ಕೊಪ್ಪಳ: ಮಹಿಳೆಯರು ಸ್ವಾವಲಂಬಿಯಾಗಿ ದುಡಿದು ಜೀವನ ನಡೆಸಬೇಕು ಎಂದು ಎನ್‌ಆರ್‌ಎಲ್‌ಎಂನ ಯೋಜನೆಯ ಮೇಲ್ವಿಚಾರಕ ಮಾದೇಗೌಡ ಪೊಲೀಸ್‌ಪಾಟೀಲ್ ಹೇಳಿದರು.
ಹನುಮಸಾಗರ ಸಮೀಪದ ಹೂಲಗೇರಾ ಗ್ರಾಮದಲ್ಲಿ ಎನ್‌ಆರ್‌ಎಲ್‌ಎಂನ ಸಂಜೀವಿನಿ ಯೋಜನೆಯಡಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಸಿಕ ಸಂತೆಯಲ್ಲಿ ಮಾತನಾಡಿದರು. ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಆರ್ಥಿಕವಾಗಿ ಮುನ್ನಡೆಯಲು ಮಹಿಳಾ ಸಂಘಗಳು ಸಹಾಯಕವಾಗಿವೆ. ಜೀವನಜ್ಯೋತಿ ಸಂಜೀವಿನಿ ಮಹಿಳಾ ಸಂಘದ ಸದಸ್ಯರು ತಾವೇ ಸಿದ್ಧಪಡಿಸಿದ್ದ ರೊಟ್ಟಿ, ಸಿಹಿತಿನಿಸು, ಹಪ್ಪಳ, ಸಂಡಿಗೆ, ಶ್ಯಾವಗಿ, ಊದಬತ್ತಿ, ಬಟ್ಟೆಯ ಸಾಬೂನು, ಬಟ್ಟೆಗಳು ಹಾಗೂ ತರಕಾರಿಗಳನ್ನು ಸಂಜೀವಿನಿ ಮಾಸಿಕ ಸಂತೆಯಲ್ಲಿ ಪ್ರದರ್ಶನ ಹಾಗೂ ಮಾರಾಟದಲ್ಲಿ ಮೇಳದಲ್ಲಿ ಮಾರಾಟ ಮಾಡಿದರು. ಈ ಸಂತೆಯಲ್ಲಿ 15 ಸಂಜೀವಿನಿ ಸಂಘದ ಮಹಿಳೆಯರು ಭಾಗವಹಿಸಿದ್ದರು. ಅಂದಾಜು 45 ಸಾವಿರಕ್ಕೂ ಅಧಿಕ ವಹಿವಾಟನ್ನು ನಡೆಸಿದ್ದಾರೆ ಎಂದರು.
ಗ್ರಾಪಂ ಸದಸ್ಯೆ ರೇಣುಕಾ ಗೌಡರ, ಗ್ರಂಥಪಾಲಕ ಚಂದಪ್ಪ ಗುಡಿಮನಿ, ಗ್ರಾಪಂ ಕಾರ್ಯದರ್ಶಿ ಯಲ್ಲಪ್ಪ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಬಸಮ್ಮ ಬೆಳ್ಳಿಹಾಳ, ಕಾರ್ಯದರ್ಶಿ ದೀಪಾ ನಾಗೂರ, ಗ್ರಾಪಂ ಕೃಷಿ ಹಾಗೂ ಪಶು ಸಖಿಯರು, ಗ್ರಾಪಂ ಸದಸ್ಯರು, ಸಿಬ್ಬಂದಿ ಲಂಕೇಶ ಭಜಂತ್ರಿ, ಮಂಜು ಪೂಜಾರಿ ಇದ್ದರು.