ಜಿಲ್ಲಾ ಮಟ್ಟದ ಯುವಜನೋತ್ಸವ 14ರಂದು

ಹಾವೇರಿ: ಪ್ರಸಕ್ತ 2018-19ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವದ ಆಯ್ಕೆ ಸ್ಪರ್ಧೆಗಳನ್ನು ಜಿಲ್ಲಾಡಳಿತ, ಜಿ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ನ. 14ರಂದು ಬೆಳಗ್ಗೆ 10 ಗಂಟೆಗೆ ರಾಣೆಬೆನ್ನೂರಿನ ಉಮಾಶಂಕರ ನಗರದಲ್ಲಿರುವ ಪಂಚಮುಖಿ ಮಾರುತಿ ದೇವಸ್ಥಾನದ ಸಭಾಭವದಲ್ಲಿ್ಲ ಏರ್ಪಡಿಸಲಾಗಿದೆ.

ರಾಜ್ಯಮಟ್ಟದ ಯುವಜನೋತ್ಸವ ಸ್ಪರ್ಧೆಗೆ ಜಿಲ್ಲೆಯ ಸಾಂಸ್ಕೃತಿಕ ತಂಡಗಳನ್ನು ಕಳುಹಿಸಿ ಕೊಡಬೇಕಾಗಿರುವುದರಿಂದ, ಜಿಲ್ಲಾಮಟ್ಟದ ಯುವಜನೋತ್ಸವ ಸ್ಪರ್ಧೆಗಳ ಆಯ್ಕೆಯನ್ನು 9 ವಿಭಾಗಗಳಲ್ಲಿ ನಡೆಸಲಾಗುವುದು. ಇದರಲ್ಲಿ ಭಾಗವಹಿಸುವ ಯುವಕ, ಯುವತಿಯರು 15ರಿಂದ 29 ವರ್ಷ ವಯೋಮಿತಿ ಒಳಗಿದ್ದು, ಗ್ರಾಮೀಣ ಪ್ರದೇಶದವರು, ನಗರ ಪ್ರದೇಶದವರು ಹಾಗೂ ಕಾಲೇಜ್​ನ ಯುವಕ, ಯುವತಿಯರು ಭಾಗವಹಿಸಬಹುದು.

ಶಾಸ್ತ್ರೀಯ ನೃತ್ಯ(ಭರತನಾಟ್ಯ, ಒಡಿಸ್ಸಿ, ಮಣಿಪುರಿ, ಕೂಚುಪಡಿ, ಕಥಕ್), ಶಾಸ್ತ್ರೀಯವಾದ್ಯ(ತಬಲಾ, ಸಿತಾರ್, ಕೊಳಲು, ವೀಣೆ, ಮೃದಂಗ), ಹಾರ್ಮೋನಿಯಂ, ಗಿಟಾರ್, ಶಾಸ್ತ್ರೀಯ ಗಾಯನ(ಕರ್ನಾಟಕ ಸಂಗೀತ ಹಾಗೂ ಹಿಂದುಸ್ತಾನಿ ಸಂಗೀತ), ಆಶುಭಾಷಣ(ಹಿಂದಿ ಅಥವಾ ಇಂಗ್ಲಿಷ್​ನಲ್ಲಿ ಮಾತ್ರ) ಹಾಗೂ ಏಕಾಂಕ ನಾಟಕ (ಹಿಂದಿ ಅಥವಾ ಇಂಗ್ಲಿಷ್​ನಲ್ಲಿ ಮಾತ್ರ), ಜಾನಪದಗೀತೆ(ಚಲನಚಿತ್ರ ಗೀತೆಗಳಿಗೆ ಅವಕಾವಿರುವುದಿಲ್ಲ) ಜಾನಪದ ನೃತ್ಯಗಳ ಸ್ಪರ್ಧೆಗಳು ಜರುಗಲಿವೆ.

ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ವಾಸಸ್ಥಾನ ಮತ್ತು ವಯಸ್ಸಿನ ದೃಢೀಕರಣವನ್ನು ಹಾಜರುಪಡಿಸಬೇಕು. ಜಿಲ್ಲೆಯ ನಿವಾಸಿಗಳಾಗಿರುವವರಿಗೆ ಮಾತ್ರ ಸ್ಪರ್ಧೆಗಳಲ್ಲಿ ಅವಕಾಶ ನೀಡಲಾಗುವುದು. ಜಿಲ್ಲಾಮಟ್ಟದಲ್ಲಿ ಆಯ್ಕೆಗೊಂಡವರ ಛಾಯಾಚಿತ್ರ ಮತ್ತು ಪೂರ್ಣ ವಿವರಗಳನ್ನು ಒಳಗೊಂಡ ಗುರುತಿನ ಪತ್ರವನ್ನು ಸಹಾಯಕ ನಿರ್ದೇಶಕರು, ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಹಾವೇರಿ ಇವರಿಗೆ ಸಲ್ಲಿಸಬೇಕು.

ಜಿಲ್ಲೆಯಿಂದ ಒಂದೇ ತಂಡ ಸತತವಾಗಿ ಬಹುಮಾನ ಪಡೆದು, ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗೆ ತೆರಳುತ್ತಿರುವ ಪ್ರಕರಣಗಳಿರುವುದರಿಂದ ಒಂದು ಅಥವಾ ಎರಡು ಬಾರಿ ಒಂದು ಸ್ಪರ್ಧೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದವರಿಗೆ ಮುಂದಿನ ಮೂರು ವರ್ಷ ಆ ವಿಭಾಗದ ಸ್ಪರ್ಧೆಯಲ್ಲಿ ಪ್ರವೇಶ ನಿರ್ಭಂದಿಸಲಾಗಿದೆ. ಯುವಜನೋತ್ಸವದ ನಿಯಮಾವಳಿಗಳನ್ನು ಅದರಲ್ಲೂ ಮುಖ್ಯವಾಗಿ ಜಾನಪದ ನೃತ್ಯ ಸ್ಪರ್ಧೆಯ ನಿಯಮಗಳನ್ನು ತಜ್ಞರಿಂದ ವಿಮರ್ಶೆಗೊಳಪಡಿಸಿ ಪ್ರತಿಯೊಂದು ಸ್ಪರ್ಧೆಗೆ ಇದರಲ್ಲಿ ನೀಡಿರುವ ಮಾರ್ಗದರ್ಶಿ ನಿಯಮಗಳನ್ನು ಅಳವಡಿಸಲಾಗಿದೆ. ಸ್ಪರ್ಧಾಳುಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಜಿಲ್ಲಾಮಟ್ಟದ ಯುವಜನೋತ್ಸವದ ಆಯ್ಕೆ ಸ್ಪರ್ಧೆಯಲ್ಲಿ ಆಯ್ಕೆಯಾದವರನ್ನು ರಾಜ್ಯಮಟ್ಟದ ಯುವಜನೋತ್ಸವದ ಸ್ಪರ್ಧೆಗೆ ಜಿಲ್ಲೆಯಿಂದ ಕಳುಹಿಸಿ ಕೊಡಲಾಗುವುದು. ಸ್ಪರ್ಧಾಳುಗಳಿಗೆ ಹಾವೇರಿಯಿಂದ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಹೋಗಿ ಬರುವ ಪ್ರಯಾಣಭತ್ಯೆಯನ್ನು ನೀಡಲಾಗುವುದು.

ಹೆಚ್ಚಿನ ವಿವರಗಳಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ ಹಾವೇರಿ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08375-232070/232443 ಮೂಲಕ ಸಂರ್ಪಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೇಷಭೂಷಣ ಸ್ಪರ್ಧಾಳುಗಳದ್ದೇ: ಯುವಜನೋತ್ಸವ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಅವಶ್ಯಕ ವೇಷಭೂಷಣಗಳನ್ನು ಹಾಗೂ ಸಂಗೀತ ಉಪಕರಣಗಳನ್ನು ಸ್ಪರ್ಧಾಳುಗಳೇ ತರಬೇಕು. ಭಾಗವಹಿಸುವ ಸ್ಪರ್ಧಾಳುಗಳಿಗೆ ಊಟೋಪಹಾರವನ್ನು ನೀಡಲಾಗುವುದು. ಆಯ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲು ನ. 14ರಂದು ಬೆಳಗ್ಗೆ 10 ಗಂಟೆಗೆ ಪಂಚಮುಖಿ ಮಾರುತಿ ದೇವಸ್ಥಾನದ ಸಭಾಭವನ, ಉಮಾಶಂಕರ ನಗರ ರಾಣೆಬೆನ್ನೂರಿನಲ್ಲಿ ವರದಿ ಮಾಡಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಬೇಕು.