ಮನುಷ್ಯನ ದುರಾಸೆಯಿಂದ ಅವನತ್ತಿಯತ್ತ ಭೂಮಿ

ಮೈಸೂರು: ಮನುಷ್ಯನ ದುರಾಸೆಯಿಂದ ಭೂಮಿ ಅವನತಿಯತ್ತ ಸಾಗಿದ್ದು, ಇದಕ್ಕೆ ಕಡಿವಾಣ ಹಾಕಿ ಭೂಮಿ ಸಂರಕ್ಷಣೆ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದು ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಎಸ್.ಕೆ.ಒಂಟಿಗೋಡಿ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಭೂ ದಿನಾಚರಣೆ, ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭೂಮಿ ಉಳಿಯಬೇಕಾದರೆ ಮೊದಲು ಮನುಷ್ಯ ತನ್ನ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಬೆಟ್ಟ, ಗುಡ್ಡಗಳಲ್ಲಿ ನಿವೇಶನ ಮಾಡಿ ಮನೆ ನಿರ್ಮಾಣ ಮಾಡುತ್ತಿರುವುದು ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತದೆ. ಇದರಿಂದ ಮಳೆ ಬಂದಾಗ ಬೆಟ್ಟ-ಗುಡ್ಡಗಳು ಕುಸಿಯುತ್ತವೆ. ಇದಕ್ಕೆ ಇತ್ತೀಚಿಗೆ ಕೊಡಗು ಹಾಗೂ ಕೇರಳದಲ್ಲಿ ನಡೆದ ಭೂ ಕುಸಿತವೇ ಸಾಕ್ಷಿ. ಇದರಿಂದ ಭೂ ನಾಶವಾಗುತ್ತದೆ ಎಂದು ಹೇಳಿದರು.

ರೈತರು ತಮ್ಮ ಗದ್ದೆಗಳಿಗೆ ವಿಷಪೂರಿತ ಗೊಬ್ಬರ ಹಾಗೂ ಕ್ರಿಮಿನಾಶಕ ಔಷಧ ಬಳಸುವುದರಿಂದ ಭೂಮಿ ಬಂಜರಾಗಿ ಪರಿವರ್ತನೆಯಾಗುತ್ತಿದೆ. ಇದರ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ವಿಜ್ಞಾನಿಗಳು ಸರಿಯಾದ ಮಾಹಿತಿ ನೀಡಬೇಕು ಎಂದರು. ಭೂಮಿಯು ಎಲ್ಲ ಜೀವರಾಶಿಗಳಿಗೆ ನೆಲೆ ನೀಡಿದೆ. ಭೂಮಿ ಇಲ್ಲದೆ ಯಾವ ಜೀವರಾಶಿಯು ಬದುಕಲಾರದು. ಅಂತಹ ಭೂಮಿಯನ್ನು ನಾಶ ಮಾಡುವುದನ್ನು ಮನುಷ್ಯ ನಿಲ್ಲಿಸಬೇಕು ಎಂದರು.

‘ಭೂಮಿ ರಕ್ಷಣೆ’ ಉಪನ್ಯಾಸ ನೀಡಿದ ಸುತ್ತೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಅರುಣ್ ಬಳಮಟ್ಟಿ, ಭೂಮಿ ಸಂರಕ್ಷಣೆಗೆ ನಾವೆಲ್ಲ ಒಂದಾಗಬೇಕು. ಪರಿಸರ ನಾಶವಾದರೆ ಮನುಷ್ಯನು ನಾಶವಾಗುತ್ತಾನೆ. ಇಂದಿನ ದಿನ ಶುದ್ಧ ನೀರು, ಗಾಳಿ ಸಿಗುತ್ತಿಲ್ಲ. ಮುಂದೆ ಕೆಲವೇ ವರ್ಷಗಳಲ್ಲಿ ಅಂತರ್ಜಲ ಕುಸಿತದಿಂದ ನಾವೆಲ್ಲ ಕಷ್ಟ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಂದು ಬೆಂಗಳೂರಿನ ಭೂ ಪ್ರದೇಶದ ಶೇ.77ರಷ್ಟು ಭಾಗದಲ್ಲಿ ಮನೆಗಳು ನಿರ್ಮಾಣವಾಗಿವೆ. ಅಲ್ಲಿ ಕೇವಲ ಶೇ.23ರಷ್ಟು ಮಾತ್ರ ಭೂ ಪ್ರದೇಶವಿದೆ. ಮುಂದಿನ 10 ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ 2 ಕೋಟಿ ಮೀರಲಿದೆ. ಹೀಗಾದರೆ ಕುಡಿಯಲು ನೀರು ಸಿಗದೆ ಅಲ್ಲಿನ ಜನತೆ ಪರದಾಡಬೇಕಾಗುತ್ತದೆ. ಪ್ಲಾಸ್ಟಿಕ್ ಬಳಕೆ ಹಾಗೂ ತ್ಯಾಜ್ಯ ವಸ್ತುಗಳು ನೀರಿಗೆ ಸೇರ್ಪಡೆಯಾಗುತ್ತಿದ್ದು, ಇದರಿಂದ ನೀರು ಇದ್ದರೂ ಅದನ್ನು ಕುಡಿಯಲು ಯೋಗ್ಯವಾಗಿಲ್ಲ. ಹೀಗೆ ಮಾಡಿದವರು ನಾವುಗಳೇ ಎಂದರು.

ಮನುಷ್ಯ ನೀರಿನ ಸಂರಕ್ಷಣೆ, ಮರಗಳ ರಕ್ಷಣೆ ಮಾಡಲು ಮುಂದಾಗಬೇಕು. ಹಾಗಾದರೆ ಮಾತ್ರ ಪ್ರಾಣಿಗಳು, ಮಾನವರು ಭೂಮಿ ಮೇಲೆ ಜೀವಿಸಬಹುದು. ಕೆಲವು ದೇಶಗಳಲ್ಲಿ ಇಬ್ಬನಿ ಹನಿ ಬೀಳುವುದನ್ನು ಸಹ ಸಂಗ್ರಹ ಮಾಡಿ ಉಪಯೋಗಿಸುತ್ತಾರೆ. ಇಂತಹ ಸ್ಥಿತಿ ನಮ್ಮ ದೇಶಕ್ಕೂ ಬರಬಹುದು. ಭೂಮಿ ನಮ್ಮೆಲ್ಲರನ್ನು ಸಂರಕ್ಷಿಸಲಿದೆ. ನಾವೂ ಅದನ್ನು ರಕ್ಷಿಸಬೇಕು ಎಂದರು. ಜಿಲ್ಲಾ ಪಂಚಾಯಿತಿ ಸಿಇಒ ಕೆ.ಜ್ಯೋತಿ, ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ.ದೇವಮಾನೆ, ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಹದೇವ್, ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕಿ ಪಿ.ಸ್ನೇಹಾ ಇದ್ದರು.

Leave a Reply

Your email address will not be published. Required fields are marked *