ವಿಜಯಪುರ: ಐತಿಹಾಸಿಕ ಪ್ರವಾಸಿ ತಾಣ, ಸ್ಮಾರಕಗಳ ದರ್ಶನ ಮಾಡುವ ಮೂಲಕ ವಿದ್ಯಾರ್ಥಿಗಳು ಇತಿಹಾಸ, ಕಲೆ, ಸಂಸ್ಕೃತಿ, ಐತಿಹಾಸಿಕ ಸ್ಥಳಗಳ ಮಹತ್ವ ತಿಳಿದುಕೊಳ್ಳಲು ಹಾಗೂ ಜ್ಞಾನದ ಹರಿವು ಹೆಚ್ಚಿಸಿಕೊಳ್ಳಲು ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಕೆಎಸ್‌ಟಿಡಿಸಿಯಿಂದ ಶನಿವಾರ ಹಮ್ಮಿಕೊಂಡ 2024-25ನೇ ಸಾಲಿನ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮತನಾಡಿದರು.
ವಿದ್ಯಾರ್ಥಿಗಳು ತಾವು ಭೇಟಿ ನೀಡುವ ಸ್ಥಳಗಳ ಮಹತ್ವ, ಅಲ್ಲಿನ ಐತಿಹ್ಯ ತಿಳಿದುಕೊಂಡು, ತಮಗಾದ ಪ್ರವಾಸ ಅನುಭವದ ಪ್ರವಾಸ ಪ್ರಬಂಧ ಬರೆದು ತಮ್ಮ ಶಾಲಾ ಮುಖ್ಯೋಪಾಧ್ಯಯರಿಗೆ ಸಲ್ಲಿಸುವಂತೆಯೂ, ಅತ್ಯುತ್ತಮ ಮೂರು ಪ್ರವಾಸ ಕಥನದ ಪ್ರಬಂಧಗಳನ್ನು ಆಯ್ಕೆ ಮಾಡಿ, ಬಹುಮಾನ ವಿತರಿಸಲಾಗುವುದೆಂದು ಮಕ್ಕಳಿಗೆ ಸ್ಫೂರ್ತಿ ನೀಡಿದರು. ವಿದ್ಯಾರ್ಥಿ ಜೀವನದಲ್ಲಿ ಓದಿಗೆ ಮಹತ್ವ ನೀಡಬೇಕು. ಅಧ್ಯಯನಶೀಲತೆಯನ್ನು ರೂಢಿಸಿಕೊಳ್ಳಬೇಕು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಹೇಳಿದರು.
ಬದಾಮಿ, ಐಹೊಳೆ, ಪಟ್ಟದಕಲ್ಲು, ಟಿಬಿ ಡ್ಯಾಂ, ಹಂಪಿ, ಚಿತ್ರದುರ್ಗ, ಕೆಳದಿ, ಇಕ್ಕೇರಿ, ಜೋಗಫಾಲ್ಸ್, ಗೋಕರ್ಣ,ಮಿರ್ಜಾನ್ ಫೋರ್ಟ್, ಇಡಗುಂಜಿ, ಮುರುಡೇಶ್ವರ ಹಾಗೂ ಶಿರಸಿ ಪ್ರವಾಸಿ ತಾಣಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡಲಿದ್ದಾರೆ. ಪ್ರವಾಸದ ವೇಳೆ ಮಕ್ಕಳ ಆರೋಗ್ಯ, ಊಟ, ಉಪಹಾರ, ವಸತಿ, ಬಸ್ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಪ್ರವಾಸಿ ಕಿಟ್‌ಗಳಾದ ಟೀ ಶರ್ಟ್, ಕ್ಯಾಪ್, ಬ್ಯಾಗ್, ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಬೆಂಗಳೂರ ಕೆಎಸ್‌ಟಿಡಿಸಿ ಸಹಾಯಕ ವ್ಯವಸ್ಥಾಪಕ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಯಶವಂತರಾಯ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಜೆ. ಬಿರಾದಾರ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಸಿ.ಎಂ. ಕೋರೆ, ಜಗದೇವಿ ಕೆಂಬಾವಿ, ಅನಿಲಕುಮಾರ ಬಣಜಿಗೇರ ಮತ್ತಿತರರಿದ್ದರು.