ಕೊಪ್ಪಳ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸಿದ್ದ ರಸ್ತೆ ತಡೆ ಪ್ರತಿಭಟನೆ ಅಂಗವಾಗಿ ದಾಖಲಾದ ಪ್ರಕರಣವನ್ನು ಸರ್ಕಾರ ಹಿಂಪಡೆದ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾ ನ್ಯಾಯಾಲಯ ಪ್ರಕರಣ ಹಿಂಪಡೆದ ಬಗ್ಗೆ ಘೋಷಿಸಿತು. ವಿಷಯ ತಿಳಿದ ಅನ್ನದಾತರು ಸಂಭ್ರಮಿಸಿದರು.
2020ರಲ್ಲಿ ಕೇಂದ್ರದ ವಿರುದ್ಧ ದೆಹಲಿಯಲ್ಲಿ 13 ತಿಂಗಳ ಕಾಲ ಪ್ರತಿಭಟನೆ ನಡೆದಿತ್ತು. ಇದನ್ನು ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪದಾಧಿಕಾರಿಗಳು, ರೈತರು ಡಿಸಿ ಕಚೇರಿ ಎದುರು ರಸ್ತೆ ತಡೆ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಜಿಲ್ಲೆಯ 30 ರೈತರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ನಾಲ್ಕು ವರ್ಷ ರೈತರು ಜಿಲ್ಲಾ ನ್ಯಾಯಾಲಯಕ್ಕೆ ಅಲೆದಾಡಿದರು. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ರೈತರ ವಿರುದ್ಧದ ಪ್ರಕರಣ ಹಿಂಪಡೆವ ಭರವಸೆ ನೀಡಿತ್ತು. ಅದರಂತೆ 2024ರ ನವೆಂಬರ್ನಲ್ಲಿ ಸರ್ಕಾರ ಪ್ರಕರಣ ಹಿಂಪಡೆದಿದೆ. ಜ.7ರಂದು ನ್ಯಾಯಾಲಯಕ್ಕೆ ಹಾಜರಾದ ರೈತ ಮುಖಂಡರ ಮುಂದೆ ಕೊಪ್ಪಳದ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಪ್ರಕರಣವನ್ನು ಹಿಂಪಡೆದಿರುವುದಾಗಿ ಘೋಷಿಸಿದರು.
ಇದರಿಂದ ಹರ್ಷಗೊಂಡ ರೈತರು ರೈತ ಸಂಘದ ನಾಮ ಫಲಕಕ್ಕೆ ಮಾಲಾರ್ಪಣೆ ಮಾಡಿ ಹರ್ಷ ವ್ಯಕ್ತಪಡಿಸಿದರು. ಸಂದ ರಾಜ್ಯ ಕಾರ್ಯದರ್ಶಿ ನಜೀರಸಾಬ್ ಮೂಲಿಮನಿ ಮಾತನಾಡಿ, ಪ್ರಕರಣ ದಾಕಲಾಗಿ 4 ವರ್ಷ ಅಲೆದರೂ ನಮ್ಮ ಒಡನಾಡಿಗಳು ಬೇಸರ ಮಾಡಿಕೊಳ್ಳಲಿಲ್ಲ. ಎದೆಗುಂದಲಿಲ್ಲ. ದಂಡ ಪಾವತಿ, ತಪ್ಪೊಪ್ಪಿಗೆ ಬರೆದು ಕೊಡಲು ಮುಂದಾಗಲಿಲ್ಲ. ಇದು ನಿಜವಾದ ಹೋರಾಟ. ತಡವಾದರೂ ನಮಗೆ ಜಯ ಸಿಕ್ಕಿದೆ ಎಂದರು. ಪ್ರಮುಖರಾದ ಶಂಕರಗೌಡ ಪಾಟೀಲ್, ಮಹಾಂತಮ್ಮ ಪಾಟೀಲ್, ಆರ್.ಕೆ.ದೇಸಾಯಿ, ವೆಂಕಟೇಶ್ ಕುಲಕರ್ಣಿ, ಶರಣಯ್ಯ ಮುಳ್ಳೂರು ಮಠ, ರವಿ ಅರಿಯರ್, ವೀರೇಶ್ ಹಣವಾಳ, ಸುಂಕಪ್ಪ, ದೊಡ್ಡನಗೌಡ ಬಿಜಕಲ್, ಈರಣ್ಣ ಇಂದ್ರಗಿ, ಶಿವಪ್ಪ ಇಂದಿರಗಿ ಇತರರಿದ್ದರು.