ಭಾಲ್ಕಿ: ಆಸ್ತಿ, ಅಂತಸ್ತು, ಬೆಳ್ಳಿ, ಬಂಗಾರ ಸೇರಿ ಕೂಡಿಟ್ಟ ಸಂಪತ್ತು ಕದಿಯಬಹುದು. ಆದರೆ, ಜ್ಞಾನ ಸಂಪತ್ತು ಯಾರಿಂದಲೂ ಕದಿಯಲು ಸಾಧ್ಯವಿಲ್ಲ ಎಂದು ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.
ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪ ಸಭಾಂಗಣದಲ್ಲಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಸಂಬಂಧಿತ ವಿದ್ಯಾಭಾರತಿ ಕರ್ನಾಟಕ ಬೀದರ್ ಜಿಲ್ಲೆ ಸಹಯೋಗದಡಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಶಿಕ್ಷಕ ವೃತ್ತಿ ಎಲ್ಲಕ್ಕಿಂತ ಪವಿತ್ರವಾದದ್ದು, ದೇಶದ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ಹೀಗಾಗಿ ಶಿಕ್ಷಕರಾದವರೂ ಶಿಕ್ಷಕ ವೃತ್ತಿಯನ್ನು ಎಂದಿಗೂ ಕೀಳರಿಮೆಯಿಂದ ನೋಡಬಾರದು ಎಂದು ಹೇಳಿದರು.
ಮಕ್ಕಳು ಶಿಕ್ಷಕರ ನಡೆಯನ್ನು ಅನುಸರಿಸುತ್ತಾರೆ. ಆದ್ದರಿಂದ ಶಿಕ್ಷಕರು ಉತ್ತಮ ಚಾರಿತ್ರ್ಯ, ನೈತಿಕ ಮೌಲ್ಯ ಮೈಗೂಡಿಸಿಕೊಳ್ಳಬೇಕು. ಮಕ್ಕಳಲ್ಲಿ ಅದ್ಭುತ ಪ್ರತಿಭೆ ಅಡಗಿದೆ. ಅದನ್ನು ಗುರುತಿಸುವ ಕೆಲಸ ಶಿಕ್ಷಕರು ಮಾಡಬೇಕು. ಎಲ್ಲ ಶಿಕ್ಷಕರು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡು ಮತ್ತಷ್ಟು ಜ್ಞಾನ ಸಂಪಾದಿಸಿಕೊಂಡು ಮಕ್ಕಳಿಗೆ ಪರಿಣಾಮಕಾರಿಯಾಗಿ ಬೋಧಿಸಬೇಕು ಎಂದು ಸಲಹೆ ನೀಡಿದರು.
ಖಡಕೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ಎಸ್.ಬಿ.ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರವೀಣ ಮುಗನೂರು ವಿಶೇಷ ಉಪನ್ಯಾಸ ನೀಡಿದರು. ಪ್ರಾಂತ ಕಾರ್ಯದರ್ಶಿ ವಸಂತ ಮಾಧವ ಮಂಗಳೂರು ಸಮಾರೋಪ ನುಡಿ ನುಡಿದರು.
ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭಗುಸಿಂಗ್ ಜಾಧವ್, ಶಿವಲಿಂಗ ಕುಂಬಾರ, ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ನ ಆಡಳಿತಾಧಿಕಾರಿ ಮೋಹನ ರೆಡ್ಡಿ, ಖಡ್ಕೇಶ್ವರ ವಿದ್ಯಾ ಸಂಸ್ಥೆಯ ಕೋಶಾಧ್ಯಕ್ಷ ಪ್ರಭುರಾವ ಧೂಪೆ ಇತರರಿದ್ದರು. ಶರಣು ಪಾಟೀಲ್ ಸ್ವಾಗತಿಸಿದರು. ಮುಖ್ಯಗುರು ಆನಂದ ಕಲ್ಯಾಣೆ ನಿರೂಪಣೆ ಮಾಡಿದರು. ರೇಕು ನಾಯಕ ವಂದಿಸಿದರು.