ಶೃಂಗೇರಿ ಮಠದಲ್ಲಿ ಸೂರ್ಯ ನಾರಾಯಣನಿಗೆ ವಿಶೇಷ ಪೂಜೆ

ಶೃಂಗೇರಿ: ಮಾಘ ಮಾಸದ ರಥಸಪ್ತಮಿ ದಿನವಾದ ಮಂಗಳವಾರ ಶ್ರೀಮಠದ ಜಗದ್ಗುರು ಶ್ರೀಭಾರತೀ ತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬೆಳಗ್ಗೆ 10.30ಕ್ಕೆ ಶ್ರೀ ವಿದ್ಯಾಶಂಕರ ದೇವಸ್ಥಾನದ ಹೊರಸುತ್ತಿನಲ್ಲಿರುವ ಸೂರ್ಯ ನಾರಾಯಣನಿಗೆ ಸೂರ್ಯ ಹೋಮ ನೆರವೇರಿಸಿ ಪೂಜೆ ಸಲ್ಲಿಸಿದರು. ನಂತರ ನೃಸಿಂಹಯಾಗದ ಮಂಟಪದಲ್ಲಿ ಏಕಚಕ್ರ ರಥಾರೂಢ ಆದಿತ್ಯನಿಗೆ ಪೂಜೆ ಸಲ್ಲಿಸಲಾಯಿತು. ಕಿರಿದಾದ ಒಂದು ಚಕ್ರದ ರಥದ ಉತ್ಸವ ನೆರವೇರಿತು.

ಮಧ್ಯಾಹ್ನ ತುಂಗಾನದಿ ತೀರದ ದಕ್ಷಿಣ ದಡದಲ್ಲಿರುವ ಶ್ರೀ ಸೂರ್ಯನಾರಾಯಣ ಸ್ವಾಮಿ ದೇವಾಲಯಕ್ಕೆ ತೆರಳಿ ವಿವಿಧ ಫಲಗಳನ್ನು ಸಮರ್ಪಿಸಿ ಪಂಚಾಮೃತ ಹಾಗೂ ಸೂರ್ಯಸೂಕ್ತ ಅಭಿಷೇಕಗಳನ್ನು ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದರು.

ಶ್ರೀಮಠದಲ್ಲಿ ರಥಸಪ್ತಮಿ ಆಚರಣೆಗೆ ಪೌರಾಣಿಕ ಹಿನ್ನೆಲೆ ಇದೆ. ಎಳ್ಮಗ್ಗೆ ಸೂರ್ಯದೇವಾಲಯದ ಸಮೀಪ ವಿಭಾಂಡಕ ಮಹರ್ಷಿಗಳ ಸಹೋದರ ಶ್ರೀ ತಿಲಭಾಂಡ ಮಹರ್ಷಿಗಳು ತಪಸ್ಸು ಮಾಡುತ್ತಿದ್ದರು. ಇಲ್ಲಿ ಹರಿಯುವ ತುಂಗಾನದಿಗೆ ಆದಿತ್ಯ ತೀರ್ಥ ಎಂಬ ಹೆಸರಿದೆ.