ಕೊಪ್ಪಳ: ನೇತಾಜಿ ಸುಭಾಷಚಂದ್ರಬೋಸ್ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ. ಅವುಗಳನ್ನು ನನಸಾಗಿಸಲು ನಾವೆಲ್ಲ ಶ್ರಮಿಸಬೇಕಿದೆ ಎಂದು ವಿದ್ಯಾರ್ಥಿ ಮುಖಂಡ ಗಂಗರಾಜ ಅಳ್ಳಳ್ಳಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಎಐಡಿವೈಒ, ಎಐಡಿಎಸ್ಒ ಹಾಗೂ ಎಐಎಂಎಸ್ಎಸ್ ಸಂಟನೆಗಳಿಂದ ಗುರುವಾರ ಹಮ್ಮಿಕೊಂಡಿದ್ದ ನೇತಾಜಿ ಸುಭಾಷಚಂದ್ರ ಬೋಸ್ ದಿನಾಚರಣೆಯಲ್ಲಿ ಮಾತನಾಡಿದರು.
ನೇತಾಜಿ ಆದರ್ಶಗಳು ಇಂದಿಗೂ ಪ್ರಸ್ತುತ. ಅವರ ಕನಸಿನ ಭಾರತದ ನಿಮಾರ್ಣ ಇಂದಿನ ವಿದ್ಯಾರ್ಥಿಗಳ ಜವಾಬ್ದಾರಿ. ಇದನ್ನು ನಾವೆಲ್ಲರೂ ಸಾಕಾರಗೊಳಿಸಬೇಕಿದೆ. ಅಧ್ಯಯನ ನಡೆಸಬೇಕು. ನೇತಾರರ ಬಗ್ಗೆ ಅರಿಯಬೇಕು. ಬೋಸ್ ಅವರ ಚಿಂತನೆ, ವಿಚಾರ, ಆದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದರು.
ಶಾರದಾ ಗಡ್ಡಿ ಮಾತನಾಡಿ, ಪ್ರಪಂಚದ ಇತಿಹಾಸದಲ್ಲಿಯೇ ವಿಶೇಷ ಎನಿಸುವ ಮಹಿಳಾ ರೆಜಿಮೆಂಟ್ ಸ್ಥಾಪಿಸಿದ ನೇತಾಜಿ, ಪುರುಷರಂತೆ ಮಹಿಳೆಯರೂ ಸ್ವತಂತ್ರ ಸಂಗ್ರಾಮದಲ್ಲಿ ಹೋರಾಡಬಲ್ಲರು ಎಂಬುದು ತೋರಿಸಿದರು. ಐಎನ್ಎ ಸ್ಥಾಪಿಸಿ ರಾಜಿ ರಹಿತ ಹೋರಾಟ ಮಾಡಿದರು. ಬ್ರಿಟಿಷರಲ್ಲಿ ಹೆದರಿಕೆ ಸೃಷ್ಟಿಸಿದ್ದರು. ದೇಶಕ್ಕೆ ಸ್ವಾತಂತ್ರ$್ಯ ದೊರೆಯುವಲ್ಲಿ ಅವರ ಪಾತ್ರ ಬಹುವಾಗಿದೆ ಎಂದರು ಹೇಳಿದರು.
ದೇವರಾಜ ಹೊಸಮನಿ ಮಾತನಾಡಿ, ಶೋಷಣಾ ರಹಿತ ಸಮಾಜ ಸ್ಥಾಪನೆ ನೇತಾಜಿ ಕನಸು. ಇಂದು ಪ್ರಾಮಾಣಿಕರು ಬೀದಿಯಲ್ಲಿ ಬದುಕುವಂತಾಗಿದೆ. ಶಿಕ್ಷಣ, ಆರೋಗ್ಯ ದುಬಾರಿಯಾಗಿದೆ. ನಿರುದ್ಯೋಗ ಹೆಚ್ಚಿದೆ ಎಂದರು.
ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್, ಸದಾಶಿವ ಮುನಿರಾಬಾದ್, ಸುಭಾನ್ ನೀರಲಗಿ ಇತರರಿದ್ದರು.