ಮಂಡ್ಯ: ಜಿಲ್ಲಾ ಬ್ರಾಹ್ಮಣ ಸಭಾ ವತಿಯಿಂದ ಅಯೋಧ್ಯೆಯ ಶ್ರೀರಾಮಚಂದ್ರ ಮೂರ್ತಿ ಮರು ಪ್ರತಿಷ್ಠಾಪನಾ ಅಂಗವಾಗಿ ಶತಕೋಟಿ ರಾಮತಾರಕ ನಾಮಜರ ಮಹಾಯಜ್ಞ, ಶ್ರೀರಾಮತಾರಕ ಮಹಾಯಾಗ ಅ.24ರ ವಿಜಯ ದಶಮಿಯಿಂದಲೇ ಆರಂಭವಾಗಿದೆ ಎಂದು ಸಭಾದ ರಾಜ್ಯ ಉಪಾಧ್ಯಕ್ಷ ಡಾ.ಭಾನುಪ್ರಕಾಶ್ ಶರ್ಮ ತಿಳಿಸಿದರು.
ಜಿಲ್ಲೆಯಲ್ಲಿ ಶ್ರೀರಾಮಚಂದ್ರ ಪ್ರತಿಷ್ಠಾಪನಾ ದಿನದಂದು ಮಹಾಯಜ್ಞ ನಡೆಯಲಿದೆ. ಈ ಜಪಯಜ್ಞವು ಲೋಕಕಲ್ಯಾಣದ ಸಂಕಲ್ಪದಲ್ಲಿ ನಡೆಯಲಿದೆ. ಜಪ ಆರಂಭದ ದಿನ ಅನುಕೂಲ ಇರುವವರೆಲ್ಲ ಹತ್ತಿರದ ಶ್ರೀರಾಮ ದೇವಾಲಯ, ಆಂಜನೇಯ ದೇವಾಲಯಗಳಲ್ಲಿ ಹಿಂದು ಶ್ರದ್ಧಾ ಕೇಂದ್ರಗಳಲ್ಲಿ ಪ್ರಾರ್ಥಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇವಾಲಯಕ್ಕೆ ಆಗಮಿಸಲು ಸಾಧ್ಯವಿಲ್ಲದವರು ಸಂಘಟಕರ ಮೂಲಕ ಹೆಸರು ನೋಂದಾಯಿಸಿ ತಮ್ಮ ಮನೆಯಲ್ಲಿಯೇ ಜಪವನ್ನು ಆರಂಭಿಸಬಹುದು. ಪ್ರತಿದಿನದ ಜಪವನ್ನು ತಮ್ಮ ಮನೆಗಳಲ್ಲಿಯೇ ಮಡಬಹುದು. ಒಂದು ಮನೆಯಿಂದ ಎಷ್ಟು ಜನ ಬೇಕಾದರೂ ಜಪ ಮಾಡಬಹುದು. ಸ್ತ್ರೀ-ಪುರುಷರೆಂಬ ಭೇದ-ಭಾವವಿಲ್ಲದೆ ಎಲ್ಲ ವಯಸ್ಸಿನವರು ಜಪ ಮಾಡಬಹುದು. ಪ್ರತಿನಿತ್ಯ ಕನಿಷ್ಠ 108 ಜಪ ಮಾಡುವುದು ಉತ್ತಮ. ದಿನದ ಯಾವುದೇ ಸಮಯದಲ್ಲಿ ಜಪ ಮಾಡಬಹುದು. ಪ್ರತಿನಿತ್ಯ ಜಪ ಮಾಡಿದ ಸಂಖ್ಯೆಯನ್ನು ಬರೆದಿಟ್ಟುಕೊಂಡು ಕೊನೆಯಲ್ಲಿ ಒಟ್ಟಿಗೆ ಸಂಘಟಕರಿಗೆ ನೀಡುವುದು. ಅಯೋಧ್ಯೆಯಲ್ಲಿ ಶ್ರೀರಾಮದೇವರ ಮರು ಪ್ರತಿಷ್ಠೆಯ ದಿನದಂದು ಜಿಲ್ಲಾ, ತಾಲೂಕಿನಲ್ಲಿ ನಡೆಯುವ, ರಾಮತಾರಕ ಹವನದಲ್ಲಿ ಭಾಗವಹಿಸಿ ಜಪ ಸಮರ್ಪಣೆಗೊಳಿಸವಂತೆ ಮಾಹಿತಿ ನೀಡಿದರು.
ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಬಿ.ಪಿ.ಮಧುಸೂದನ್, ಗೋಪಾಲಕೃಷ್ಣ ಶೆಣೈ, ಟಿ.ಸದಾಶಿವಭಟ್, ಎಸ್.ಎಲ್.ಗೋಪಾಲ್, ಮಮತಾ, ಬೆಳ್ಳೂರು ಎಸ್.ಶ್ರೀಧರ್, ಪ್ರಸನ್ನಮಯ್ಯ, ಅನಂತರಾಮನ್ ಇದ್ದರು.