More

    ಪೌರಕಾರ್ಮಿಕರಿಗೆ ನೀಡಲು ನಿವೇಶನ ಗುರುತಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

    ಮಂಡ್ಯ: ಅರ್ಹ ಪೌರಕಾರ್ಮಿಕರಿಗೆ ನಿವೇಶನ ನೀಡಲು ಸ್ಥಳೀಯ ಸಂಸ್ಥೆಗಳು ಸ್ಥಳ ಗುರುತಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
    ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮ್ಯಾನ್ಯುಯಲ್ ಸ್ಕಾೃವೆಂಜರ್ ವೃತ್ತಿ ನಿಷೇಧ ಮತ್ತು ಪೂರ್ಣ ವಸತಿ ಕಾಯ್ದೆ-2013ರ ಮತ್ತು ನಿಯಮ-2013ರ ಅನುಷ್ಠಾನಗೊಳಿಸುವ ಸಂಬಂಧ ಜಿಲ್ಲಾಮಟ್ಟದ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀರಂಗಪಟ್ಟಣ ಪುರಸಭೆ ವ್ಯಾಪ್ತಿಯ ಅವಿಭಕ್ತ ಕುಟುಂಬಕ್ಕೆ ಸೇರಿದ ಪೌರಕಾರ್ಮಿಕರಿಗೆ ಈ ಹಿಂದೆ ನಿವೇಶನ ಅಥವಾ ವಸತಿ ಸೌಲಭ್ಯ ನೀಡಿದ್ದರೆ ಅವರ ಮಕ್ಕಳಿಗೆ ನೀಡುವ ಬಗ್ಗೆ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದರು.
    ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಸ್ಮಶಾನ ಭೂಮಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಾಮಫಲಕ ಅಳವಡಿಸುವುದರ ಜತೆಗೆ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಈ ಸಂಬಂಧ ಛಾಯಾಚಿತ್ರ ಸಹಿತ 15 ದಿನದೊಳಗೆ ವರದಿ ಸಲ್ಲಿಸಬೇಕು ಎಂದರು. ಡಿಸಿ ಪ್ರತಿಕ್ರಿಯಿಸಿ, ಸಾರ್ವಜನಿಕ ಸ್ಮಶಾನಗಳಲ್ಲಿ ಯಾವುದೇ ಶವಸಂಸ್ಕಾರವನ್ನು ತಡೆಯಲು ಸಾಧ್ಯವಿಲ್ಲ. ಒಂದು ವೇಳೆ ಇಂತಹ ಘಟನೆಗಳು ನಡೆದಲ್ಲಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.
    ಸಮಿತಿ ಸದಸ್ಯ ನಂಜುಂಡ ಮೌರ್ಯ ಮಾತನಾಡಿ, ಶ್ರೀರಂಗಪಟ್ಟಣ ಟೌನ್‌ನ ಪೌರಕಾರ್ಮಿಕ ಕಾಲನಿಯಲ್ಲಿ ಸ್ಮಶಾನಕ್ಕೆ ಹೋಗಲು ರಸ್ತೆ ನಿರ್ಮಿಸಿದ್ದು, ಕೆಲ ಸಾರ್ವಜನಿಕರು ಅಡ್ಡಿಪಡಿಸುತ್ತಿದ್ದಾರೆಂದು ಪ್ರಸ್ತಾಪಿಸಿದರು. ಇದಕ್ಕೆ ಪುರಸಭೆ ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ, ರಸ್ತೆಯನ್ನು ನಿರ್ಮಿಸಿದ ಬಗ್ಗೆ ಈ ಹಿಂದೆ ತಹಸೀಲ್ದಾರ್ ಮತ್ತು ಇತರೆ ಅಧಿಕಾರಿಗಳೊಡನೆ ಜಂಟಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಪ್ರಸ್ತುತದಲ್ಲಿ ಯಾವುದೇ ಅಡ್ಡಿಯಾಗುವುದಿಲ್ಲ ಎಂದರು.
    ಡಿಸಿ ಮಾತನಾಡಿ, ಜಿಲ್ಲೆಯಲ್ಲಿ ರಸ್ತೆ ಬದಿ ಹಾಗೂ ಕುಟೀರಗಳಲ್ಲಿ ಕೆಲಸ ಮಾಡುತ್ತಿರುವ ಚರ್ಮ ಕುಶಲಕರ್ಮಿಗಳನ್ನು ಗುರುತಿಸಿ ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಸರ್ಕಾರ/ನಿಗಮದಿಂದ ಸ್ವಯಂ ಉದ್ಯೋಗ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲು ಬ್ಯಾಂಕ್‌ನ ಅಧಿಕಾರಿಗಳು ಅನಗತ್ಯ ವಿಳಂಬ ಮಾಡುತ್ತಿದ್ದಾರೆನ್ನುವ ದೂರಿದೆ. ಆದ್ದರಿಂದ ಬಾಕಿ ಇರುವ ಪ್ರಕರಣಗಳಲ್ಲಿ ಕೂಡಲೇ ಸಾಲವನ್ನು ಮಂಜೂರು ಮಾಡುವಂತೆ ಸಂಬಂಧಪಟ್ಟ ಬ್ಯಾಂಕಿನ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿ ಸಮಸ್ಯೆಯನ್ನು ಬಗೆಹರಿಸಿ. ಈ ಸಂಬಂಧ ಮಾಹಿತಿಯನ್ನು ಮುಂದಿನ ಸಭೆಗೆ ನೀಡುವಂತೆ ಸೂಚಿಸಿದರು.
    ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಪಂ ಉಪ ಕಾರ್ಯದರ್ಶಿ(ಆಡಳಿತ) ಕೆ.ಆನಂದ್‌ಕುಮಾರ್, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಸಮಿತಿಯ ಸದಸ್ಯರಾದ ಕೃಷ್ಣಯ್ಯ, ರಾಘವೇಂದ್ರ, ಎನ್.ಆರ್.ಚಂದ್ರಶೇಖರ್, ಪ್ರಮೀಳಾ ಇತರರಿದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 23

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts