More

  ಜಿಲ್ಲಾ ಬಿಜೆಪಿಯಿಂದ ಒಗ್ಗಟ್ಟಿನ ಜಪ: ಗೆಲುವೇ ನಮ್ಮ ಗುರಿ ಎಂದ ಜೆಸಿಎಂ

  ತುಮಕೂರು: ವಿಧಾನ ಪರಿಷತ್ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಬಿಜೆಪಿ ಮುಖಂಡರು ಜಿಲ್ಲೆಯಲ್ಲಿ ಒಗ್ಗಟ್ಟಾಗಿದ್ದೇವೆ ಎಂದು ಜನರ ಮುಂದೆ ತೋರಿಸಿಕೊಳ್ಳಲು ಹರಸಾಹಸ ಪಡುತ್ತಿದ್ದು, ಬುಧವಾರ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ಎಲ್ಲ ಮುಖಂಡರು ಸುದ್ದಿಗೋಷ್ಠಿಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದರು.

  ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಮಂಗಳವಾರ ನಾಮಪತ್ರ ಸಲ್ಲಿಸುವಾಗ ಸಂಸದ ಜಿ.ಎಸ್.ಬಸವರಾಜು ಹಾಗೂ ಬಿಜೆಪಿ ಸಮಾವೇಶದಲ್ಲಿ ಬಿ.ಸುರೇಶ್‌ಗೌಡ ಗೈರಾಗಿದ್ದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಅವರು ಗೈರಾಗಲು ಕಾರಣವಿದ್ದು ಪಕ್ಷದ ಅನುಮತಿ ಪಡೆದೇ ಹೋಗಿದ್ದಾರೆ, ಈ ಗೊಂದಲಕ್ಕೆ ತೆರೆ ಎಳೆಯಲು ಮಾತನಾಡುತ್ತಿದ್ದೇವೆ ಎಂದರು.

  ರಾಜಕೀಯ ಸಮೀಕರಣದಲ್ಲಿ ಶತ್ರುವಿನ ಶತ್ರು ಮಿತ್ರ ಎಂದು ಪರಿಗಣಿಸಿ ಗೆದ್ದುಕೊಂಡು ಬಂದಿರುತ್ತೇವೆ, ಕೆ.ಎನ್.ರಾಜಣ್ಣ ಸಹಾಯ ಮಾಡಿರಬಹುದು. ಹಾಗೆಂದು ಅವರೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಪಕ್ಷ ನಮಗೆ ತಾಯಿ ಇದ್ದಂತೆ. ತಾಯಿಗೆ ಮೋಸ ಮಾಡುವವರು ನಾವಲ್ಲ, ನಾನಾಗಲೀ, ಸಂಸದ ಬಸವರಾಜು ಅವರಾಗಲೀ ಪಕ್ಷದ್ರೋಹದ ಕೆಲಸ ಮಾಡುವುದಿಲ್ಲ, ಅವಕಾಶವನ್ನೂ ನೀಡುವುದಿಲ್ಲ ಎಂದರು.
  ಐವರು ಶಾಸಕರು, ಇಬ್ಬರು ಎಂಪಿ ಇರುವ ಜಿಲ್ಲೆಯಲ್ಲಿ ನಾವ್ಯಾಕೆ ಬೇರೆ ಪಕ್ಷದ ಜತೆ ಒಳಒಪ್ಪಂದ ಮಾಡಿಕೊಳ್ಳಲಿ, ಗೆಲುವಿಗೆ ಇದಕ್ಕಿಂತ ಉತ್ತಮ ವಾತಾವರಣ ಇನ್ನೆಲ್ಲಿ ಸಿಗಲು ಸಾಧ್ಯ? ನಾವು ಗೆಲುವು ಪಡೆಯುವ ಉದ್ದೇಶದಿಂದಲೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇವೆ ಎಂದು ಟೀಕೆಗಳಿಗೆ ಉತ್ತರಿಸಿದರು.

  ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಜೆಡಿಎಸ್ ಮುಖಂಡರು ಮಾಡುವ ಕೆಟ್ಟ ರಾಜಕೀಯ ನಾವು ಜೀವನದಲ್ಲಿಯೇ ಮಾಡಿಲ್ಲ, ಜನಮತ ನೀಡಿದ್ದಾರೆ ಗೆದ್ದಿದ್ದೇನೆ, ತುಮಕೂರಿಗೆ ಹೇಮಾವತಿ ನೀರು ಕೊಡಲ್ಲ ಎಂಬ ಜೆಡಿಎಸ್ ಮುಖಂಡರ ಧೋರಣೆಯಿಂದ ಜಿಲ್ಲೆಯಲ್ಲಿ ನನಗೆ ಬೆಂಬಲ ನೀಡಿದ್ದಾರೆ ಎಂದು ಕಾಂಗ್ರೆಸ್ ಜತೆ ಒಳಮೈತ್ರಿ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದರು.
  ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಅಭ್ಯರ್ಥಿ ಲೋಕೇಶ್, ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಹೆಬ್ಬಾಕ, ಓಂಕಾರ್ ಇದ್ದರು.

  ದೇವೇಗೌಡರು ತುಮಕೂರಿನಲ್ಲಿ ಏಕೆ ಸೋತರು ಎಂಬುದನ್ನು ಕುಮಾರಸ್ವಾಮಿ ಅವರೇ ಗುಬ್ಬಿಯಲ್ಲಿ ಹೇಳಿದ್ದಾರೆ, ಶತ್ರುವಿನ ಶತ್ರು ಮಿತ್ರ ಎಂಬ ರಾಜಕೀಯ ಸಮೀಕರಣದಂತೆ ಲೋಕಸಭೆ ಚುನಾವಣೆಯಲ್ಲಿ ರಾಜಣ್ಣ ನಮಗೆ ಸಹಾಯ ಮಾಡಿರಬಹುದು, ಅವರು ಎಂಎಲ್‌ಸಿ ಚುನಾವಣೆ ಗೆಲ್ಲಲು ಹಿಂದೆ ನಾವು ಸಹಾಯ ಮಾಡಿದ್ದೇವೆ, ಹಾಗೆಂದು ಈ ಚುನಾವಣೆಯಲ್ಲಿ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿ ಯಾರೊಂದಿಗೂ ರಾಜೀ ಆಗಿಲ್ಲ, ಆಗುವುದಿಲ್ಲ.
  ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

  ಜೆಡಿಎಸ್ ಅಭ್ಯರ್ಥಿ ನಿನ್ನೆವರೆಗೂ ಎಲ್ಲಿದ್ದರು?
  ಜಿಲ್ಲೆಯಲ್ಲಿ ಕಣಕ್ಕಿಳಿಸಿರುವ ಜೆಡಿಎಸ್ ಅಭ್ಯರ್ಥಿಯ ಕೊಡುಗೆ ಏನು ಎಂಬುದನ್ನು ಕಣಕ್ಕಿಳಿಸಿರುವ ಮುಖಂಡರು ಜನರ ಮುಂದಿಡಬೇಕು, ಬಿಜೆಪಿ ಅಭ್ಯರ್ಥಿಗೆ ಅಡ್ರೆಸ್ ಇಲ್ಲ ಎಂದು ಜೆಡಿಎಸ್ ಶಾಸಕರು ಮಾಡಿದ ಟೀಕೆಗೆ ನಾವು ಉತ್ತರಿಸುವುದಿಲ್ಲ. ನಿನ್ನೆ, ಮೊನ್ನೆಯವರೆಗೂ ಕೆಐಡಿಬಿಯಲ್ಲಿ ಕೆಲಸದಲ್ಲಿದ್ದವರನ್ನು ಅಭ್ಯರ್ಥಿ ಮಾಡಿ ತಂದು ನಿಲ್ಲಿಸಿದ್ದಾರೆ, ಈ ಬಗ್ಗೆ ದೇವೇಗೌಡರು ಹೇಳಬೇಕು ಎಂದು ಜೆ.ಸಿ.ಮಾಧುಸ್ವಾಮಿ ಸವಾಲೆಸೆದರು. ಕೆಎಎಸ್ ಅಧಿಕಾರಿಯಾಗಿದ್ದವರನ್ನು ಕರೆತಂದು ಅಭ್ಯರ್ಥಿ ಮಾಡಿ ನಮ್ಮನ್ನು ಯಾವ ನೈತಿಕತೆ ಇಟ್ಟುಕೊಂಡು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

  ಮಾನ, ಮರ್ಯಾದೆ ಇದ್ದವರು ಮಾಡೊ ಕೆಲಸವೇನ್ರೀ?

  ಡಾ.ಜಿ.ಪರಮೇಶ್ವರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದುಕೊಂಡು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿದ್ದಾರೆ, ಕೊರಟಗೆರೆಗೆ 110 ಭವನಗಳನ್ನು ಕೊಟ್ಟು, ಚಿಕ್ಕನಾಯಕನಹಳ್ಳಿ, ಗುಬ್ಬಿಗೆ ಒಂದು, ಎರಡು ಕೊಟ್ಟರು ಏಕೆ ಎಂಬುದನ್ನು ಹೇಳಲಿ, ಮಾನ, ಮರ್ಯಾದೆ ಇದ್ದವರು ಮಾಡೋ ಕೆಲಸವೇನ್ರಿ ಅದು ಎಂದು ಸಚಿವ ಮಾಧುಸ್ವಾಮಿ ಹರಿಹಾಯ್ದರು.
  ಕೊರಟಗೆರೆಗೆ ಎಷ್ಟು ಮನೆ ಕೊಟ್ಟಿದ್ರು, ಗುಬ್ಬಿಗೆ ಎಷ್ಟು ಕೊಟ್ಟಿದ್ರು ಎಂಬುದನ್ನು ಹೇಳಲಿ, ಸಮ್ಮಿಶ್ರ ಸರ್ಕಾರದಲ್ಲಿ ಆರ್ಥಿಕ ಶಿಸ್ತು ಇಲ್ಲದೆ ಕೆಲವು ಕ್ಷೇತ್ರಗಳಿಗೆ ಮಾತ್ರ ಅನುದಾನ ಹಂಚಿದ್ದರು, ಅದನ್ನು ನಾವು ಸರಿಪಡಿಸುವ ಕೆಲಸ ಮಾಡಿದ್ದೇವೆ, ಈ ಬಗ್ಗೆ ಶಾಸನ ಸಭೆಯಲ್ಲಿಯೂ ಚರ್ಚೆಯಾಗಿದ್ದು ಆಗ ಮೌನವಾಗಿದ್ದ ಪರಮೇಶ್ವರ ಈಗ ಏಕೆ ಮಾತನಾಡ್ತಿದ್ದಾರೆ ಎಂದು ಪ್ರಶ್ನಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts