆನ್ಸ್ ಹಾಲ್, ಸಿರಿಯಾಲಜಿ ಲ್ಯಾಬ್, ಬ್ಲಡ್ ಸ್ಟೋರೇಜ್ ಬಿಬಿ ಆಫೀಸರ್, ಬ್ಲಡ್ ಡ್ರಾ ಮತ್ತು ರಿಫ್ರೆಷ್‌ಮೆಂಟ್, ಸ್ಟರ್‌ಲೈಸ್ ಸ್ಟೋರ್, ಸಿಎಸ್‌ಎಸ್‌ಡಿ, ಮೇಜರ್ ಒಟಿ, ಅನಸ್ತೇಶಿಯ ಹಾಗೂ ಮೂರನೇ ಮಹಡಿಯಲ್ಲಿ ಕ್ಲಿನಿಕ್, ನ್ಯೂಟ್ರಿಷನ್, ರೆಕಾರ್ಡ್ಸ್, ರಿಜಿಸ್ಟ್ರೇಷನ್, ಕೌನ್ಸೆಲಿಂಗ್, ರಿಲೇಟಿವ್ಸ್ ವೈಟಿಂಗ್, ಬರ್ನ್ಸ್ ವಾರ್ಡ್, ಟ್ರೀಟ್ಮೆಂಟ್ ರೂಂ ಸೇವೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದರು.
    ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಜಿಲ್ಲಾ ಸರ್ಜನ್ ಡಾ.ಲಕ್ಷ್ಮಣ್ ಇತರರಿದ್ದರು.

    ಒತ್ತಡ ಕಡಿಮೆಯಾಗಲಿದೆ: ಸದ್ಯ ಕೆ.ಆರ್.ಆಸ್ಪತ್ರೆ ಮತ್ತು ಚೆಲುವಾಂಬ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು ಜಿಲ್ಲೆಗಳಿಂದ ಈ ಆಸ್ಪತ್ರೆಗಳಿಗೆ ನಿತ್ಯ ಸಾವಿರಾರು ರೋಗಿಗಳು ಬರುತ್ತಾರೆ. ಇದರಿಂದ ಎಲ್ಲ ರೋಗಿಗಳಿಗೂ ಆರೋಗ್ಯ ಸೇವೆ ಸಮರ್ಪಕವಾಗಿ ಸಿಗದಂತಾಗಿದ್ದು, ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಚೆಲುವಾಂಬ ಆಸ್ಪತ್ರೆಯಲ್ಲಿ ನಿತ್ಯ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಹೆರಿಗೆಗಳಾಗುತ್ತಿವೆ.

    ಹೀಗಾಗಿ, ದಾಖಲಾಗುತ್ತಿರುವ ಗರ್ಭಿಣಿಯರು ಮತ್ತು ಮಕ್ಕಳು ಎಷ್ಟೋ ಬಾರಿ ಹಾಸಿಗೆಯಿಲ್ಲದೆ ನೆಲದ ಮೇಲೆ ಮಲಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ಜಿಲ್ಲಾಸ್ಪತ್ರೆ ತನ್ನ ಸೇವೆ ಪ್ರಾರಂಭಿಸುವುದರಿಂದ ಈ ಆಸ್ಪತ್ರೆಗಳ ಮೇಲಿನ ಒತ್ತಡ ಕೊಂಚ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಬಡರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಹಣ ಕಳೆದುಕೊಳ್ಳುವುದು ತಪ್ಪಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts