ವಲಸಿಗರ ಮಕ್ಕಳಿಗೆ ಋತುಮಾನ ಶಾಲೆ

ಚಿಕ್ಕಮಗಳೂರು: ವಲಸೆ ತೆರಳುವ ಕಾರ್ವಿುಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ರಾಜ್ಯ ಸರ್ಕಾರ ಋತುಮಾನ ಶಾಲೆ ಎಂಬ ವಿಶೇಷ ಯೋಜನೆ ರೂಪಿಸಿದ್ದು, ಜಿಲ್ಲೆಯಲ್ಲಿ ಐದು ಕಡೆ ಇಂತಹ ಶಾಲೆಗಳನ್ನು ಆರಂಭಿಸಿದೆ.

ಪ್ರತಿ ವರ್ಷ ನವೆಂಬರ್​ನಿಂದ ಏಪ್ರಿಲ್​ವರೆಗೆ ಕಾಫಿ ಹಾಗೂ ಬೆಳೆ ಕೊಯ್ಲು ಸಲುವಾಗಿ ಕೆಲಸ ಅರಸಿ ಬರುವ ಕಾರ್ವಿುಕರನ್ನು ಬಳಸಿಕೊಳ್ಳುವುದು ಸಹಜ. ಕಾರ್ವಿುಕರ ಜತೆ ಬರುವ ಅವರ ಮಕ್ಕಳು ಸಹಜವಾಗಿಯೇ ವಿದ್ಯಾಭ್ಯಾಸ ವಂಚಿತರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಋತುಮಾನ ಶಾಲೆಯ ಪರಿಕಲ್ಪನೆ ಪರಿಚಯಿಸಿ ಇದೀಗ ಯಶಸ್ವಿಯೂ ಆಗಿದೆ.

ಋತುಮಾನ ಶಾಲೆ ಎಂದರೆ ಅದಕ್ಕೆ ಪ್ರತ್ಯೇಕ ತರಗತಿ ಇರದು. ಅವರಿಗೆ ದಾಖಲಾತಿ ಸಹ ನೀಡುವ ಕ್ರಮವಿಲ್ಲ. ಇಲ್ಲಿನ ವಿದ್ಯಾರ್ಥಿಗಳ ಜತೆಯಲ್ಲೇ ಅವರ ಕಲಿಕೆ ಮುಂದುವರಿಯಲಿದ್ದು, ಇದಕ್ಕೆ ಈಗಾಗಲೇ ಜಿಲ್ಲೆಯ ಐದು ಕಡೆ ಎನ್​ಜಿಒಗಳ ನೆರವಿನಲ್ಲಿ ಆರಂಭವಾಗಿರುವ ಈ ಶಾಲೆಗಳಲ್ಲಿ 220 ಮಕ್ಕಳು ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಮಕ್ಕಳಿಗೆ ಅಕ್ಕಪಕ್ಕದ ಸರ್ಕಾರಿ ಶಾಲೆಗಳಲ್ಲಿ ವಸತಿ ಸಹ ಲಭ್ಯವಿದೆ. ಇವರಿಗೆ ಬೆಳಗ್ಗಿನ ತಿಂಡಿ ಹಾಗೂ ರಾತ್ರಿ ಊಟ ಒದಗಿಸಲಿದ್ದು, ಮಧ್ಯಾಹ್ನ ಶಾಲೆಯಲ್ಲೇ ಎಂದಿನ ಬಿಸಿಯೂಟ ಲಭಿಸಲಿದೆ. ರಾತ್ರಿ ಮಕ್ಕಳು ಅದೇ ಶಾಲೆಯಲ್ಲಿ ತಂಗಲಿದ್ದು, ಅವರಿಗೆ ಹೊದಿಕೆಗಳು ಮತ್ತಿತರ ಸೌಲಭ್ಯ ಕಲ್ಪಿಸಲಾಗುತ್ತದೆ.

ಟೆಂಟ್ ಶಾಲೆಗೂ ಸಿದ್ಧತೆ: ಹೊರ ಜಿಲ್ಲೆ ಅಥವಾ ಉತ್ತರ ಕರ್ನಾಟಕದ ವಲಸೆ ಕಾರ್ವಿುಕರ ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ಕಲ್ಪಿಸಲು ಶಿಕ್ಷಣ ಇಲಾಖೆ ಟೆಂಟ್ ಶಾಲೆ ತೆರೆಯಲು ಸಿದ್ಧತೆ ನಡೆಸಿದೆ. ಈಗಾಗಲೇ ಡಿಡಿಪಿಐ, ಬಿಇಒಗಳಿಗೆ ಪತ್ರ ಬರೆದು ಟೆಂಟ್ ಶಾಲೆ ಅಗತ್ಯತೆ ಮಾಹಿತಿ ಕೇಳಿದ್ದಾರೆ. ಸಿಆರ್​ಪಿ ಮತ್ತು ಬಿಆರ್​ಪಿಗಳು ಈ ಸಂಬಂಧ ಸಮೀಕ್ಷೆ ನಡೆಸಿ ಟೆಂಟ್ ಶಾಲೆಗೆ ಜಾಗ ಗುರುತಿಸಿ ವರದಿ ಸಲ್ಲಿಸಲಿದ್ದಾರೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಶಾಲೆ ತೆರೆಯಲು ಇಲಾಖೆ ತೀರ್ವನಿಸಿದೆ.

ಋತುಮಾನ ಶಾಲೆಗಳ ಮಾದರಿಯಲ್ಲೇ ಟೆಂಟ್ ಶಾಲೆಗೆ ಗುರುತಿಸಲಾದ ಸ್ಥಳದ ಹತ್ತಿರದಲ್ಲಿ ಸರ್ಕಾರಿ ಶಾಲೆ ಇದ್ದರೆ, ಅಲ್ಲಿಯೇ ವಲಸೆ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗುವುದು. ಮಕ್ಕಳ ಸಂಖ್ಯೆ ಹೆಚ್ಚಿದ್ದಲ್ಲಿ, ಇಲ್ಲವೆ ತಾತ್ಕಾಲಿಕ ಟೆಂಟ್ ನಿರ್ವಿುಸಿ ಶಿಕ್ಷಕರನ್ನು ನಿಯೋಜಿಸಿ ಆರು ತಿಂಗಳ ಅವಧಿಗೆ ಶಾಲೆ ನಡೆಸಲಾಗುವುದು. ವಲಸೆ ಮಕ್ಕಳ ಮಾಹಿತಿ ನೀಡಲು ತೋಟದ ಮಾಲೀಕರಿಗೆ ಇಲಾಖೆ ಮನವಿ ಮಾಡಿದೆ.

ಕಳೆದ ಬಾರಿ ಪೊಲೀಸ್ ಇಲಾಖೆ ಅಸ್ಸಾಂ ಕಾರ್ವಿುಕರ ಮಾಹಿತಿ ಕಲೆ ಹಾಕಲು ದಾಖಲಾತಿಗಳನ್ನು ತೋಟ ಮಾಲೀಕರ ಮೂಲಕವೇ ಸಂಗ್ರಹಿಸಲು ಮುಂದಾದ ಹಿನ್ನೆಲೆಯಲ್ಲಿ ಈ ಬಾರಿ ಶೇ.70ರಷ್ಟು ಅಸ್ಸಾಂ ಕಾರ್ವಿುಕರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಚಿಕ್ಕಮಗಳೂರು ಜಿಲ್ಲೆಯ ಬಯಲು ಭಾಗ ಹಾಗೂ ಉತ್ತರ ಕರ್ನಾಟಕದಿಂದ ಕಾರ್ವಿುಕರನ್ನು ಕರೆಸಿಕೊಳ್ಳಲಾಗಿದ್ದು, ಈಗಾಗಲೇ ಮೂಡಿಗೆರೆ, ಕಳಸ, ಬಾಳೆಹೊನ್ನೂರು, ಚಿಕ್ಕಮಗಳೂರು, ಗಿರಿ ಭಾಗದ ತೋಟಗಳು ಸೇರಿ ಜಿಲ್ಲೆಯ ಎಲ್ಲ ಕಾಫಿ ತೋಟಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಈಗಾಗಲೇ ಕಾರ್ವಿುಕರು ಆಗಮಿಸಿದ್ದಾರೆ.