ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ
ಗದಗ: ವ್ಯಕ್ತಿಯು ದೈನಂದಿನವಾಗಿ ಕ್ರಿಯಾಶೀಲತೆಯಿಂದ ಹಾಗೂ ಉತ್ಸಾಹದಿಂದ ಕಾರ್ಯನಿರ್ವಹಿಸಲು ದೈಹಿಕ ಹಾಗೂ ಮಾನಸಿಕ ಸದೃಢತೆ ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಗದಗ ಅವರಿಂದ ನಗರದ ಕೆಎಚ್ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ 2024 25 ನೇ ಸಾಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೈನಂದಿನ ಸರ್ಕಾರಿ ನೌಕರಿಯಲ್ಲಿ ಸಾರ್ವಜನಿಕ ಸೇವೆಯಲ್ಲಿರುವವರು ಸಂಯಮದಿಂದ ಹಾಗೂ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಣೆಗೆ ಮಾನಸಿಕ ಆರೋಗ್ಯವು ಪ್ರಮುಖವಾಗಿದೆ. ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ದಿನನಿತ್ಯದ ಜೀವನ ಶೈಲಿಯಲ್ಲಿ ದೈಹಿಕ ಕ್ರೀಡಾ ಚಟುವಟಿಕೆಯಿಂದ ಕೂಡಿರಬೇಕಾಗುತ್ತದೆ ಎಂದರು.
ಕ್ರೀಡಾಕೂಟದಲ್ಲಿ ಎಲ್ಲರೂ ಭಾಗವಹಿಸುವುದು ಮುಖ್ಯ ಸೋಲು ಗೆಲುವಲ್ಲ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು, ಉತ್ಸಾಹದಿಂದ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ನಮ್ಮ ದೈಹಿಕ ಆರೋಗ್ಯ ಸುಧಾರಿಸುವುದರೊಂದಿಗೆ ದೈನಂದಿನ ಕರ್ತವ್ಯ ನಿರ್ವಹಣೆಗೆ ಮನಸ್ಸು ಉತ್ಸುಕವಾಗುತ್ತದೆ ಹಲವಾರು ಕಾಯಿಲೆಗಳಿಂದ ನಮ್ಮ ದೇಹವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸರ್ಕಾರದಿಂದ ನೌಕರರ ಆರೋಗ್ಯ ಸುಧಾರಣೆಗೆ ಹಾಗೂ ಮಾನಸಿಕ ದೈಹಿಕ ಸದೃಢತೆಗೆ ಕ್ರೀಡಾ ಚಟುವಟಿಕೆಗಳನ್ನ ಹಮ್ಮಿಕೊಂಡು ಬರಲಾಗುತ್ತಿದ್ದು, ನೌಕರರು ಕೀಳರಿಮೆ ತೊರೆದು ಕ್ರೀಡಾಕೂಟದಲ್ಲಿ ಪಾಲ್ಗೊಂಡು, ತಮ್ಮ ಅಭಿವ್ಯಕ್ತಿ ಪ್ರದರ್ಶಿಸಬೇಕು ಎಂದರು.
ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಗೆಲವು ಸಾಧಿಸಿದವರು ರಾಜ್ಯಮಟ್ಟದಲ್ಲಿ ಪಾಲ್ಗೊಂಡು ಗದಗ ಜಿಲ್ಲೆಗೆ ಕೀರ್ತಿ ತರಬೇಕು. ಆ ಮೂಲಕ ಗದಗ ಜಿಲ್ಲೆ ಎಲ್ಲ ರಂಗದಲ್ಲಿಯೂ ಉತ್ತಮ ಪ್ರದರ್ಶನ ಕಾಣುವಂತಾಗಬೇಕು ಎಂದು ಕ್ರಿಡಾ ಪಟುಗಳಿಗೆ ಸ್ಪೂರ್ತಿ ಮಾತುಗಳನ್ನಾಡಿದರು.
ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರವಿ ಗುಂಜಿಕರ ಅವರು ಮಾತನಾಡಿ, ನೌಕರರ ಕ್ಷೇಮಾಭಿವೃದ್ಧಿಗೆ ಸಂಗವು ಸದಾ ನಿಮ್ಮೊಂದಿಗಿರುತ್ತದೆ ಎಂದರು. ಕ್ರೀಡೆಗಳಲ್ಲಿ ಹುಚ್ಚು ಉತ್ಸುಕತೆಯಿಂದ ಪಾಲ್ಗೊಳ್ಳುವ ಮೂಲಕ ನೌಕರ ಬಾಂಧವರು ಕ್ರೀಡಾ ಸ್ಪೂರ್ತಿ ಮೆರೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಉಪ ಕಾರ್ಯದರ್ಶಿ ಸಿ ಆರ್ ಮುಂಡರಗಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಮೇಶ ಪಾಟಿಲ, ಕ್ರೀಡಾಧಿಕಾರಿ ಶರಣು ಗೋಗೇರಿ ಸೇರಿದಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ನೌಕರರು ಉಪಸ್ಥಿತರಿದ್ದರು.