ಕೊಪ್ಪಳ: ಹನುಮಸಾಗರ ಬಸ್ ನಿಲ್ದಾಣದಿಂದ ಇಳಕಲ್ ಪಟ್ಟಣಕ್ಕೆ ಸರಿಯಾಗಿ ಬಸ್ ಬಿಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆಯಿತು.
ಕಾಲೇಜಿಗೆ ತೆರಳಲು ಸರಿಯಾಗಿ ಬಸ್ಸುಗಳ ವ್ಯವಸ್ಥೆ ಇಲ್ಲ. ಇದರಿಂದಾಗಿ ತರಗತಿಗಳಿಗೆ ಸರಿಯಾಗಿ ತೆರಳಲು ಆಗುತ್ತಿಲ್ಲ. ಸರಿಯಾದ ಸಮಯಕ್ಕೆ ಬಸ್ಸುಗಳನ್ನು ಬಿಡುವಂತೆ ಇಳಕಲ್ ಹಾಗೂ ಗಜೇಂದ್ರಗಡ ಡಿಪೋ ಮ್ಯಾನೇಜರ್ ಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಹಾರಿಕೆ ಉತ್ತರ ನೀಡುತ್ತಿದ್ದಾರೆ.
ನಾವು ಹೊಸದಾಗಿ ಬಸ್ ಬಿಡಿ ಎನ್ನುತ್ತಿಲ್ಲ. ಇಲ್ಲಿನ ಬಸ್ ನಿಲ್ದಾಣದ ಟೈಮ್ ಟೇಬಲ್ ಪ್ರಕಾರ ಇಳಕಲ್ ಪಟ್ಟಣಕ್ಕೆ ತೆರಳಲು ಬೆಳಗ್ಗೆ 7 ಕ್ಕೆ, 7.15ಕ್ಕೆ, 7.15ಕ್ಕೆ ,7.15ಕ್ಕೆ, 9.30ಕ್ಕೆ, 8.45ಕ್ಕೆ, 9ಕ್ಕೆ, 9.30ಕ್ಕೆ ಬಸ್ ಗಳು ಬರಬೇಕು. ಆದರೆ, ಈ ಬಸ್ಸುಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಇದರಿಂದಾಗಿ ಕಾಲೇಜಿಗೆ ಹೋಗಲು ತುಂಬಾ ತೊಂದರೆ ಆಗುತ್ತಿದ್ದು, ಟೈಮ್ ಟೇಬಲ್ ನಲ್ಲಿ ಇರುವ ಸಮಯಕ್ಕೆ ಸರಿಯಾಗಿ ಬಸ್ಸುಗಳನ್ನು ಬಿಡುವಂತೆ ವಿದ್ಯಾರ್ಥಿಗಳಾದ ಪ್ರವೀಣ ಕುಮಾರ, ಮಲ್ಲಿಕಾರ್ಜುನ, ತಿಪ್ಪಣ್ಣ, ಸಂಗಮೇಶ, ಬಸವರಾಜ, ನಾಗರಾಜ, ಪಲ್ಲವಿ, ಪವಿತ್ರ, ವಿಶ್ವನಾಥ, ವಿಜಯ, ವಿರೇಶ, ರಮೇಶ, ರಮ್ಯಾ, ಸಂಗಮ್ಮ, ಮಂಜುಳಾ, ಪಾರ್ವತಿ, ಪ್ರತಿಭಾ, ಪ್ರಶಾಂತ, ಭೀಮವ್ವ, ಸ್ವಪ್ನ, ಸೌಮ್ಯಾ ಇತರರು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಧನುಂಜಯ ಹಿರೇಮಠ ವಿದ್ಯಾರ್ಥಿಗಳ ಮನಹೋಲಿಸದರು. ಮನವಿ ಸ್ವೀಕರಿಸಿದ ಬಳಿಕ ಮಾತನಾಡಿ, ವಿದ್ಯಾರ್ಥಿಗಳು ಸಲ್ಲಿಸಿದ ಮನವಿ ಪತ್ರವನ್ನು ಇಳಕಲ್, ಗಜೇಂದ್ರಗಡ ಹಾಗೂ ಕುಷ್ಟಗಿ ಡಿಪೋ ಮ್ಯಾನೇಜರ್ ಗೆ ಕಳಸಲಾಗುವುದು ಎಂದರು.