ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಘೋಷಿತ ರೈಲ್ವೆ ಯೋಜನೆಗಳನ್ನು ಮೊದಲು ಪೂರ್ಣಗೊಳಿಸುವ ಸಂಕಲ್ಪ ಮಾಡಿದ್ದೇವೆ. ಗದಗ&ವಾಡಿ ಯೋಜನೆಯೂ ಅದರಲ್ಲಿ ಒಂದು. ಈ ಭಾಗಕ್ಕೆ ಶ್ರೀವೇ ಒಂದೇ ಭಾರತ್ ರೈಲು ಸೇವೆ ಆರಂಭಿಸಲಾಗುವುದೆಂದು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.

ಪಟ್ಟಣದ ನೂತನ ರೈಲ್ವೆ ನಿಲ್ದಾಣ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ನನೆಗುದಿಗೆ ಬಿದ್ದಿದ್ದ ಎಲ್ಲ ಯೋಜನೆಗಳನ್ನು ಏಳು ಲಕ್ಷ ಕೋಟಿ ರೂ. ನಲ್ಲಿ ಮುಗಿಸಲಾಗುತ್ತಿದೆ. ಇಲಾಖೆ ಯಾರ ಪರವೂ ಅಲ್ಲ. ಹರಿವ ನೀರಿದ್ದಂತೆ. ರಾಜಕಾರಣಿಗಳು ಸೇರಿ ಎಲ್ಲ ವರ್ಗದ ಜನ ಓಡಾಡುತ್ತಾರೆ. ವಾಜಪೇಯಿ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಆದ್ಯತೆ ದೊರೆಯಿತು. ಮೋದಿ ಅವರು ಬಂದಮೇಲೂ ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವೇಗ ಪಡೆದಿದೆ. ಯುಪಿಎ ಅವಧಿಯಲ್ಲಿ ದಿನಕ್ಕೆ 4 ಕಿ.ಮೀ. ಹಳಿ ನಿರ್ಮಾಣವಾದರೆ, ನಾವು ಬಂದ ಮೇಲೆ 8 ಕಿ.ಮೀ. ನಿರ್ಮಾಣವಾಗುತ್ತಿದೆ. ಎಲ್ಲ ಮಾರ್ಗಗಳನ್ನು ಶೇ.100ರಷ್ಟು ವಿದ್ಯುದ್ದೀಕರಣಗೊಳಿಸಲಾಗುವುದು. ಯುಪಿಎ ರಾಜ್ಯದ ಯೋಜನೆಗಳಿಗೆ 680 ಕೋಟಿ ರೂ. ನೀಡಿದರೆ, ನಾವು ಏಳು ಸಾವಿರ ಕೋಟಿ ರೂ. ಕೊಡುತ್ತಿದ್ದೇವೆಂದು ತಿಳಿಸಿದರು.
ಶ್ರೀ ಸಿಂಧನೂರಿನಿಂದ ಹೊಸ ರೈಲು ಓಡಲಿದೆ. ಕನ್ನಡದಲ್ಲಿ ರೈಲ್ವೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದೇವೆ. ರಾಜ್ಯದ ಅನೇಕರು ರೈಲ್ವೆ ಸಚಿವರಾಗಿ ತಮ್ಮದೇ ಕೊಡುಗೆ ಕೊಟ್ಟಿದ್ದಾರೆ. ಗದಗ&ವಾಡಿ ಯೋಜನೆಯಡಿ ರಾಜ್ಯದ ಪಾಲಿನ 800 ಕೋಟಿ ರೂ. ಕೊಟ್ಟಲ್ಲಿ ಮೂರು ವರ್ಷದಲ್ಲಿ ಕಾಮಗಾರಿ ಮುಗಿಸಲಾಗುವುದು. ಗದಗ&ವಾಡಿಗೆ 549ಕೋಟಿ ರೂ., ಮುನಿರಾಬಾದ್&ಮೆಹಬೂಬ್ ನಗರ ಯೋಜನೆಗೆ 216 ಕೋಟಿ ರೂ. ಕೊಟ್ಟಿದ್ದೇವೆ. ಯಾದಗಿರಿ&-ಆಲಮಟ್ಟಿ, ಭದ್ರಾವತಿ-&ಚಿಕ್ಕ ಜಾಜೂರು, ಕೊಟ್ಟೂರು-&ಚಿತ್ರದುರ್ಗ ಲೈನ್ ಸರ್ವೆಗೆ ಆದೇಶವಾಗಿದೆ. ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳಂತೆ ಕೆಲಸ ಮಾಡಿದಲ್ಲಿ ಸುವರ್ಣಯುಗ ಆಗಲಿದೆ ಎಂದರು.
ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, 1996ರಲ್ಲಿ ನಾನು ಸಂಸದನಾಗಿದ್ದಾಗ ಮುನಿರಾಬಾದ್&-ಮೆಹಬೂಬ್ ನಗರ, ಗದಗ&ವಾಡಿ ರೈಲ್ವೆ ಯೋಜನೆ ಘೋಷಿಸಲಾಯಿತು. 2013&14ರಿಂದ ವೇಗ ಪಡೆಯಿತು. ರಾಜ್ಯ ಸರ್ಕಾರ ತನ್ನ ಪಾಲಿನ ಶೇ.50ರಷ್ಟು ಅನುದಾನ ಜತೆಗೆ ಸಂಪೂರ್ಣ ಭೂಸ್ವಾಧಿನ ಮಾಡಿಕೊಟ್ಟಿದೆ. ಕುಷ್ಟಗಿ&ಸುರಪುರ 165 ಕಿ.ಮೀ. ಕಾಮಗಾರಿಗೆ ಒಂದೇ ಬಾರಿಗೆ ಟೆಂಡರ್ ಕರೆಯಬೇಕು. ರಾಜ್ಯದ ಪಾಲಿನ ಅನುದಾನ ಕೊಡಿಸುವೆ. ರಾಜ್ಯಕ್ಕೆ ಈ ವರ್ಷ 7,500 ಕೋಟಿ ರೂ. ಕೊಟ್ಟಿದ್ದಿರಿ. ಹೆಚ್ಚಿನ ಅನುದಾನ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ವಿಪ ಸದಸ್ಯೆ ಹೇಮಲತಾ ನಾಯಕ, ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ, ಡಿಸಿ ನಲಿನ್ ಅತುಲ್, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕರಾದ ಕೆ.ಶರಣಪ್ಪ, ಅಮರೇಗೌಡ ಬಯ್ಯಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು, ಡಾ.ಬಸವರಾಜ ಕ್ಯಾವಟರ್, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಇತರರಿದ್ದರು.