ಕೊಪ್ಪಳ: ನಿಕ್ಷೇಪ ಪತ್ತೆ ಭಾಗವಾಗಿ ತಾಲೂಕಿನ ಅರಸಿನಕೇರಿ ಗ್ರಾಮಕ್ಕೆ ಗುರುವಾರ ಸರ್ವೇಗೆ ತೆರಳಿದ ಅಧಿಕಾರಿಗಳಿಗೆ ಗ್ರಾಮಸ್ಥರು ಅಡ್ಡಿಪಡಿಸಿದ್ದಾರೆ. ತಮ್ಮೂರಲ್ಲಿ ಅಣು ಸ್ಥಾವರ ನಿರ್ಮಾಣಕ್ಕೆ ಸರ್ವೇಗೆ ಬಂದಿದ್ದಾರೆಂದು ಭಾವಿಸಿದ್ದು ಅವಡಕ್ಕೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ಗ್ರಾಮದಲ್ಲಿ ಅಣು ಸ್ಥಾವರಕ್ಕೆ 1200 ಎಕರೆ ಜಾಗ ಹುಡುಕಾಟ ನಡೆದಿತ್ತು. ಗಮನಕ್ಕೆ ಬಂದ ಗ್ರಾಮಸ್ಥರು ತಮ್ಮೂರಲ್ಲಿ ಯೋಜನೆ ಜಾರಿ ಮಾಡದಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಗುರುವಾರ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ನಿಕ್ಷೇಪ ಪತ್ತೆಗೆ ತೆರಳಿದ್ದರು. ತಮ್ಮೂರಲ್ಲಿ ಅಣು ಸ್ಥಾವರ ಸಂಬಂಧವೇ ಸರ್ವೇ ನಡೆಸುತ್ತಿದ್ದಾರೆಂದು ಭಾವಿಸಿದ ಗ್ರಾಮಸ್ಥರು ಗಾಡಿ ಅಡ್ಡಗಟ್ಟಿ ಅಡ್ಡಿಪಡಿಸಿದ್ದಾರೆ. ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ನಾವು ಅಣು ಸ್ಥಾವರದ ಸರ್ವೇಗೆ ಬಂದಿಲ್ಲ. ಬದಲಾಗಿ ಭೂಮಿಯಲ್ಲಿನ ಖನಿಜಗಳ ಲಭ್ಯತೆ ಸಮೀೆಗೆ ಆಗಮಿಸಿದ್ದಾಗಿ ಅಧಿಕಾರಿಗಳು ಸಮಜಾಯಿಷಿ ನೀಡಿದರೂ ಜನರು ಸ್ಪಂದಿಸಿಲ್ಲ. ಇದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ಅಧಿಕಾರಿಗಳು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ವಾಸ್ತವಾಂಶ ತಿಳಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ತಾವು ನಿಕ್ಷೇಪ ಪತ್ತೆ ಸರ್ವೇಗೆ ಆಗಮಿಸಿದ್ದಾಗಿ ಲಿಖಿತ ಹೇಳಿಕೆ ನೀಡಿದ ಮೇಲೆ ಗ್ರಾಮಸ್ಥರು ಸುಮ್ಮನಾದರು.
ಇತ್ತೀಚೆಗೆ ಡಿಸಿ ನಲಿನ್ ಅತುಲ್ ಸೂಚನೆ ಮೇರೆಗೆ ಕೊಪ್ಪಳ ತಹಸೀಲ್ದಾರ್ ಅರಸಿನಕೇರಿ ಭಾಗದಲ್ಲಿ ಅಣು ಸ್ಥಾವರಕ್ಕೆ 1200 ಎಕರೆ ಜಾಗ ಹುಡುಕಾಟ ನಡೆಸಿದ ಬಗ್ಗೆ ಪತ್ರ ಬರೆದಿದ್ದರು. ಇದು ಜನರಿಗೆ ತಿಳಿದು ವಿರೋಧ ವ್ಯಕ್ತವಾಗಿತ್ತು.