ಮಂಡ್ಯ: ಕೆರೆ ಕಟ್ಟೆಗಳು ರೈತರ ಜೀವನಾಡಿ. ಕೆರೆಗಳು ತುಂಬಿದರೆ ಕೃಷಿ ಪದ್ಧತಿಗಳನ್ನು ನಡೆಸಲು ಅನುಕೂಲವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆರೆಗಳ ಸುತ್ತ ಒತ್ತುವರಿ ತೆರವುಗೊಳಿಸಿದ ನಂತರ ಅದರ ಸುತ್ತ ಗಿಡಗಳನ್ನು ನೆಡಿ. ಪಕ್ಷಿಗಳು ಗೂಡು ಕಟ್ಟಿ ಆಹಾರ ಪಡೆಯುವ ಗಿಡಗಳನ್ನು ನೆಟ್ಟಿ ಬಳಸಿ ಎಂದರು.
ಉತ್ತಮ ಮಳೆಯ ಹಿನ್ನಲೆ ಬಿತ್ತನೆ ಕೂಡ ಚೆನ್ನಾಗಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆಯಾಗದಂತೆ ನೋಡಿಕೊಳ್ಳಿ. ಜಿಲ್ಲೆಯಲ್ಲಿ ಕೃಷಿ ಸರ್ವೆ ನಡೆಸಲು ಯಾವುದೇ ತೊಂದರೆಗಳಿಲ್ಲ. ಬೆಳೆ ಸರ್ವೇ ಶೇ.100ರಷ್ಟು ಆಗಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತೊಂದರೆಯಾಗದಂತೆ ಅನುಷ್ಠಾನಗೊಳ್ಳಬೇಕು. ಈ ಯೋಜನೆಯ ಕಾಮಗಾರಿಯ ನಿರಂತರ ಪರಿಶೀಲನೆಗೆ ಅಧಿಕಾರಿಗಳನ್ನು ನಿಯೋಜಿಸಿ. ಕುಡಿಯುವ ನೀರು ಎಲ್ಲೂ ಕಲುಷಿತವಾಗದಂತೆ ನೋಡಿಕೊಳ್ಳಬೇಕು ಎಂದರು.
ಎಸ್‌ಎಸ್‌ಎಲ್ಸಿ ಪರೀಕ್ಷೆಯ ಫಲಿತಾಂಶವನ್ನು ಉತ್ತಮ ಪಡಿಸಲು ಯೋಜನೆ ರೂಪಿಸಿ. ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಆತ್ಮವಿಶ್ವಾಸದೊಂದಿಗೆ ಪರೀಕ್ಷೆ ಎದುರಿಸಲು ಸಜ್ಜುಗೊಳಿಸಿ. ವಸತಿ ಯೋಜನೆಗೆ ಸಂಬಂಧಿಸಿದಂತೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಅನುದಾನ ಲಭ್ಯವಿದ್ದು, ಇದು ಪ್ರಗತಿಯಾಗಬೇಕಿದೆ. ಕಡಿಮೆ ಸಾಧನೆ ಮಾಡಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪಟ್ಟಿ ಮಾಡಿಕೊಂಡು ಪ್ರತಿದಿನ ಆನ್‌ಲೈನ್ ಸಭೆ ನಡೆಸಿ ನಿಗದಿತ ಗುರಿ ಸಾಧಿಸುವಂತೆ ಮಾಡಿ ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಅವರು ಲ್ಯಾಂಡ್, ಬೀಟ್, ಆಧಾರ್ ಸೀಡಿಂಗ್, ಬಗರ್ ಹುಕುಂ, ಗೃಹಲಕ್ಷ್ಮೀ ಯೋಜನೆಗಳ ಪ್ರಗತಿ ಹಾಗೂ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಕೋರ್ಟ್‌ಗಳಲ್ಲಿ ಬಾಕಿ ಇರುವ ಪ್ರಕರಣದ ಮಾಹಿತಿ ನೀಡಿದರು. ಜಿಪಂ ಸಿಇಒ ಶೇಖ್ ತನ್ವೀರ್ ಆಸ್ಿ ಅವರು ನರೇಗಾ, ಸ್ವಚ್ಛ ಭಾರತ್ ಮಿಷನ್, ಬಹುಗ್ರಾಮ ಕುಡಿಯುವ ನೀರು, ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ವಿವರ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.