ಕೊಪ್ಪಳ: ಮಧ್ವನವಮಿ ಉತ್ಸವ ಅಂಗವಾಗಿ ನಗರದ ವಿವಿಧೆಡೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಕೊಪ್ಪಳ ಶ್ರೀ ರಾವೇಂದ್ರ ಮಠದಲ್ಲಿ ಒಂದು ವಾರ ವಿವಿಧ ಕಾರ್ಯಕ್ರಮಗಳು ನಡೆದವು. ಪಂಡಿತರ ಪ್ರವಚನ, ಭಕ್ತಿ ಸಂಗೀತ, ಸುಮಧ್ವ ವಿಜಯ ಪಾರಾಯಣ, ಪವಮಾನ ಹೋಮ ಜರುಗಿದವು. ಬಳಿಕ ಮಠದ ಪ್ರಾಂಗಣದಲ್ಲಿ ನಡೆದ ರಥೋತ್ಸವದಲ್ಲಿ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗಿಯಾದರು. ಪಂಡಿತ್ ಹನುಮೇಶಾಚಾರ್ಯ ಗಂಗೂರ ಅವರ ಪ್ರವಚನ, ಜಮಖಂಡಿಯ ಚಿನ್ಮಯ್, ಶಾಂಭವಿ ಜಗನ್ನಾಥ ದೇಸಾಯಿ ಅವರಿಂದ ಸಂಗೀತ ಕಾರ್ಯಕ್ರಮ ನೆರವೇರಿದವು. ಶುಕ್ರವಾರ ಸಂಜೆ ವೇದವ್ಯಾಸಚಾರ್ಯ ಜೋಶಿ ಹಲಗೇರಿ ಅವರಿಂದ ಪ್ರವಚನ ನಡೆಯಿತು.
ಬಜಾರ್ ಹನುಮಾನ್ ದೇವಸ್ಥಾನದಲ್ಲಿ ಗುರುವಾರ ಬೆಳಗ್ಗೆ 6 ಗಂಟೆಗೆ ವಾಯು ಸ್ತೋತ್ರ ಪಠಣ ಮತ್ತು ಪಂಚಾಮೃತ ಅಭಿಷೇಕ 8.30ಕ್ಕೆ ರಥೋತ್ಸವ ಜರುಗಿತು. ಜವಾಹರ ರಸ್ತೆ ಮಾರ್ಗವಾಗಿ ಆಜಾದ್ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಪ್ಯಾಟಿ ಈಶ್ವರ ದೇವಸ್ಥಾನದಿಂದ ಬಜಾರ ಹನುಮಾನ್ ದೇವಸ್ಥಾನವರೆಗೆ ಮೆರವಣಿಗೆ ಸಾಗಿತು. ಭಜನೆ, ವೇದ, ಮಂತ್ರ ಘೋಷ ಮೂಲಕ ಭಕ್ತರು ಭಾಗಿಯಾದರು. ಮಧ್ಯಾಹ್ನ 1.30ಕ್ಕೆ ತೀರ್ಥ, ಪ್ರಸಾದ ನೆರವೇರಿಸಲಾಯಿತು.