More

    ಜಿಲ್ಲೆಯಲ್ಲಿ ಬಾಗಿಲು ಮುಚ್ಚಿದ ವಿಮೆ ಮಾಹಿತಿ ಕೇಂದ್ರ

    ಬ್ಯಾಡಗಿ: ತಾಲೂಕು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಮಾ ಮಾಹಿತಿ ಕೇಂದ್ರಗಳು ಬಾಗಿಲು ಮುಚ್ಚಿದ್ದು, ರೈತರಿಗೆ ತೊಂದರೆ ಉಂಟಾಗಿದೆ. ಜಿಲ್ಲಾಧಿಕಾರಿ ಅವರು ಕೂಡಲೇ ವಿಮೆ ಮಾಹಿತಿ ಕೇಂದ್ರ ತೆರೆಯಲು ಆದೇಶಿಸಬೇಕು ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದರು.

    ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2021-22ನೇ ಸಾಲಿನ ಬಹುತೇಕ ರೈತರ ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ಸಮರ್ಪಕವಾಗಿ ಬಿಡುಗಡೆಯಾಗಿಲ್ಲ. ಈ ಕುರಿತು ಹೋರಾಟ ತೀವ್ರಗೊಳಿಸಿದ ಬಳಿಕ ಶೇ. 90ರಷ್ಟು ರೈತರ ಖಾತೆಗಳಿಗೆ ಹಣ ಜಮೆಯಾಗಿದ್ದು, ಇನ್ನುಳಿದವರ ಪರದಾಟಕ್ಕೆ ಮುಕ್ತಿ ಸಿಗಲಿಲ್ಲ. 2022-23ನೇ ಸಾಲಿನ ವಿಮೆ ಹಣ ನೀಡುವಂತೆ ಚುನಾವಣೆಗೂ ಮುನ್ನವೇ ರೈತ ಸಂಘ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸಿತ್ತು. ಆಗ ತುರ್ತು ವಿಮೆ ಪರಿಹಾರ ಶೇ. 25ರಷ್ಟು ಮುಂಗಡವಾಗಿ ಬಿಡುಗಡೆ ಮಾಡಲು ಅವಕಾಶವಿರುವುದನ್ನು ವಿಮೆ ಕಂಪನಿ ಗಮನಕ್ಕೆ ತಂದಾಗ, ರೈತರಿಗೆ ಈವರೆಗೂ 79 ಕೋಟಿ ರೂ. (ಶೇ.80) ಹಣ ಜಮೆಯಾಗಿದೆ. ಬಳಿಕ ಚುನಾವಣೆ ನೆಪ ಹೇಳಿದ ಅಧಿಕಾರಿಗಳು, ವಿಮೆ ಕಂಪನಿಯವರು ಬಹುತೇಕ ರೈತರಿಗೆ ಪರಿಹಾರ ನೀಡದೆ ಬೆಂಗಳೂರಿನತ್ತ ತೆರಳಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ವಿಮೆ ಕೇಂದ್ರ ತೆರೆಯಬೇಕೆಂಬ ಆದೇಶವಿದ್ದರೂ ಕಂಪನಿ ಸಿಬ್ಬಂದಿ ಕಾರ್ಯನಿರ್ವಹಿಸದೆ, ಬರೀ ನಾಮಫಲಕ ಹಾಕಿದ್ದಾರೆ. ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಮೌನವಾಗಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

    ತಾಲೂಕು ಮಟ್ಟದಲ್ಲಿ ಕೃಷಿ ಇಲಾಖೆ ಕಚೇರಿ ಬಳಿ ವಿಮೆ ತುಂಬಿದ ರೈತರಿಗೆ ಮಾಹಿತಿ ನೀಡಲು ಕೇಂದ್ರ ತೆರೆಯಲಾಗಿತ್ತು. ಇಲ್ಲಿ ಸಾಫ್ಟ್​ವೇರ್ ಸಮಸ್ಯೆ ಇತ್ಯರ್ಥಪಡಿಸುವುದು, ವಿಮೆಯ ಹಣ ಕುರಿತು ಅಂಕಿ ಅಂಶ ನೀಡಲಾಗುತ್ತಿತ್ತು. ತಾಲೂಕು ಕೇಂದ್ರದಲ್ಲಿ ಕೇಂದ್ರ ತೆರೆಯಲು ರೈತ ಸಂಘದ ಒತ್ತಾಯಿಸಿದ ಹಿನ್ನೆಲೆಯಲ್ಲಿ ಕಂಪನಿಯವರು ನೆಪಮಾತ್ರಕ್ಕೆ ಮಾಹಿತಿ ಕೇಂದ್ರ ತೆರೆದಿದ್ದರು. ಕಾಟಾಚಾರಕ್ಕೆ ಎಂಬಂತೆ ಆಗೊಮ್ಮೆ, ಈಗೊಮ್ಮೆ ಎನ್ನುವಂತೆ ಸಿಬ್ಬಂದಿ ಬಾಗಿಲು ತೆರೆಯುತ್ತಿದ್ದರು. ಚುನಾವಣೆ ಕಾರಣವೊಡ್ಡಿ ಎಲ್ಲ ಸಿಬ್ಬಂದಿ ಬೆಂಗಳೂರಿನತ್ತ ಹೋಗಿದ್ದಾರೆ. ಈಗ ಕೇಂದ್ರಗಳ ಬಾಗಿಲು ಹಾಕಲಾಗಿದೆ. ಇನ್ನುಳಿದ ಶೇ. 20ರಷ್ಟು ರೈತರಿಗೆ ವಿಮೆ ಹಣ ಲಭ್ಯವಾಗಿಲ್ಲ. ಬೇರೆ ಬೇರೆ ಕಾರಣಗಳಿಂದ ಸ್ಥಗಿತಗೊಂಡಿರಬಹುದು ಎಂದು ಊಹಿಸಲಾಗಿದೆ ಎಂದರು.

    ರೈತ ಮುಖಂಡರಾದ ಚಿಕ್ಕಪ್ಪ ಛತ್ರದ, ಕಿರಣ ಗಡಿಗೋಳ, ಗಂಗಣ್ಣ ಎಲಿ ಇದ್ದರು.

    ನಯಾಪೈಸೆ ವಿಮೆ ಪರಿಹಾರ ಜಮೆಯಾಗದ ರೈತರ ಗತಿಯೇನು? ಈ ಕುರಿತು ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಸಹಾಯಕ ನಿರ್ದೇಶಕರನ್ನು ಕೇಳಿದರೂ ಸಮರ್ಪಕ ಉತ್ತರ ನೀಡುತ್ತಿಲ್ಲ. ಕೂಡಲೇ ಜಿಲ್ಲಾಧಿಕಾರಿ ಮಧ್ಯಸ್ಥಿಕೆ ವಹಿಸಿ ಜಿಲ್ಲೆಯ ವಿಮೆ ವಂಚಿತ ರೈತರಿಗೆ ನ್ಯಾಯ ಒದಗಿಸಬೇಕು.

    | ಮಲ್ಲಿಕಾರ್ಜುನ ಬಳ್ಳಾರಿ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts