ಬಸವಾಪಟ್ಟಣ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪಾರದರ್ಶಕವಾಗಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಲಕ್ಷ್ಮಣ್ ಹೇಳಿದರು.
ಸಮೀಪದ ಶೃಂಗಾರ್ಬಾಗ್ ತಾಂಡಾದಲ್ಲಿ ಶನಿವಾರ ಯೋಜನೆಯ ಜ್ಞಾನವಿಕಾಸ ಕೇಂದ್ರದ ಅಡಿಯಲ್ಲಿ ನಿರ್ವಿುಸಿಕೊಟ್ಟ ವಾತ್ಸಲ್ಯ ಮನೆ ಉದ್ಘಾಟಿಸಿ ಮಾತನಾಡಿದರು.
ಜ್ಞಾನ ವಿಕಾಸ ಕೇಂದ್ರದ ಅಡಿಯಲ್ಲಿ ರಾಜ್ಯದಲ್ಲಿ 703 ಹಾಗೂ ಜಿಲ್ಲೆಯಲ್ಲಿ 21 ಮನೆ ನಿರ್ವಿುಸಿ ಫಲಾನುಭವಿಗಳಿಗೆ ನೀಡಲಾಗಿದೆ. ರಾಜ್ಯದಲ್ಲಿ 20 ಸಾವಿರ ಮತ್ತು ಜಿಲ್ಲೆಯಲ್ಲಿ 367 ಫಲಾನುಭವಿಗಳು ಯೋಜನೆಯಿಂದ 1 ಸಾವಿರ ರೂ. ಮಾಸಾಶನ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಸಂಘದ ಸದಸ್ಯರಿಗೆ ಬ್ಯಾಂಕಿನಿಂದ ಆರ್ಥಿಕ ನೆರವು ನೀಡುವ ಜತೆಗೆ ಸಬಲೀಕರಣ ಮಾಡುವುದು ಯೋಜನೆಯ ಉದ್ದೇಶವಾಗಿದೆ. ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಕೆಲವರು ಯೋಜನೆಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು, ಯಾರೂ ಕೂಡ ಇದಕ್ಕೆ ಕಿವಿಗೊಡಬೇಡಿ ಎಂದರು.
ಗ್ರಾಪಂ ಅಧ್ಯಕ್ಷ ಬಿ.ಜಿ.ಸಚಿನ್ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಎಲ್.ಜಿ. ಮಧುಕುಮಾರ್, ಯೋಜನೆಯ ತಾಲೂಕು ಯೋಜನಾಧಿಕಾರಿ ಸತೀಶ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ನಾಗವೇಣಿ, ಗ್ರಾಪಂ ಸದಸ್ಯ ಮಂಜನಾಯ್ಕ, ಸೇವಾ ಪ್ರತಿನಿಧಿಗಳಾದ ವೀಣಾ, ಶೇಖರ್, ಲೀಲಾವತಿ ಇತರರಿದ್ದರು.