ಕೊಪ್ಪಳ: ನಮ್ಮದು ಅತಿ ಹೆಚ್ಚು ಯುವಕರನ್ನು ಹೊಂದಿದ ದೇಶ. ಯುವ ಜನತೆ ಹೆಚ್ಚೆಚ್ಚು ಉದ್ಯೋಗಿಗಳಾದಲ್ಲಿ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಕೌಶಲಾಭಿವೃದ್ಧಿ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಕೌಶಲ ರೋಜಗಾರ ಮೇಳ, ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
ಇಂದು ನಿರುದ್ಯೋಗಿಗಳ ಪ್ರಮಾಣ ಅಧಿಕವಾಗಿದೆ. ಸಮಸ್ಯೆ ನಿವಾರಣೆಗೆ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ಇದರಿಂದ ಯುವಕರಿಗೆ ಉದ್ಯೋಗವಕಾಶ ದೊರೆಯಲಿವೆ. ಉದ್ಯೋಗಿಯಾಗಬೇಕೆಂದವರು ಮೇಳಗಳಲ್ಲಿ ಭಾಗಿಯಾಗಿ. ನಿಮ್ಮ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ಆರಿಸಿಕೊಳ್ಳಿ. ಸದ್ಯ ವಿದ್ಯಾಭ್ಯಾಸದ ಜತೆಗೆ ಕೌಶಲ ಆಧಾರಿತ ಶಿಕ್ಷಣ ಪಡದರೆ ಉತ್ತಮ. ಮೇಳಗಳು ಯುವಕರಿಗೆ ಸಹಕಾರಿಯಾಗಿವೆ. ನಮ್ಮ ಭಾಗದಲ್ಲಿ ಕಾರ್ಖಾನೆಗಳು ಹೆಚ್ಚಿದ್ದು ಉದ್ಯೋಗವಕಾಶ ಹೆಚ್ಚಿವೆ. ಇನ್ನು ಕೃಷಿ, ತೋಟಗಾರಿಕೆ ಆಧಾರಿತ ಉದ್ಯಮಗಳಿಗೂ ಪ್ರೋತ್ಸಾಹವಿದೆ ಎಂದರು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾತನಾಡಿ, ಪ್ರತಿ ವರ್ಷ ಜಿಲ್ಲೆಯಲ್ಲಿ ಉದ್ಯೋಗಮೇಳ ಆಯೋಜಿಸಲಾಗುತ್ತಿದೆ. ಈ ವರ್ಷ 50&60 ಕಂಪನಿಗಳು ಭಾಗಿಯಾಗಿವೆ. 5 ಸಾವಿರಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇದ್ದು, ನಮ್ಮಲ್ಲಿ 2,594 ಯುವಕರು ಮಾತ್ರ ನೋಂದಣಿಯಾಗಿದ್ದಾರೆ. ನಮ್ಮ ಭಾಗದಲ್ಲಿ ತಾಂತ್ರಿಕ ಕೌಶಲ ಕೊರತೆ ಇದೆ. ಹೀಗಾಗಿ ಯುವಕರು ತಾಂತ್ರಿಕ ಕೌಶಲ ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಜೆ.ಎಸ್.ಡಬ್ಲೂ ತೋರಣಗಲ್ ಅಸೋಸಿಯೇಟ್ ಕಂಪನಿಗಳು, ಕಿಲೋರ್ಸ್ಕರ್ ೆರಸ್ ಇಂಡಸ್ಟ್ರೀಸ್ ಕೊಪ್ಪಳ, ಮುಕುಂದ್ ಸ್ಟಿಲ್, ದೊಡ್ಲಾ, ಎಲ್.ಐ.ಸಿ ಆಫ್ ಇಂಡಿಯಾ ಕೊಪ್ಪಳ, ಟೊಯೋಟಾ ಮೋರ್ಟಸ್ ಬೆಂಗಳೂರು, ಟೊಯೋಟಾ ಆಟೋ ಪಾರ್ಟ್ಸ್ ಬೆಂಗಳೂರು, ಹೊಂಡಾ ಮೋರ್ಟಸ್ & ಸ್ಕೂಟರ್ ಇಂಡಿಯಾ ಪ್ರೈ.ಲಿ. ಕೋಲಾರ, ಲಯಮ್ ಪ್ಲೆಕ್ಸಿ ಸಲೂಷನ್ಸ್ ಬೆಂಗಳೂರು ಹಾಗೂ ಹುಬ್ಬಳ್ಳಿ&-ಧಾರವಾಡ, ಕೋಲಾರ, ಕಾರವಾರ ಮುಂತಾದ ಜಿಲ್ಲೆಗಳಿಂದ 45 ಕಂಪನಿಗಳು ಭಾಗಿಯಾದವು.
ಮೇಳದಲ್ಲಿ 2,594 ಉದ್ಯೋಗಾಂಕ್ಷಿಗಳು ನೋಂದಣಿ ಮಾಡಿಕೊಂಡಿದ್ದು, 1,558 ಆಕಾಂಗಳು ಸಂದರ್ಶನ ನೀಡಿದರು. 569 ಜನರು ಉದ್ಯೋಗಕ್ಕೆ ಆಯ್ಕೆಯಾದರು. 690 ಜನರ ಶಾರ್ಟ್ ಲಿಸ್ಟ್ ಮಾಡಲಾಯಿತು.
ಉದ್ಯೋಗ ಪಡೆದ ಅಭ್ಯರ್ಥಿಗಳ ಪೈಕಿ ಪಲ್ಲವಿ, ಗುರುಮೂರ್ತಿ, ಕನಕರಾಯ ಎಂಬುವವರಿಗೆ ವೇದಿಕೆ ಮೇಲೆ ಸಾಂಕೇತಿಕವಾಗಿ ಜಾಬ್ ಆಫರ್ ಲೇಟರ್ ವಿತರಿಸಲಾಯಿತು.
ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ., ತಹಸೀಲ್ದಾರ್ ವಿಠ್ಠಲ್ ಚೌಗಲಾ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಗವಿಶಂಕರ, ಅಂಬಣ್ಣ, ಅಹಮದ್ ಹುಸೇನ್ ಇತರರಿದ್ದರು.