ಸಾಹಿತ್ಯ ಸಮ್ಮೇಳನದ ಪ್ರಚಾರ ರಥಕ್ಕೆ ಚಾಲನೆ

ಪಿರಿಯಾಪಟ್ಟಣ: ಜಿಲ್ಲಾ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ತಾಲೂಕಿನ ಪ್ರತಿಯೊಬ್ಬ ಕನ್ನಡಿಗನು ಕೈಜೋಡಿಸಬೇಕು ಎಂದು ರಾವಂದೂರಿನ ಮುರುಘಾ ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಕನ್ನಂಬಾಡಿ ಅಮ್ಮ ದೇವಾಲಯದ ಬಳಿ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ರಥಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಭವ್ಯ ಇತಿಹಾಸ ಹಾಗೂ ಪರಂಪರೆಯುಳ್ಳ ಪಿರಿಯಾಪಟ್ಟಣದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮಯ ಸಂಗತಿ. ಕನ್ನಡ ಅಭಿಮಾನವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಮುಂದಿನ ಪೀಳಿಗೆಗೆ ಸಂಸ್ಕೃತಿ ಹಾಗೂ ಪರಂಪರೆ ಪರಿಚಯ ಮಾಡಿಕೊಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ಕನ್ನಡ ಕಟ್ಟುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಿದಾಗ ಮಾತ್ರ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಪರಂಪರೆ ಉಳಿಯಲು ಸಾಧ್ಯ ಎಂದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಗೊರಳ್ಳಿ ಜಗದೀಶ್ ಮಾತನಾಡಿದರು. ತಹಸೀಲ್ದಾರ್ ಮಹಮದ್ ಕುಂಜಿ, ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಈರಯ್ಯ, ಪುರಸಭಾ ಮಾಜಿ ಅಧ್ಯಕ್ಷ ವೇಣುಗೋಪಾಲ್, ಸದಸ್ಯರಾದ ಪ್ರಕಾಶ್‌ಸಿಂಗ್, ಪಿ.ಸಿ.ಕೃಷ್ಣ, ಚಾಮರಾಜು, ಕಸಾಪ ತಾ.ಕಾರ್ಯದರ್ಶಿ ಮಹಮದ್ ಷಫೀ, ಖಜಾಂಚಿ ಟಿ.ಎಸ್.ಹರೀಶ್, ಮುಖಂಡರಾದ ಅಣ್ಣಯ್ಯಶೆಟ್ಟಿ, ಅಪ್ಪಾಜಿಗೌಡ, ಎನ್.ಎಲ್.ಗಿರೀಶ್ ಹಾಜರಿದ್ದರು.