ಕೊಪ್ಪಳ: ಲೋಕಸಭೆ ಚುನಾವಣೆ ಮತ ಎಣಿಕೆ ಜೂ.4ರಂದು ನಡೆಯಲಿದೆ. ಎಣಿಕೆ ಕೇಂದ್ರದಲ್ಲಿರುವ ಅಭ್ಯರ್ಥಿಗಳು ಹಾಗೂ ಚುನಾವಣಾ, ಮತ ಎಣಿಕೆ ಏಜೆಂಟ್ಗಳು ಎಣಿಕೆ ಪ್ರಕ್ರಿಯೆಗೆ ತೊಂದರೆ ಆಗದಂತೆ ಶಿಸ್ತು ಪಾಲಿಸಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚಿಸಿದರು.
ಮತ ಎಣಿಕೆ ಅಂಗವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದರು.
ಕೊಪ್ಪಳದ ಗವಿಸಿದ್ದೇಶ್ವರ ಕಲಾ, ವಾಣಿಜ್ಯ, ವಿಜ್ಞಾನ ಕಾಲೇಜಿನಲ್ಲಿ ಎಣಿಕೆ ನಡೆಯಲಿದೆ. ಬೆಳಗ್ಗೆ 7.30ಕ್ಕೆ ಭದ್ರತಾ ಕೊಠಡಿ ತೆರೆಯಲಾಗುವುದು. 8 ಗಂಟೆಗೆ ಎಣಿಕೆ ಆರಂಭವಾಗಲಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೆಬಲ್ ನಿಗದಿಪಡಿಸಲಾಗಿದೆ. ಆಯಾ ಕ್ಷೇತ್ರದ ಮತದಾರರ ಸಂಖ್ಯೆಗೆ ಅನುಗುಣವಾಗಿ ಎಣಿಕೆ ಸುತ್ತು ನಿಗದಿಯಾಗಲಿದೆ. ಅಭ್ಯರ್ಥಿಗಳು ತಮಗೆ ಅನುಕೂಲ ಎನಿಸಿದ ಏಜೆಂಟ್ಗಳನ್ನು ನೇಮಿಸಬಹುದು. ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ನಗರಸಭೆ ಸದಸ್ಯರೂ ಏಜೆಂಟ್ಗಳಾಗಲು ಅವಕಾಶವಿದೆ. ಎಣಿಕೆ ಏಜೆಂಟ್ ಅದೇ ಕ್ಷೇತ್ರದ ನಿವಾಸಿಯಾಗಿರಬೇಕು. ಪ್ರತಿ ಸುತ್ತಿನ ಕೊನೆಗೆ ಪ್ರತಿ ಅಭ್ಯರ್ಥಿ ಪಡೆದ ಮತಗಳ ಮಾಹಿತಿ ನೀಡಲಾಗುವುದು. ಎಣಿಕೆ ಸಿಬ್ಬಂದಿಗೆ ತೊಂದರೆ ಆಗದಂತೆ ನೀವೆಲ್ಲ ಸಹಕರಿಸಬೇಕೆಂದು ತಿಳಿಸಿದರು.
ಎಣಿಕೆ ಏಜೆಂಟ್ ನೇಮಕಾತಿಗೆ ನಮೂನೆ 18ರಲ್ಲಿ ದ್ವಿಪ್ರತಿ ಅರ್ಜಿ ಸಲ್ಲಿಸಿ. ಅವರಿಗೆ ಸಹಾಯಕ ಚುನಾವಣಾಧಿಕಾರಿಯಿಂದ ಭಾವಚಿತ್ರ ಇರುವ ಗುರುತಿನ ಚೀಟಿ ನೀಡಲಾಗುವುದು. ಗುರುತಿನ ಚೀಟಿ ಇಲ್ಲದಿದ್ದರೆ ಪ್ರವೇಶ ನಿರಾಕರಿಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪ್ರತ್ಯೇಕ ಬಣ್ಣದ ಪಾಸ್ ವಿತರಿಸಲಾಗುವುದು. ಏಜೆಂಟ್ ತಮಗೆ ನಿಗದಿಯಾದ ಟೇಬಲ್, ಕ್ಷೇತ್ರದ ಕೊಠಡಿ ಬಿಟ್ಟು ಬೇರೆಡೆ ತೆರಳುವಂತಿಲ್ಲ. ಶಿಸ್ತು ಪಾಲಿಸದಿದ್ದಲ್ಲಿ ಎಣಿಕೆ ಕೇಂದ್ರದಿಂದ ಹೊರಹಾಕಲಾಗುವುದು. ಸಿಂಧನೂರು, ಮಸ್ಕಿ, ಕುಷ್ಟಗಿ, ಕೊಪ್ಪಳ ವಿಧಾನಸಭಾ ಕ್ಷೇತ್ರಗಳಿಗೆ ನೆಲಮಹಡಿ, ಕನಕಗಿರಿ, ಗಂಗಾವತಿ, ಯಲಬುರ್ಗಾ, ಸಿರಗುಪ್ಪ ಕ್ಷೇತ್ರದ ಎಣಿಕೆ ಮೊದಲ ಮಹಡಿಯಲ್ಲಿ ನಡೆಯಲಿದೆ ಎಂದರು.
ಏಜೆಂಟ್ಗಳಿಗೆ ನಿಗದಿಪಡಿಸಿದ ಜಾಗದಲ್ಲಿ ಕುಳಿತುಕೊಳ್ಳಬೇಕು. ಎಣಿಕೆ ಪ್ರಕ್ರಿಯೆ ಮುಗಿಯುವವರೆಗೂ ತಾಳ್ಮೆಯಿಂದ ವರ್ತಿಸಬೇಕು. ಪೆನ್ನು ಹಾಗೂ ಹಾಳೆ ತರಲು ಅವಕಾಶವಿದೆ. ನೋಟ್ ಪ್ಯಾಡ್, ಪ್ರಿಸೈಡಿಂಗ್ ಅಧಿಕಾರಿ ನೀಡಿರುವ 17-ಸಿ ಮತಪತ್ರಗಳ ಲೆಕ್ಕದ ಪ್ರತಿಯನ್ನು ತೆಗೆದುಕೊಂಡು ಬರಬಹುದು. ಮತಯಂತ್ರಗಳನ್ನು ಭೌತಿಕವಾಗಿ ಮುಟ್ಟುವಂತಿಲ್ಲ. ಮೊಬೈಲ್ ತರುವಂತಿಲ್ಲ. ನೀರಿನ ಬಾಟಲ್, ಕತ್ತರಿ, ಚಾಕು ಅಥವಾ ಹರಿತ ವಸ್ತುಗಳು, ಲೈಟರ್, ಬೆಂಕಿ ಪೊಟ್ಟಣ ಹಾಗೂ ಇತರ ವಸ್ತುಗಳನ್ನು ತರುವಂತಿಲ್ಲ. ನಿಗದಿತ ಸ್ಥಳದಲ್ಲಿ ವಾಹನ ನಿಲ್ಲಿಸಬೇಕು. ಚುನಾವಣಾ ಆಯೋಗದ ಎಲ್ಲ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಾಕೀತು ಮಾಡಿದರು.
ಎಡಿಸಿ ಸಾವಿತ್ರಿ ಕಡಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಚುನಾವಣಾ ತಹಸೀಲ್ದಾರ್ ರವಿಕುಮಾರ್ ವಸ್ತ್ರದ್, ಜಿಲ್ಲಾ ಪೊಲೀಸ್ ಡಿಎಸ್ಬಿ ಘಟಕದ ಪಿಐ ನಾಗರಾಜ ಆರ್., ಚುನಾವಣಾ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಏಜೆಂಟರು ಇದ್ದರು.